ADVERTISEMENT

ವಿಧಾನಸಭೆ ಚುನಾವಣೆಗೆ ಸಜ್ಜು: ಮೋದಿ ಕರೆ

ಪಕ್ಷವನ್ನು ಇನ್ನಷ್ಟು ಬಲಪಡಿಸಲು ಕ್ರಮ

​ಪ್ರಜಾವಾಣಿ ವಾರ್ತೆ
Published 31 ಮೇ 2014, 19:30 IST
Last Updated 31 ಮೇ 2014, 19:30 IST

ನವದೆಹಲಿ: ಮಹಾರಾಷ್ಟ್ರ, ಹರಿಯಾಣ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗೆ ಸಜ್ಜಾಗುವಂತೆ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಿಗೆ ಹೇಳಿದ್ದಾರೆ.

ಪ್ರಧಾನಿ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಸಲ ಪಕ್ಷದ ಪ್ರಧಾನ ಕಾರ್ಯದರ್ಶಿಗಳ ಜತೆ ಚರ್ಚಿಸಿದ ನರೇಂದ್ರ ಮೋದಿ, ಈ ವರ್ಷದ ಕೊನೆಗೆ ಮಹಾರಾಷ್ಟ್ರ, ಹರಿಯಾಣ, ಮುಂದಿನ ವರ್ಷ ಜಾರ್ಖಂಡ್‌, ಜಮ್ಮು– ಕಾಶ್ಮೀರ, ಬಿಹಾರ ಮತ್ತು 2016ರಲ್ಲಿ ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು, ಪುದು­ಚೇರಿ ಹಾಗೂ ಅಸ್ಸಾಂ ವಿಧಾನ­ಸಭೆ ಚುನಾವಣೆ ನಡೆಯಲಿದ್ದು, ಪಕ್ಷದ ಗೆಲುವಿಗೆ ದುಡಿಯಬೇಕೆಂದು ಸಲಹೆ ನೀಡಿದ್ದಾರೆ.

ಎಲ್ಲರ ನಿರೀಕ್ಷೆಗಳನ್ನು ಮೀರಿ ಜನ ಬಿಜೆಪಿಯನ್ನು ಗೆಲ್ಲಿಸಿದ್ದಾರೆ. ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಸರ್ಕಾರ ಮತ್ತು ಜನರ ನಡುವಿನ  ಕೊಂಡಿಯಾಗಿ  ಪಕ್ಷದ  ಮುಖಂಡರು  ಕೆಲಸ  ಮಾಡಬೇಕು.  ಆಡ­ಳಿತ ಉತ್ತಮ ಪಡಿಸಲು ಜನ ಹಾಗೂ ಬೆಂಬಲಿಗರು ಏನು ಸಲಹೆಗಳನ್ನು ನೀಡಲಿದ್ದಾರೆ, ಅವರಿಂದ ಸಲಹೆಗಳನ್ನು ಹೇಗೆ ಪಡೆಯಬೇಕು, ಅದಕ್ಕೆ ಏನು ವ್ಯವಸ್ಥೆ ಮಾಡಬೇಕೆಂದು ತಿಳಿಸುವಂತೆ ಪ್ರಧಾನಿ ಕೇಳಿದರು.ಬಿಜೆಪಿ ಪ್ರಧಾನ ಕಾರ್ಯದರ್ಶಿಗಳ ಜತೆ ಬೆಳಗಿನ ಉಪಾಹಾರ ಸಭೆ ನಡೆಸಿದ ಮೋದಿ ಒಂದು ಗಂಟೆ ಕಾಲ ಸಮಾ­ಲೋಚಿಸಿದರು.

ಕೆಳಹಂತದ ಕಾರ್ಯಕ­ರ್ತರ ಜತೆ ಸಂಪರ್ಕ ಇಟ್ಟುಕೊಳ್ಳುವ ಯತ್ನವಾಗಿ ಈ ಸಭೆ ನಡೆಸುತ್ತಿದ್ದಾರೆ. ಅನಿರೀಕ್ಷಿತ ಗೆಲು­ವಿನ ಬಳಿಕ ಪಕ್ಷವನ್ನು ಇನ್ನಷ್ಟು ಬಲ­ಪಡಿಸಬೇಕು ಎನ್ನುವುದು ಮೋದಿ ಅವರ ಆಶಯವಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬಿಜೆಪಿ ಅಧ್ಯಕ್ಷ ರಾಜನಾಥ್‌ ಸಿಂಗ್‌, ಉಪಾಧ್ಯಕ್ಷರಾದ ಉಮಾಭಾರತಿ, ಸ್ಮೃತಿ ಇರಾನಿ, ಪ್ರಧಾನ ಕಾರ್ಯದರ್ಶಿಗಳಾದ ಅನಂತ ಕುಮಾರ್‌, ತಾವರ್‌ಚಂದ್‌ ಗೆಹ್ಲೋಟ್‌, ಧರ್ಮೇಂದ್ರ ಪ್ರಧಾನ್‌, ಖಜಾಂಚಿ ಪಿಯೂಷ್‌ ಗೋಯಲ್‌, ವಕ್ತಾರರಾದ ಪ್ರಕಾಶ್‌ ಜಾವಡೇಕರ್‌ ಮತ್ತು ನಿರ್ಮಲಾ ಸೀತಾರಾಮನ್‌ ಸೇರಿ­ದಂತೆ ಅನೇಕರು ಸಚಿವರಾಗಿ ನೇಮಕ­ಗೊಂಡಿದ್ದು, ಪದಾಧಿಕಾರಿಗಳ ಸಮಿತಿ­ಯನ್ನು ಪುನರ್‌ರಚಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮೋದಿ ಕರೆದಿದ್ದ ಸಭೆಗೆ ಮಹತ್ವ ಬಂದಿದೆ.

ಮೋದಿ ಸಂಪುಟದಲ್ಲಿ ಗೃಹ ಸಚಿವ­ರಾಗಿ ನೇಮಕಗೊಂಡಿರುವ ಬಿಜೆಪಿ ಅಧ್ಯಕ್ಷ ರಾಜನಾಥ್‌ ಸಿಂಗ್‌ ಉತ್ತರಾಧಿ­ಕಾರಿ ಆಗಿ ನೇಮಕಗೊಳ್ಳಲು ಜೆ.ಪಿ. ನಡ್ಡಾ, ಅಮಿತ್‌ ಷಾ ಹಾಗೂ ಓಂ ಮಾಥೂರ್‌ ಅವರ ನಡುವೆ ತೀವ್ರ ಪೈಪೋಟಿ ನಡೆದಿದೆ.

ಬಿಜೆಪಿಯ ‘ಚಿಂತನಾ ಚಿಲುಮೆ’ ಆಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘವೂ ಪಕ್ಷವನ್ನು ಬಲಿಷ್ಠಗೊಳಿ­ಸು­ವಂತೆ ಹೇಳಿದೆ.1999ರಲ್ಲಿ ಅಟಲ್‌ ಬಿಹಾರಿ ಸರ್ಕಾ­ರಕ್ಕೆ ದೊಡ್ಡ ನಾಯಕರು ಸೇರ್ಪಡೆ ಆಗಿದ್ದರಿಂದ ಪಕ್ಷ ದುರ್ಬಲಗೊಂಡಿತು. ನಾಯಕರಿಗೆ ಕಾರ್ಯಕರ್ತರ ಜತೆ ಸಂಬಂಧ ಕಡಿದುಹೋಯಿತು. ಅದು ಪುನರಾವರ್ತನೆ ಆಗುವುದು ಬೇಡ ಎಂದು ಆರ್‌ಎಸ್‌ಎಸ್‌ ಕಿವಿಮಾತು ಹೇಳಿದೆ.

ಬಿಜೆಪಿ ಅಧ್ಯಕ್ಷ ರಾಜನಾಥ್‌ ಸಿಂಗ್‌, ಪ್ರಧಾನ ಕಾರ್ಯದರ್ಶಿಗಳಾದ ರಾಮ್‌ ಲಾಲ್‌, ಅಮಿತ್‌ ಷಾ, ನಡ್ಡಾ, ಧರ್ಮೇಂದ್ರ ಪ್ರಧಾನ್‌,  ಅನಂತ ಕುಮಾರ್‌, ಮುರಳೀಧರ ರಾವ್‌, ವರುಣ್‌ ಗಾಂಧಿ, ರಾಜೀವ್‌ ಪ್ರತಾಪ್‌ ರೂಡಿ ಮತ್ತು ತಾವರ್‌ಚಂದ್‌ ಗೆಹ್ಲೋಟ್‌ ಸೇರಿದಂತೆ ಅನೇಕ ಮುಖಂಡರು ಪ್ರಧಾನಿ ಕರೆದಿದ್ದ  ಸಭೆ­ಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.