ADVERTISEMENT

ವಿವರಣೆ ಕೋರಿ ಖಾತೆದಾರರಿಗೆ ಪತ್ರ

ನೋಟು ರದ್ದತಿ ಬಳಿಕ ಶಂಕಾಸ್ಪದ ಠೇವಣಿ: ಮಾಹಿತಿ ಕೊಟ್ಟವರು 7ಲಕ್ಷ ಜನ ಮಾತ್ರ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2017, 19:30 IST
Last Updated 17 ಫೆಬ್ರುವರಿ 2017, 19:30 IST
ಉರ್ಜಿತ್‌
ಉರ್ಜಿತ್‌   
ನವದೆಹಲಿ: ಗರಿಷ್ಠ ಮುಖಬೆಲೆಯ ನೋಟು ರದ್ದತಿಯ ನಂತರ ಬ್ಯಾಂಕ್‌ ಖಾತೆಗಳಲ್ಲಿ ಭಾರಿ ಮೊತ್ತದ ಹಣ ಜಮೆ ಮಾಡಿದವರಿಗೆ ಪತ್ರ ಬರೆದು ವಿವರಣೆ ಕೋರಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
 
ಸುಮಾರು 18 ಲಕ್ಷ ಮಂದಿ ₹4.5 ಲಕ್ಷ ಕೋಟಿಗೂ ಹೆಚ್ಚು ಹಣ ಜಮೆ ಮಾಡಿದ್ದಾರೆ. ಈ ಖಾತೆಗಳನ್ನು ಪರಿಶೀಲಿಸಿದ್ದ ಇಲಾಖೆ ವಿವರಣೆ ಕೊಡುವಂತೆ ಖಾತೆದಾರರಿಗೆ ಎಸ್‌ಎಂಎಸ್‌ ಮತ್ತು ಇ–ಮೇಲ್‌ ಸಂದೇಶಗಳನ್ನು ಕಳುಹಿಸಿತ್ತು. ಈ ಸಂದೇಶಗಳಿಗೆ ಪ್ರತಿಕ್ರಿಯೆ ನೀಡದವರಿಗೆ ಪತ್ರ ಬರೆಯಲು ನಿರ್ಧರಿಸಲಾಗಿದೆ. 
ಸುಮಾರು ಏಳು ಲಕ್ಷ ಜನರಿಂದ ವಿವರಣೆ ಬಂದಿದೆ. ಉಳಿದವರು ತಾವು ಜಮೆ ಮಾಡಿರುವ ಹಣದ ಮೂಲವನ್ನು ತಿಳಿಸುವಂತೆ ಪತ್ರದ ಮೂಲಕ ಸೂಚಿಸಲಾಗುವುದು ಎಂದು ಇಲಾಖೆ ಹೇಳಿದೆ. 
 
ಇವರೆಲ್ಲರೂ ಕಪ್ಪುಹಣ ನಿರ್ಮೂಲನೆ ಅಭಿಯಾನದ ಭಾಗವಾಗಿ ಇ–ಫೈಲಿಂಗ್‌ ಪೋರ್ಟಲ್‌ನಲ್ಲಿ ಹಣದ ಮೂಲದ ಬಗ್ಗೆ ಮಾಹಿತಿ ನೀಡಬೇಕಿದೆ. ಸಂದೇಶ ಕಳುಹಿಸಲಾಗಿರುವ 18 ಲಕ್ಷ ಜನರ ಪೈಕಿ ಐದು ಲಕ್ಷ ಜನರು ಇ–ಫೈಲಿಂಗ್‌ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಸಿಕೊಂಡಿಲ್ಲ. 
 
ಅರ್ಥವ್ಯವಸ್ಥೆ ಚೇತರಿಕೆ ಶೀಘ್ರ–ಉರ್ಜಿತ್‌ ವಿಶ್ವಾಸ: ದೇಶದ ಅರ್ಥವ್ಯವಸ್ಥೆಯ ಬೆಳವಣಿಗೆ ದರ ಸಣ್ಣ ಪ್ರಮಾಣದಲ್ಲಿ ಇಳಿಕೆಯಾಗಿದ್ದರೂ, ಅದು ಶೀಘ್ರದಲ್ಲೇ ಮೊದಲಿನಂತಾಗಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಉರ್ಜಿತ್ ಪಟೇಲ್ ಹೇಳಿದ್ದಾರೆ.
 
ನೋಟು ರದ್ದತಿ ಮತ್ತು ಅದರ ನಂತರದ ಪರಿಸ್ಥಿತಿಯನ್ನು ಆರ್‌ಬಿಐ ಸೂಕ್ತವಾಗಿ ನಿಭಾಯಿಸಲಿಲ್ಲ ಎಂಬ ಟೀಕೆಗಳು ಕೇಳಿಬಂದಿದ್ದರೂ, ‘ಇಂಥ ಮಾತುಗಳಿಗೆ ಬೇಸರ ಮಾಡಿಕೊಳ್ಳದೆ ಮುಂದುವರಿಯುವ ಮನಸ್ಥಿತಿಯನ್ನು ಆರ್‌ಬಿಐ ಬೆಳೆಸಿಕೊಂಡಿದೆ’ ಎಂದೂ ಪಟೇಲ್ ಹೇಳಿಕೊಂಡಿದ್ದಾರೆ.
 
ನೋಟು ರದ್ದತಿ ಆದೇಶದ ಎರಡು ತಿಂಗಳ ಮೊದಲು ಆರ್‌ಬಿಐ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಪಟೇಲ್, ‘ನಗದು ಲಭ್ಯತೆ ವಿಚಾರದಲ್ಲಿ ಪರಿಸ್ಥಿತಿ ಈಗ ಸಹಜವಾಗಿದೆ’ ಎಂದು ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ವಿವರಿಸಿದ್ದಾರೆ.
 
‘ನಾವು ಟೀಕೆಗಳಿಗೆ ಬೇಸರ ಮಾಡಿಕೊಳ್ಳದೆ ಮುಂದುವರಿಯಬೇಕು. ಕಳೆದ ಕೆಲವು ತಿಂಗಳಲ್ಲಿ ನಾವು ದೊಡ್ಡ ಸವಾಲುಗಳನ್ನು ಎದುರಿಸಿದ್ದೇವೆ. ಟೀಕೆಗಳಲ್ಲಿ ಹುರುಳಿದ್ದರೆ ನಾವು ಅವುಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತೇವೆ’ ಎಂದಿದ್ದಾರೆ.
 
ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ವೃದ್ಧಿ ದರ ಶೇಕಡ 7.1ರಷ್ಟು ಇರಲಿದೆ ಎಂದು ಅಂದಾಜಿಸಿದ್ದ ಆರ್‌ಬಿಐ, ನಂತರ ಅಂದಾಜನ್ನು ಶೇ 6.9ಕ್ಕೆ ಇಳಿಸಿತ್ತು. 2017–18ರಲ್ಲಿ ಇದು ಶೇ 7.4ಕ್ಕೆ ಏರಿಕೆಯಾಗಲಿದೆ ಎಂದು ಅದು ಹೇಳಿದೆ.
 
ಚಲಾವಣೆಯಲ್ಲಿ ಇದ್ದ ಶೇ 86ರಷ್ಟು ನೋಟುಗಳನ್ನು ಅಮಾನ್ಯಗೊಳಿಸಿದ ತೀರ್ಮಾನದ ಪ್ರಯೋಜನ ಗೋಚರವಾಗಲು ತುಸು ಕಾಲ ಬೇಕು. ಆ ಪ್ರಯೋಜನ ಬಹುಕಾಲ ಅನುಭವಕ್ಕೆ ಬರುವಂತೆ ಮಾಡಲು ಇನ್ನೂ ಕೆಲವು ಕಾರ್ಯಗಳು ಆಗಬೇಕು ಎಂದು ಪಟೇಲ್ ಹೇಳಿದರು.
 
ಭಾರತದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆ ಶೇಕಡ 9ರಷ್ಟಾಗುವುದು ಯಾವಾಗ ಎಂಬುದನ್ನು ಅಂದಾಜಿಸುವುದು ಕಷ್ಟ. ಜಮೀನು ಮತ್ತು ಕಾರ್ಮಿಕರಿಗೆ ಸಂಬಂಧಿಸಿದ ನೀತಿಗಳಲ್ಲಿ ಮೂಲಭೂತ ಬದಲಾವಣೆಗಳು ಆದಾಗ ಮಾತ್ರ ಹೆಚ್ಚಿನ ಬೆಳವಣಿಗೆ ದರ ಸಾಧಿಸಲು ಸಾಧ್ಯ ಎಂದರು.
 
**
ಲಾಭದ ಹಾದಿಯಲ್ಲಿ ನೋಟು ಮುದ್ರಣ ನಿಗಮ
ನೋಟು ರದ್ದತಿಯ ಪರಿಣಾಮವಾಗಿ ಸರ್ಕಾರಿ ಸ್ವಾಮ್ಯದ ನೋಟು ಮುದ್ರಣ ಮತ್ತು ನಾಣ್ಯ ಟಂಕಿಸುವ ನಿಗಮವು (ಎಸ್‌ಪಿಎಂಸಿಐಎಲ್) ಸಂಪೂರ್ಣವಾಗಿ ಲಾಭದ ಹಾದಿಗೆ ಬಂದಿದೆ. ನಿಗಮವು ತನ್ನ ಮೇಲಿದ್ದ ಎಲ್ಲ ಸಾಲಗಳನ್ನು ತೀರಿಸಿದೆ.
 
ನಿಗಮವು ಲಾಭಾಂಶ ಪಾವತಿ ಮೂಲಕ ಕೇಂದ್ರದ ಬೊಕ್ಕಸಕ್ಕೆ ಈ ವರ್ಷ ಹಣ ಪಾವತಿ ಮಾಡಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಸರ್ಕಾರಿ ಮುದ್ರಣಾಲಯದ ಸಂಸ್ಥಾಪನಾ ದಿನಾಚರಣೆಯಲ್ಲಿ ಹೇಳಿದರು.
 
₹ 500 ಹಾಗೂ ಅದಕ್ಕಿಂತ ಕಡಿಮೆ ಮುಖಬೆಲೆಯ ನಾಣ್ಯಗಳನ್ನು ಎಸ್‌ಪಿಎಂಸಿಐಎಲ್‌ ಮುದ್ರಿಸುತ್ತದೆ. ₹ 2000 ಮುಖಬೆಲೆಯ ನೋಟುಗಳನ್ನು ಆರ್‌ಬಿಐ ಮುದ್ರಣಾಲಯದಲ್ಲಿ ಮುದ್ರಿಸಲಾಗುತ್ತದೆ.
 
‘ಈ ವರ್ಷ ಬಾಂಡ್‌ಗಳನ್ನು ಹೊರಡಿಸುವ ಆಲೋಚನೆ ಇದೆ’ ಎಂದು ಎಸ್‌ಪಿಎಂಸಿಐಲ್‌ ಅಧ್ಯಕ್ಷ ಪ್ರವೀಣ್ ಗರ್ಗ್ ತಿಳಿಸಿದರು.
 
ಸ್ವದೇಶಿ ಕಾಗದ: ಮೈಸೂರು ಮತ್ತು ಹೋಶಂಗಬಾದ್‌ನಲ್ಲಿರುವ ಕೇಂದ್ರ ಸರ್ಕಾರದ ನೋಟು ಮುದ್ರಣಾಲಯಗಳಲ್ಲಿ, ನೋಟುಗಳನ್ನು ಮುದ್ರಿಸಲು ಶೇ 50ರಷ್ಟು ಸ್ವದೇಶಿ ಕಾಗದಗಳನ್ನೇ ಬಳಸಲಾಗುತ್ತಿದೆ. ಮೊದಲು ಈ ಪ್ರಮಾಣ ತೀರಾ ಕಡಿಮೆ ಇತ್ತು. ಹೊಸ ನೋಟುಗಳ ವಿನ್ಯಾಸಕ್ಕೆ ಸ್ವದೇಶಿ ಕಾಗದ ಸರಿಯಾಗಿ ಹೊಂದಿಕೊಳ್ಳುತ್ತದೆ. ಹೀಗಾಗಿ ಸ್ವದೇಶಿ ಕಾಗದದ ಬಳಕೆ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
 
**
ಮೊತ್ತ ಎಷ್ಟು
ಗರಿಷ್ಠ ಮುಖಬೆಲೆಯ ನೋಟು ರದ್ದತಿಯ ನಂತರದ 50 ದಿನಗಳಲ್ಲಿ ಒಂದೇ ಖಾತೆಗೆ ₹ 2 ಲಕ್ಷಕ್ಕಿಂತ ಹೆಚ್ಚು ಜಮೆ ಆಗಿರುವುದರ ಮೊತ್ತ ₹10 ಲಕ್ಷ ಕೋಟಿ. ಒಟ್ಟು ಒಂದು ಕೋಟಿ ಖಾತೆಗಳಲ್ಲಿ ಈ ಮೊತ್ತ ಜಮೆಯಾಗಿದೆ. ಅದರ ಪೈಕಿ ಅನುಮಾನಕ್ಕೆ ಕಾರಣವಾದ  18 ಲಕ್ಷ ಖಾತೆದಾರರಿಂದ ವಿವರಣೆ ಕೋರಲಾಗಿದೆ.
 
**
ತೆರಿಗೆ ವಂಚನೆಗೆ ಯತ್ನಿಸುತ್ತಿದ್ದಾರೆ ಎಂಬ ಖಚಿತ ಸಾಕ್ಷ್ಯ ಇದ್ದರೆ ಮಾತ್ರ ಅಂಥವರ ವಿರುದ್ಧ ತನಿಖೆ ಮತ್ತು ಶೋಧ ನಡೆಸಲಾಗುವುದು.
-ಆದಾಯ ತೆರಿಗೆ ಇಲಾಖೆ 
 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.