ADVERTISEMENT

ಶಂಕಿತ ಐಎಸ್‌ಐಎಸ್‌ ಬೆಂಬಲಿಗ ಮುಂಬೈಗೆ ವಾಪಸ್‌

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2014, 12:48 IST
Last Updated 28 ನವೆಂಬರ್ 2014, 12:48 IST

ಮುಂಬೈ (ಪಿಟಿಐ): ಐಎಸ್‌ಐಎಸ್‌ ಸಂಘಟನೆಗಾಗಿ ಹೋರಾಡುವಾಗ ಮೃತಪಟ್ಟಿದ್ದಾನೆಂದು ನಂಬಲಾಗಿದ್ದ 23 ವರ್ಷದ ಆರಿಫ್‌ ಮಜೀದ್‌ ಶುಕ್ರವಾರ ಮುಂಬೈಗೆ ಮರಳಿದ್ದು, ಆತನನ್ನು ವಶಕ್ಕೆ ತೆಗೆದುಕೊಂಡಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಮುಂಬೈ ಸಮೀಪದ ಕಲ್ಯಾಣ್‌ನ ನಾಲ್ವರು ಯುವಕರಾದ ಆರಿಫ್‌ ಮಜೀದ್‌, ಶಹೀನ್‌ ಟಂಕಿ, ಫಹಾದ್‌ ಶೇಕ್‌ ಮತ್ತು ಅಮನ್‌ ತಂಡೇಲ್‌ ಈ ವರ್ಷದ ಮೇ ತಿಂಗಳಲ್ಲಿ ಮಧ್ಯಪ್ರಾಚ್ಯದ ಪವಿತ್ರ ಸ್ಥಳಗಳ ಯಾತ್ರೆಗೆಂದು ಭಾರತದಿಂದ ಹೊರಟು ಬಳಿಕ ನಾಪತ್ತೆಯಾಗಿದ್ದರು. ಆ ನಾಲ್ವರು ಐಎಸ್‌ಐಎಸ್‌ ಸಂಘಟನೆಗೆ ಸೇರಿಕೊಂಡಿದ್ದಾರೆಂಬ ಶಂಕೆ ವ್ಯಕ್ತವಾಗಿತ್ತು.

ಎಂಜಿನಿಯರಿಂಗ್‌ ವಿದ್ಯಾರ್ಥಿಗಳಾದ ಈ ನಾಲ್ವರೂ ಮೇ 23ರಂದು 22 ಮಂದಿ ಯಾತ್ರಾತ್ರಿಗಳ ಜತೆಗೆ ಬಾಗ್ದಾದ್‌ನ ಯಾತ್ರ ಸ್ಥಳಕ್ಕೆ ಭೇಟಿ ನೀಡಿದ್ದರು. ಅದಾದ ಮರುದಿನ ಆರಿಫ್‌ ಮನೆಗೆ ಕರೆ ಮಾಡಿ, ಮೊದಲೆ ತಿಳಿಸದೆ ಯಾತ್ರೆಗೆ ಹೊರಟ ಬಗ್ಗೆ ಕ್ಷಮೆ ಕೋರಿದ್ದ. ಆ ಬಳಿಕ ಆಗಸ್ಟ್‌ 26ರಂದು ಆರಿಫ್‌ ತಂದೆಗೆ ಕರೆ ಮಾಡಿದ್ದ ಶಹೀನ್‌ ಟಂಕಿ, ಐಎಸ್‌ಐಎಸ್‌ಗಾಗಿ ಸಿರಿಯಾದಲ್ಲಿ ಹೋರಾಡುವಾಗ ಆರಿಫ್‌ ಹುತಾತ್ಮನಾದ ಎಂದು ತಿಳಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಮಗ ಸಾವನ್ನಪ್ಪಿದ ಸುದ್ದಿ ನಿಜವೆಂದು ತಿಳಿದ ಆರಿಫ್‌ ಕುಟುಂಬ ಸದಸ್ಯರು ಮಗನ ಆತ್ಮಕ್ಕೆ ಶಾಂತಿಕೋರಿ ಅಂತಿಮ ವಿಧಿವಿಧಾನಗಳನ್ನೂ ನಡೆಸಿದ್ದರು.

‘ಆರಿಫ್‌ ತಂದೆ ಏಜಾಜ್‌ ಅವರಿಗೆ ಬೆಳಿಗ್ಗೆ ಕರೆ ಮಾಡಿದ ಪೊಲೀಸರು ಆರಿಫ್‌ ಮುಂಬೈಗೆ ಬಂದಿರುವುದಾಗಿ ತಿಳಿಸಿದ್ದಾರೆ’ ಎಂದು ಏಜಾಜ್‌ ಅವರ ಕುಟುಂಬದ ಸ್ನೇಹಿತರು ಮಾಹಿತಿ ನೀಡಿದ್ದಾರೆ.

ಈ ಹಿಂದೆ ಆರಿಫ್‌ ಕುಟುಂಬ ಸದಸ್ಯರ ವಿಚಾರಣೆ ನಡೆಸಿದ್ದ ಮಹಾರಾಷ್ಟ್ರ ಎಟಿಎಸ್‌ ಪಡೆ ಕೂಡಾ ಆರಿಫ್‌ ಮುಂಬೈಗೆ ಬಂದಿರುವ ಬಗ್ಗೆ ಎನ್‌ಐಎ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.