ADVERTISEMENT

‘ಶಬರಿಮಲೆ ಪ್ರವೇಶಕ್ಕೆ ಹೋರಾಟ’

ಪಿಟಿಐ
Published 28 ಆಗಸ್ಟ್ 2016, 19:30 IST
Last Updated 28 ಆಗಸ್ಟ್ 2016, 19:30 IST
ಮುಂಬೈ  ಹೈಕೋರ್ಟ್‌ ಆದೇಶದಿಂದ ಮಹಿಳೆಯರ ಪ್ರವೇಶಕ್ಕೆ ಮುಕ್ತವಾದ ಹಾಜಿ ಅಲಿ ದರ್ಗಾಕ್ಕೆ ಭೇಟಿ ನೀಡಿದ್ದ ಭೂಮಾತ ಬ್ರಿಗೇಡ್‌ ಸಂಸ್ಥಾಪಕಿ ತೃಪ್ತಿ ದೇಸಾಯಿ ದರ್ಗಾಕ್ಕೆ ಚಾದರ ಅರ್ಪಿಸಿ ಸ್ಥಳೀಯರೊಂದಿಗೆ ಮಾತನಾಡಿದರು       ಪಿಟಿಐ ಚಿತ್ರ
ಮುಂಬೈ ಹೈಕೋರ್ಟ್‌ ಆದೇಶದಿಂದ ಮಹಿಳೆಯರ ಪ್ರವೇಶಕ್ಕೆ ಮುಕ್ತವಾದ ಹಾಜಿ ಅಲಿ ದರ್ಗಾಕ್ಕೆ ಭೇಟಿ ನೀಡಿದ್ದ ಭೂಮಾತ ಬ್ರಿಗೇಡ್‌ ಸಂಸ್ಥಾಪಕಿ ತೃಪ್ತಿ ದೇಸಾಯಿ ದರ್ಗಾಕ್ಕೆ ಚಾದರ ಅರ್ಪಿಸಿ ಸ್ಥಳೀಯರೊಂದಿಗೆ ಮಾತನಾಡಿದರು ಪಿಟಿಐ ಚಿತ್ರ   

ಮುಂಬೈ (ಪಿಟಿಐ): ಇತಿಹಾಸ ಪ್ರಸಿದ್ಧ ಹಾಜಿ ಅಲಿ ದರ್ಗಾದ ಸಮಾಧಿ ಇರುವ ಸ್ಥಳಕ್ಕೆ ಮಹಿಳೆಯರು ಪ್ರವೇಶಿಸಬಹುದು ಎಂದು ಬಾಂಬೆ ಹೈಕೋರ್ಟ್‌ ಆದೇಶ ನೀಡಿದ ಎರಡು ದಿನಗಳ ಬಳಿಕ, ಭೂಮಾತಾ ರಣರಾಗಿಣಿ ಬ್ರಿಗೇಡ್‌ ಮುಖ್ಯಸ್ಥೆ ತೃಪ್ತಿ ದೇಸಾಯಿ ಅವರು ದರ್ಗಾಕ್ಕೆ ಭೇಟಿ ನೀಡಿ, ಚಾದರ ಅರ್ಪಿಸಿದರು.

ನಂತರ ಮಾತನಾಡಿದ ಅವರು, ಕೇರಳದ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ಕಲ್ಪಿಸಲು ಹೋರಾಟ ನಡೆಸುವುದಾಗಿ ಪ್ರಕಟಿಸಿದರು.

‘ಕಳೆದ ಬಾರಿ ನಾವು ಇಲ್ಲಿಗೆ ಬಂದಿದ್ದಾಗ, ಹೈಕೋರ್ಟ್ ಆದೇಶ ಮಹಿಳೆಯರ ಪರವಾಗಿ ಬರಲೆಂದು ಪ್ರಾರ್ಥಿಸಿದ್ದೆವು. ನಮ್ಮ ಪ್ರಾರ್ಥನೆ ಫಲಿಸಿದೆ. ಹಾಗಾಗಿ, ಹಾಜಿ ಅಲಿ ಬಾಬಾ  ಆಶೀರ್ವಾದ ಪಡೆಯಲು ಬಂದಿದ್ದೇವೆ’ ಎಂದು ತೃಪ್ತಿ ಅವರು ದರ್ಗಾದ ಹೊರಗಡೆ ಸುದ್ದಿಗಾರರಿಗೆ ಬಳಿ ಹೇಳಿದರು.

ಮಹಿಳೆಯರಿಗೆ ಬೆಂಬಲವಾಗಿ ನಿಂತಿದ್ದಕ್ಕೆ ತೃಪ್ತಿ ಅವರು ಮುಸ್ಲಿಮರೂ ಸೇರಿದಂತೆ ದೇಶವಾಸಿಗಳಿಗೆ ಧನ್ಯವಾದ ಸಮರ್ಪಿಸಿದರು. ಹೈಕೋರ್ಟ್‌ ಆದೇಶ ಪ್ರಶ್ನಿಸಿ ದರ್ಗಾ ಟ್ರಸ್ಟ್‌ನವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಬಾರದು ಎಂದು ಮನವಿ ಮಾಡಿದರು. ಒಂದು ವೇಳೆ, ಟ್ರಸ್ಟ್‌ನವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರೂ, ಅಲ್ಲಿ ಮಹಿಳೆಯರ ಪರವಾಗಿಯೇ ತೀರ್ಪು ಬರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

‘ಹೈಕೋರ್ಟ್‌ ಆದೇಶದ ಬಗ್ಗೆ ಟ್ರಸ್ಟ್‌ನವರು ಸರಿಯಾಗಿ ಯೋಚನೆ ಮಾಡಿದರೆ, ದರ್ಗಾದಲ್ಲಿ ಸಮಾಧಿ ಇರುವ ಸ್ಥಳಕ್ಕೆ ಇನ್ನೆರಡು ದಿನಗಳಲ್ಲಿ ಮಹಿಳೆಯರಿಗೆ ಪ್ರವೇಶ ನೀಡಬಹುದು’ ಎಂದು ತೃಪ್ತಿ ಹೇಳಿದರು. ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಟ್ರಸ್ಟ್‌ಗೆ ಅವಕಾಶ ನೀಡುವ ನಿಟ್ಟಿನಲ್ಲಿ ಹೈಕೋರ್ಟ್‌ ತನ್ನ ಆದೇಶಕ್ಕೆ ಆರು ವಾರಗಳ ತಡೆಯಾಜ್ಞೆ ನೀಡಿದೆ. ತೃಪ್ತಿ ಅವರು ದರ್ಗಾದ ಸಮಾಧಿ ಇರುವ ಸ್ಥಳ ಪ್ರವೇಶಿಸಲು ಏಪ್ರಿಲ್‌ನಲ್ಲಿ ಯತ್ನ ನಡೆಸಿದ್ದರು.

‘ಇವತ್ತು ನಾನು ಸಮಾಧಿ ಇರುವ ಸ್ಥಳಕ್ಕೆ ಹೋಗಲಿಲ್ಲ. ನ್ಯಾಯಾಲಯದ ಆದೇಶ ಉಲ್ಲಂಘಿಸಲು ನಾನು ಸಿದ್ಧಳಿಲ್ಲ. ಯಾವುದೇ ಧರ್ಮದ ಜನರ ಭಾವನೆಗಳಿಗೆ ನೋವುಂಟು ಮಾಡುವುದು ನನ್ನ ಉದ್ದೇಶ ಅಲ್ಲ. ಆದರೆ, ಪೂಜಾ ಕೇಂದ್ರಗಳಲ್ಲಿ, ಪ್ರಾರ್ಥನಾ ಮಂದಿರಗಳಲ್ಲಿ ಮಹಿಳೆಯರಿಗೆ ಸಮಾನ ಹಕ್ಕು ಸಿಗಬೇಕು ಎಂಬುದಷ್ಟೇ ನನ್ನ ಆಶಯ’ ಎಂದರು.


‘ದರ್ಗಾಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ನೀಡಿರುವ ಆದೇಶ ಗಮನಿಸಿ, ಶಬರಿಮಲೆ ದೇವಸ್ಥಾನದ ಟ್ರಸ್ಟಿಗಳು ಅಲ್ಲಿ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು. ಇಲ್ಲವಾದರೆ, ನಾವು ಹೋರಾಟ ಆರಂಭಿಸುತ್ತೇವೆ. ಈ ವಿಚಾರವಾಗಿ ನಾನು ಟ್ರಸ್ಟಿಗಳ ಜೊತೆ ಒಂದೆರಡು ದಿನಗಳಲ್ಲಿ ಮಾತುಕತೆ ನಡೆಸುವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.