ADVERTISEMENT

ಶಸ್ತ್ರ ತ್ಯಜಿಸಿದರೆ ಮಾತುಕತೆಗೆ ಸಿದ್ಧ

ನಕ್ಸಲೀಯರಿಗೆ ರಾಜನಾಥ್‌ ಸಿಂಗ್‌ ಕರೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2014, 19:30 IST
Last Updated 12 ಸೆಪ್ಟೆಂಬರ್ 2014, 19:30 IST

ನವದೆಹಲಿ (ಪಿಟಿಐ): ಹಿಂಸೆಯ ಮಾರ್ಗ ಬಿಡುವಂತೆ ನಕ್ಸಲೀಯರಿಗೆ ಕಿವಿ ಮಾತು ಹೇಳಿರುವ ಕೇಂದ್ರ ಗೃಹ ಸಚಿವ ರಾಜನಾಥ್‌್ ಸಿಂಗ್‌, ‘ನಕ್ಸಲರು ಶಸ್ತ್ರ ತ್ಯಜಿಸಿದರೆ ಸರ್ಕಾರ ಅವ­ರೊಂದಿಗೆ ಮಾತುಕತೆಗೆ  ಸಿದ್ಧವಿದೆ’ ಎಂದಿದ್ದಾರೆ.

ತಮ್ಮ ಸಚಿವಾಲಯವು ೧೦೦ ದಿನ ಪೂರೈಸಿದ ಸಂದರ್ಭದಲ್ಲಿ ಸುದ್ದಿಗಾರ­ರೊಂದಿಗೆ ಶುಕ್ರವಾರ ಮಾತ­­ನಾ­ಡಿದ ಸಿಂಗ್‌, ‘ಎಡಪಂಥೀಯ ತೀವ್ರವಾದಿ­ಗಳು ಹಿಂಸೆಯ ಮಾರ್ಗ ಬಿಟ್ಟರೆ ಅವರೊಂದಿಗೆ ಸಂಧಾನ ಸಾಧ್ಯ’ ಎಂದು ಖಡಾಖಂಡಿತವಾಗಿ ನುಡಿದರು.

ಭವಿಷ್ಯದಲ್ಲಿ ಪಾಕಿಸ್ತಾನದ ಜತೆಗಿನ ಮಾತುಕತೆ, ಗಡಿ ಹಾಗೂ ಆಂತರಿಕ ಭದ್ರತಾ ಸ್ಥಿತಿಗತಿಗಳು ಹಾಗೂ ವೀಸಾ ನಿಯಂತ್ರಣ...ಇತ್ಯಾದಿ ವಿಷಯಗಳ ಬಗ್ಗೆ   ರಾಜನಾಥ್‌ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಸುದೀರ್ಘ ಮಾತುಕತೆ ನಡೆಸಿದರು.

‘ನೂರು ದಿನಗಳ ಅವಧಿಯಲ್ಲಿ ೧೩೨ ನಕ್ಸಲೀಯರು ಶರಣಾಗಿದ್ದಾರೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶರಣಾಗತ ನಕ್ಸಲರ ಸಂಖ್ಯೆ ಶೇ ೩೦೦ರಷ್ಟು ಏರಿಕೆಯಾಗಿದೆ. ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ಸಂಪರ್ಕ ಸೌಲಭ್ಯವನ್ನು ಉತ್ತಮಪಡಿ­ಸುವುದಕ್ಕೆ ೨,೧೯೯ ಮೊಬೈಲ್‌ ಗೋಪು­­­ರ­ ನಿರ್ಮಿಸುವ ಮಹತ್ವದ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ’ ಎಂದು  ವಿವರಿಸಿದರು.

‘ಲವ್‌ ಜಿಹಾದ್ ಎಂದರೇನು?
ಬಿಜೆಪಿ ಮುಖಂಡರು ವಿವಾದಿತ ‘ಲವ್‌ ಜಿಹಾದ್‌’ ಬಗ್ಗೆ ಮಾತ­ನಾ­ಡುತ್ತಿದ್ದರೆ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ಈ ಬಗ್ಗೆ ತಮಗೇನೂ ಗೊತ್ತಿಲ್ಲ ಎಂದಿದ್ದಾರೆ. ‘ಲವ್‌ ಜಿಹಾದ್‌’ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಪ್ರಶ್ನಿಸಿ­ದಾಗ, ‘ಹಾಗೆಂದ­ರೇನು...ನನಗೆ ಈ ಬಗ್ಗೆ ಗೊತ್ತಿಲ್ಲವಲ್ಲ’ ( ಅರೆ ಯೆ ಹೈ ಕ್ಯಾ. ಹಮೆ ನಹಿ ಮಾಲೂಮ್‌) ಎಂದು ನಗುತ್ತ ಉತ್ತರ ನೀಡಿದರು.

‘ಮುಸ್ಲಿಮರಿಂದ ದೂರ ಇರಿ’ ಎಂದು ಹಿಂದೂ ಯುವತಿಯರಿಗೆ  ಉತ್ತರ­­ಪ್ರದೇಶ, ಮಧ್ಯಪ್ರದೇಶ ಹಾಗೂ ಗುಜ­ರಾತ್‌ ಬಿಜೆಪಿ ಮುಖಂ­ಡರು ಕರೆ ನೀಡು­ತ್ತಿರುವ ಬಗ್ಗೆ ಸಚಿವರನ್ನು ಮಾಧ್ಯಮ ಪ್ರತಿನಿಧಿಗಳು ಕೆಣಕಿದರು.  ‘ನನಗೇನೂ ಗೊತ್ತಿಲ್ಲ’ ಎಂದಷ್ಟೇ ಅವರು ನುಡಿದರು.

ಮೋದಿ ಜತೆ ಉತ್ತಮ ಸಂಬಂಧ: ಪ್ರಧಾನಿ ಜತೆಗೆ ಗೃಹ ಸಚಿವರು ಭಿನ್ನಾಭಿಪ್ರಾಯ ಹೊಂದಿದ್ದಾರೆ ಎನ್ನುವ ವರದಿಗಳನ್ನು ರಾಜನಾಥ್‌ ತಳ್ಳಿಹಾಕಿದರು. ತಮ್ಮಿಬ್ಬರ ಮಧ್ಯೆ ಉತ್ತಮ ಸಂಬಂಧವಿದೆ ಎಂದು ಸ್ಪಷ್ಟಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.