ADVERTISEMENT

ಶಾರುಕ್‌ ಚಾಲಕನಿಂದ ಅತ್ಯಾಚಾರ

ಕೆಲಸ ಕೊಡಿಸುವುದಾಗಿ ಆಮಿಷ

​ಪ್ರಜಾವಾಣಿ ವಾರ್ತೆ
Published 26 ಜೂನ್ 2014, 19:30 IST
Last Updated 26 ಜೂನ್ 2014, 19:30 IST

ಮುಂಬೈ (ಪಿಟಿಐ): ಬಾಲಿವುಡ್‌ ನಟ ಶಾರುಕ್‌ ಖಾನ್‌ ಅವರ ಕಾರು ಚಾಲಕನನ್ನು 17 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ರಾಜೇಂದ್ರ ಗೌತಮ್‌ (34) ಬಂಧಿತ ಆರೋಪಿ. ಗೌತಮ್‌ ಕಳೆದ ಏಳು ವರ್ಷ­ಗಳಿಂದ ಶಾರುಕ್‌ ಮನೆಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಈತ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದ ಬಾಲಕಿಯೊಬ್ಬಳನ್ನು ಶಾರುಕ್‌ ಮನೆ­ಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಠಾಣೆ ಜಿಲ್ಲೆಯ ನಲಸೊಪಾರದ ಲಾಡ್ಜ್‌ವೊಂದಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಲ್ಲದೇ, ವಿಷಯ ಬಹಿರಂಗಪಡಿಸದಂತೆ ಬೆದರಿಕೆ ಹಾಕಿದ್ದಾನೆ ಎಂದು ಸಹಾಯಕ ಪೊಲೀಸ್‌ ಕಮಿಷನರ್‌ ಶಿವಾಜಿ ರಾವ್‌ ಕೋಲೇಕರ್‌  ತಿಳಿಸಿದ್ದಾರೆ.

ನಂತರ ಬಾಲಕಿಯು ನಡೆದ ಘಟನೆಯನ್ನು ಸ್ನೇಹಿತರಿಗೆ ತಿಳಿಸಿದ್ದು, ಬಾಂದ್ರಾ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾಳೆ.
ಪೊಲೀಸರು ಆರೋಪಿ ವಿರುದ್ಧ ಐಪಿಸಿ 376 (ಅತ್ಯಾಚಾರ), 366ಎ (ಬಾಲಕಿಯನ್ನು ಅಕ್ರಮ ಬಂಧನದಲ್ಲಿರಿಸುವಿಕೆ), 506(2) ಅಪರಾಧ ಸಂಚು ಪ್ರಕರಣ ದಾಖಲಿಸಿದ್ದಾರೆ.

ಘಟನೆ ವಿವರ: ಲಾತೂರ್‌ ಜಿಲ್ಲೆಯವಳಾದ  ಬಾಲಕಿ ಕಾಂಗ್ರೆಸ್‌ನ ಮಾಜಿ ಸಂಸದ ಹಾಗೂ ಮಾಜಿ ಕ್ರಿಕೆಟಿಗರೊಬ್ಬರ ಪತ್ನಿಯ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು. ಹೆಚ್ಚು ಸಂಬಳದ ನಿರೀಕ್ಷೆಯಲ್ಲಿ ಬೇರೆ ಕಡೆ ಕೆಲಸ ಹುಡುಕುತ್ತಿದ್ದಳು. ಈ ವಿಷಯವನ್ನು  ಸ್ನೇಹಿತರಿಂದ ತಿಳಿದು­ಕೊಂಡ ಚಾಲಕ ಗೌತಮ್‌ ಬಾಲಕಿ ಕೆಲಸಕ್ಕಿದ್ದ ನಟಿಯ ಮನೆಗೆ ದೂರವಾಣಿ ಕರೆ ಮಾಡಿದ್ದಾನೆ.

ಈ  ಬಾಲಕಿಯೇ ಕರೆ ಸ್ವೀಕರಿಸಿರುವುದಾಗಿ ಭಾವಿಸಿದ ಗೌತಮ್‌ ಹೊಸ ಕೆಲಸ ಕೊಡಿಸುವುದಾಗಿ ಹೇಳಿದ್ದಾನೆ. ಇದರಿಂದಾಗಿ, ನಟಿಯು ಬಾಲಕಿಗೆ ನೀಡಬೇಕಿದ್ದ ಸಂಬಳ ನೀಡಿ ಕೆಲಸದಿಂದ ತೆಗೆದಿದ್ದಾರೆ.

ನಂತರ ಬಾಲಕಿಯನ್ನು ಭೇಟಿಯಾದ ಗೌತಮ್‌  ವಸತಿ ವ್ಯವಸ್ಥೆ ಮಾಡುವುದಾಗಿ ಹೇಳಿ ನಲಸೊಪಾರಕ್ಕೆ ಕರೆದೊಯ್ದು ವಸತಿಗೃಹವೊಂದರಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.