ADVERTISEMENT

ಶಿವಸೇನೆ ವಿರುದ್ಧ ಸಂಸತ್ತಿನಲ್ಲಿ ಗದ್ದಲ

​ಪ್ರಜಾವಾಣಿ ವಾರ್ತೆ
Published 23 ಜುಲೈ 2014, 10:33 IST
Last Updated 23 ಜುಲೈ 2014, 10:33 IST

ನವದೆಹಲಿ (ಪಿಟಿಐ): ರಂಜಾನ್‌ ಮಾಸದ ಪ್ರಯುಕ್ತ ಉಪವಾಸನಿರತನಾಗಿದ್ದ ನವ ಮಹಾರಾಷ್ಟ್ರ ಸದನದ ಕಾರ್ಮಿಕನಿಗೆ ಶಿವಸೇನೆಯ ಸಂಸದರು ಆಹಾರ ಸೇವಿಸುವಂತೆ ಒತ್ತಾಯಿಸಿದ್ದಾರೆಂಬ ವಿಷಯಕ್ಕೆ ಸಂಬಂಧಿಸಿದಂತೆ ಸಂಸತ್ತಿನ ಉಭಯ ಸದನಗಳಲ್ಲಿ ಬುಧವಾರ ಗದ್ದಲ ಜೋರಾಗಿತ್ತು.

ಕಾಂಗ್ರೆಸ್‌, ಎನ್‌ಸಿಪಿ, ಪಿಡಿಪಿ ಸೇರಿದಂತೆ ವಿರೋಧ ಪಕ್ಷಗಳ ಸದಸ್ಯರು ಸಂಸತ್ತಿನಲ್ಲಿ ತೀವ್ರ ಗದ್ದಲ ನಡೆಸಿದರು. ವಿರೋಧ ಪಕ್ಷಗಳ ಈ ಆರೋಪವನ್ನು ಅಲ್ಲಗೆಳೆದ ಸರ್ಕಾರ, ಇದೊಂದು ಆಧಾರ ರಹಿತ ಆರೋಪ. ಸೂಕ್ತ ಪರಿಶೀಲನೆ ನಡೆಸದ ಹೊರತು ಈ ಆರೋಪದ ಬಗ್ಗೆ ಚರ್ಚಿಸುವುದು ಸರಿಯಲ್ಲ ಎಂದಿದೆ.

ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ಸದಸ್ಯರು ಆರೋಪ ಕೇಳಿಬಂದಿರುವ ಶಿವಸೇನೆಯ ಸಂಸದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

‘ಇದೊಂದು ಸೂಕ್ಷ್ಮ ವಿಚಾರ. ಇದನ್ನು ಕೋಮು ಸಾಮರಸ್ಯ ಕದಡಲು ಬಳಸುವುದು ಸರಿಯಲ್ಲ. ಅಂತಹ ಘಟನೆ ನಡೆದಿದೆಯೋ, ಇಲ್ಲವೋ ಯಾರಿಗೆ ಗೊತ್ತಿದೆ’ ಎಂದು ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಅವರು ವಿರೋಧ ಪಕ್ಷದ ಸದಸ್ಯರನ್ನು ಸಮಾಧಾನಪಡಿಸಲು ಯತ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.