ADVERTISEMENT

ಶೀಘ್ರ ಮಾತುಕತೆ ಅಗತ್ಯ: ಬಾಸಿತ್‌

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2016, 19:30 IST
Last Updated 27 ಆಗಸ್ಟ್ 2016, 19:30 IST
ಶೀಘ್ರ ಮಾತುಕತೆ ಅಗತ್ಯ: ಬಾಸಿತ್‌
ಶೀಘ್ರ ಮಾತುಕತೆ ಅಗತ್ಯ: ಬಾಸಿತ್‌   

ನವದೆಹಲಿ (ಪಿಟಿಐ):  ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಭಾರತದ ಜತೆ ಮಾತುಕತೆ ನಡೆಸುವ ಆಶಾಭಾವನೆಯನ್ನು ಪಾಕಿಸ್ತಾನ ಹೊಂದಿದೆ ಎಂದು ಭಾರತದಲ್ಲಿನ ಪಾಕಿಸ್ತಾನದ ಹೈಕಮಿಷನರ್‌ ಅಬ್ದುಲ್‌ ಬಾಸಿತ್‌ ಹೇಳಿದ್ದಾರೆ.

‘ಕಾಶ್ಮೀರದ ವಿಷಯದಲ್ಲಿ ಭಾರತದ ಜತೆ ಮಾತುಕತೆಗೆ ಒಂದು ಹೆಜ್ಜೆ ಮುಂದಿಟ್ಟಿದ್ದೆವು. ಈ ಬಗ್ಗೆ ಭಾರತಕ್ಕೆ ಆಹ್ವಾನವನ್ನೂ ನೀಡಿದ್ದೆವು. ಆದರೆ ಅದು ಫಲ ನೀಡಲಿಲ್ಲ’ ಎಂದು ನವದೆಹಲಿಯಲ್ಲಿ ಶನಿವಾರ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ತಿಳಿಸಿದ್ದಾರೆ.

‘ಕಾಶ್ಮೀರಕ್ಕೆ ಸಂಬಂಧಿಸಿದ ಮಾತುಕತೆ ಅಗತ್ಯ ಎಂಬುದು ಪಾಕಿಸ್ತಾನದ ನಿಲುವು’ ಎಂದು ಅವರು ಹೇಳಿದ್ದಾರೆ. ಕಾಶ್ಮೀರ ವಿಷಯದ ಕುರಿತು ಮಾತುಕತೆಗೆ ಬರುವಂತೆ ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಎ.ಎ. ಚೌಧರಿ ಅವರು ಭಾರತದ ವಿದೇಶಾಂಗ ಕಾರ್ಯದರ್ಶಿ  ಎಸ್‌. ಜೈಶಂಕರ್‌ ಅವರಿಗೆ ಆಹ್ವಾನ ನೀಡಿದ್ದರು.

ಆದರೆ ಈ ಆಹ್ವಾನವನ್ನು ಭಾರತ ತಿರಸ್ಕರಿಸಿತ್ತು. ಭೂಗತ ಪಾತಕಿ ದಾವೂದ್‌ ಇಬ್ರಾಹಿಂನನ್ನು ಒಪ್ಪಿಸಬೇಕೆಂಬ ಭಾರತದ ಕೋರಿಕೆಗೆ ಪಾಕಿಸ್ತಾನದ ಪ್ರತಿಕ್ರಿಯೆ ಏನು ಎಂಬ ಪ್ರಶ್ನೆಗೆ ಬಾಸಿತ್‌, ‘ಅದು ತುಂಬಾ ಹಳೆಯ ವಿಷಯ’ ಎಂದು ಹೇಳಿ ನುಣುಚಿಕೊಂಡರು.

ಶ್ರೀ ಶ್ರೀ ರವಿಶಂಕರ್ ಭೇಟಿಯಾದ  ವಾನಿ ತಂದೆ
ಜಮ್ಮು ಮತ್ತು ಕಾಶ್ಮೀರದಲ್ಲಿ ಪೊಲೀಸರ ಗುಂಡಿಗೆ ಬಲಿಯಾಗಿದ್ದ ಹಿಜ್ಬುಲ್‌ ಕಮಾಂಡರ್‌ ಬುರ್ಹಾನ್‌ ವಾನಿಯ ತಂದೆ ಮುಜಫ್ಫರ್‌ ವಾನಿ ಅವರು ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥೆಯ ಶ್ರೀ ಶ್ರೀ ರವಿಶಂಕರ್‌ ಅವರನ್ನು ಭೇಟಿಯಾಗಿದ್ದಾರೆ.

ಬೆಂಗಳೂರಿನಲ್ಲಿರುವ ಆಶ್ರಮದಲ್ಲಿ ಈ ಭೇಟಿ ನಡೆದಿದೆ ಎಂದು ಶ್ರೀ ಶ್ರೀ ರವಿಶಂಕರ್‌ ‘ಟ್ವಿಟರ್‌’ನಲ್ಲಿ ಬಹಿರಂಗಪಡಿಸಿದ್ದಾರೆ. ‘ಬುರ್ಹಾನ್‌ ವಾನಿಯ ತಂದೆ ಮುಜಫ್ಫರ್‌ ವಾನಿ ಎರಡು ದಿನ ಕಾಲ ನನ್ನ ಆಶ್ರಮದಲ್ಲಿದ್ದರು. ಹಲವಾರು ವಿಷಯಗಳ ಬಗ್ಗೆ ನಾವು ಚರ್ಚೆ ನಡೆಸಿದ್ದೇವೆ’ ಎಂದು ‘ಟ್ವೀಟ್‌’ ಮಾಡಿದ್ದಾರೆ. ಇಬ್ಬರೂ ಜತೆಗಿರುವ ಫೋಟೊವನ್ನೂ ಪ್ರಕಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT