ADVERTISEMENT

ಶೀನಾಳ ಅಪ್ಪ ಯಾರು?

ಹತ್ಯೆ ಪ್ರಕರಣ ತನಿಖೆ ಚುರುಕು: ಮಾಜಿ ಪತಿ ಪೊಲೀಸ್‌ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2015, 19:59 IST
Last Updated 28 ಆಗಸ್ಟ್ 2015, 19:59 IST

ಮುಂಬೈ (ಪಿಟಿಐ): ತಾಯಿ ಇಂದ್ರಾಣಿ ಮುಖರ್ಜಿಯಿಂದಲೇ ಹತ್ಯೆಗೆ ಒಳಗಾಗಿದ್ದಾಳೆ ಎನ್ನಲಾದ ಶೀನಾಳ ನಿಜವಾದ ತಂದೆ ಯಾರು ಎನ್ನುವುದು ಪೊಲೀಸರಿಗೆ ದೊಡ್ಡ ಪ್ರಶ್ನೆಯಾಗಿ ಕೂತಿದೆ.

ಇಂದ್ರಾಣಿ ಅವರಿಗೆ ಈಗ 43 ವರ್ಷ. ಮೂರು ಬಾರಿ ಮದುವೆ ಆಗಿರುವ ಇವರಿಗೆ ಮೂರು ಮಕ್ಕಳು ಇದ್ದಾರೆ. ಅಲ್ಲದೇ ಅವರು ವಿವಾಹೇತರ ಸಂಬಂಧವನ್ನೂ ಇಟ್ಟುಕೊಂಡಿದ್ದರು ಎಂದು ವರದಿಯಾಗಿದೆ. ಶೀನಾ ಹುಟ್ಟಿದಾಗ ಇಂದ್ರಾಣಿಗೆ ಕೇವಲ 17ವರ್ಷ ಆಗಿತ್ತು ಎನ್ನುವುದು ಖಚಿತವಾಗಿದೆ. 

ಬಹುಶಃ ಶೀನಾ, ಮದುವೆಗೆ ಮುಂಚಿನ ಸಂಬಂಧದಲ್ಲಿ ಹುಟ್ಟಿದ ಮಗು ಇರಬೇಕು ಎಂಬ ಅನುಮಾನ ಪೊಲೀಸರಿಗೂ ಇದೆ.
ಶೀನಾ ಹುಟ್ಟಿದ್ದು 1989ರಲ್ಲಿ. 2012ರ ಏಪ್ರಿಲ್‌ 24ರಂದು ಕೊಲೆಯಾದಾಗ ಆಕೆಗೆ ಸುಮಾರು 23 ಅಥವಾ  24 ವರ್ಷವಾಗಿತ್ತು. 

ಇಂದ್ರಾಣಿಗೆ ಆಗ ಸುಮಾರು 40 ವರ್ಷ. ಇಂದ್ರಾಣಿ ಮೊದಲ ಪತಿ ಸಿದ್ಧಾರ್ಥದಾಸ್‌ ಅವರೇ ಶೀನಾಳ ಅಪ್ಪ ಎಂದು ಗುವಾಹಟಿ ಯಲ್ಲಿರುವ ಇಂದ್ರಾಣಿ ಅವರ ತಂದೆ 80 ವರ್ಷದ ಉಪೇಂದ್ರ ಬೋರಾ ಹೇಳುತ್ತಾರೆ.

ಶೀನಾಳ ನಿಜವಾದ ತಂದೆ  ಶಿಲ್ಲಾಂಗ್‌ ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆಯಲ್ಲ ಎನ್ನುವ ಪ್ರಶ್ನೆಗೆ ಅವರು ‘ಈ ವಿಷಯವನ್ನು ಭೇದಿಸಬೇಕಾಗುತ್ತದೆ’ ಎಂದರು.

ಪೊಲೀಸ್‌ ವಶಕ್ಕೆ ಮಾಜಿ ಪತಿ: ಶೀನಾ ಬೋರಾ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ  ಇಂದ್ರಾಣಿ ಮುಖರ್ಜಿ ಅವರ ಮಾಜಿ ಪತಿ ಸಂಜಯ್‌ ಖನ್ನಾ ಅವರನ್ನು ಬಾಂದ್ರಾ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಆಗಸ್ಟ್‌ 31ರವರೆಗೆ ಮುಂಬೈ  ಪೊಲೀಸರ ವಶಕ್ಕೆ ಒಪ್ಪಿಸಿದೆ.

ಬಿಗಿ ಭದ್ರತೆಯ ಮಧ್ಯೆ ಖನ್ನಾ ಅವರನ್ನು  ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ‍ಶೀನಾ ಹತ್ಯೆ ಹಾಗೂ ಹತ್ಯೆ ಸಂಚಿನಲ್ಲಿ  ಖನ್ನಾ ಸಕ್ರಿಯವಾಗಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ಕೋರ್ಟ್‌ಗೆ ತಿಳಿಸಿದರು.

‘ಇಂದ್ರಾಣಿ, ಅವರ ಚಾಲಕ ಶ್ಯಾಂ ರೈ ಹಾಗೂ ಸಂಜಯ್‌ ಖನ್ನಾ ಸೇರಿಕೊಂಡು ಶೀನಾಳನ್ನು ಕಾರಿನಲ್ಲಿ ಅಪಹರಿಸಿಕೊಂಡು  ಹೋಗಿ ಮಹಾರಾಷ್ಟ್ರದ ರಾಯಗಢನ ಕಾಡಿನಲ್ಲಿ ಕತ್ತು ಹಿಸುಕಿ ಸಾಯಿಸಿದರು. ನಂತರ ಆಕೆಯ ದೇಹದ ಮೇಲೆ ಪೆಟ್ರೋಲ್‌ ಸುರಿದು ಸುಟ್ಟುಹಾಕಿದರು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮುಂಬೈಗೆ ಬಂದ ಮಿಖಾಯಿಲ್‌: ಶೀನಾಳ ಸಹೋದರ ಮಿಖಾಯಿಲ್‌ ಅವರನ್ನು ಹೆಚ್ಚಿನ ವಿಚಾರಣೆಗಾಗಿ  ಶುಕ್ರವಾರ ಗುವಾಹಟಿಯಿಂದ ವಿಮಾ ನದ ಮೂಲಕ ಮುಂಬೈಗೆ ಕರೆದು ಕೊಂಡು ಬರಲಾಯಿತು. ಮಿಖಾಯಿಲ್‌ ಜತೆ ಅವರ ಸ್ನೇಹಿತ ರೊಬ್ಬರು ಕೂಡ ಇದ್ದಾರೆ.  ಸಹೋದ ರಿಯ ಕೊಲೆ ಪ್ರಕರ ಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಸಹಕಾರ ನೀಡುವುದಾಗಿ ಅವರು ಹೇಳಿದ್ದಾರೆ.

ಈ ನಡುವೆ ಮುಂಬೈ ಪೊಲೀಸರ ತಂಡವೊಂದು ಶೀನಾ ಕೊಲೆಯಾದ ಸ್ಥಳಕ್ಕೆ ಭೇಟಿ ನೀಡಿತು. ತಂಡವು ಇನ್ನಷ್ಟು ಪುರಾವೆ ಕಲೆ ಹಾಕುವ ಸಾಧ್ಯತೆ ಇದೆ.

ಅವಕಾಶ: ಇಂದ್ರಾಣಿ ಭೇಟಿಗೆ ಅವಕಾಶ ನೀಡುವಂತೆ ಕೋರಿ ಅವರ ವಕೀಲರು ಸಲ್ಲಿಸಿರುವ ಮನವಿಯನ್ನು ಸ್ಥಳೀಯ ನ್ಯಾಯಾಲಯ ಪುರಸ್ಕರಿಸಿದೆ.

ಪೊಲೀಸರು ಇಂದ್ರಾಣಿ ಅವರ ಭೇಟಿಗೆ ಅವಕಾಶ ಮಾಡಿಕೊಡುತ್ತಿಲ್ಲ ಎಂದು ಮನವಿಯಲ್ಲಿ ದೂರಲಾಗಿತ್ತು. ಆರೋಪಿಯ ಹಕ್ಕುಗಳಿಗೆ ಸಂಬಂಧಿಸಿ ಸುಪ್ರೀಂಕೋರ್ಟ್‌ ಹಾಕಿ ಕೊಟ್ಟಿರುವ ಮಾರ್ಗಸೂಚಿಯನ್ನು ಪಾಲಿಸುವಂತೆ ನ್ಯಾಯಾಲಯವು ಪೊಲೀಸರಿಗೆ ನಿರ್ದೇಶನ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT