ADVERTISEMENT

ಶೀನಾ ಪ್ರಕರಣ: ನ್ಯಾಯಾಂಗ ವಶಕ್ಕೆ ಪೀಟರ್‌ ಮುಖರ್ಜಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2015, 13:17 IST
Last Updated 1 ಡಿಸೆಂಬರ್ 2015, 13:17 IST

ಮುಂಬೈ (ಪಿಟಿಐ): ಶೀನಾ ಬೋರಾ ಕೊಲೆ ಪ್ರಕರಣದ ಆರೋಪಿ ಪೀಟರ್ ಮುಖರ್ಜಿಯನ್ನು ಸ್ಥಳೀಯ ನ್ಯಾಯಾಲಯ, ಡಿಸೆಂಬರ್ 14ರ ತನಕ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ.

ಸಿಬಿಐ ವಶದ ಅವಧಿ ಮುಗಿದ ಕಾರಣ ಪೀಟರ್‌ನನ್ನು ಮಂಗಳವಾರ ಇಲ್ಲಿನ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ವೇಳೆ ಸಿಬಿಐ ಪರ ವಕೀಲೆ ಕವಿತಾ ಪಾಟೀಲ್‌, ಆರೋಪಿಯ ವಿಚಾರಣೆ ಪೂರ್ಣಗೊಂಡಿದ್ದು, ನ್ಯಾಯಾಂಗ ವಶಕ್ಕೆ ನೀಡಬಹುದು ಎಂದರು.

ಬಳಿಕ ಮ್ಯಾಜಿಸ್ಟ್ರೇಟ್‌ ಎನ್‌.ಬಿ.ಶಿಂಧೆ, ‘ಡಿಸೆಂಬರ್ 14ರ ವರೆಗೂ ಆರೋಪಿಯನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ’ ಎಂದು ಪ್ರಕಟಿಸಿದರು.

ADVERTISEMENT

ನ್ಯಾಯಾಲಯದ ಪ್ರಕ್ರಿಯೆ ಮುಗಿದ ನಂತರ ಪೀಟರ್‌ನನ್ನು ವ್ಯಾಪಕ ಭದ್ರತೆಯ ಆರ್ಥರ್‌ ರೋಡ್‌ ಜೈಲಿಗೆ ಕರೆದೊಯ್ಯಲಾಯಿತು. ಪ್ರಕರಣ ಇತರ ಆರೋಪಿಗಳಾದ ಸಂಜೀವ್ ಖನ್ನಾ ಹಾಗೂ ಶ್ಯಾಮರಾವ್‌ ರೈ ಈಗಾಗಲೇ ಇದೇ ಜೈಲಿನಲ್ಲಿದ್ದಾರೆ.

ನವೆಂಬರ್ 19ರಂದು ಪೀಟರ್‌ನನ್ನು ಬಂಧಿಸಿದ್ದ ಸಿಬಿಐ, 11 ದಿನಗಳ ಕಾಲ ವಶಕ್ಕೆ ಪಡೆದಿತ್ತು. ಈ ಅವಧಿಯಲ್ಲಿ ಕೋರ್ಟ್‌ ಅನುಮತಿ ಪಡೆದು ಸುಳ್ಳುಪತ್ತೆ ಪರೀಕ್ಷೆ ನಡೆಸಿತ್ತು.

ಜಾಮೀನಿಗೆ ಶೀಘ್ರವೇ ಅರ್ಜಿ: ನ್ಯಾಯಾಲಯದ ಹೊರಗೆ ಪ್ರತಿಕ್ರಿಯಿಸಿದ ಪೀಟರ್‌ ಅವರ ಸಹೋದರ ಗೌತಮ್, ‘ಪೀಟರ್ ಮುಗ್ಧರಾಗಿದ್ದು, ನ್ಯಾಯಕ್ಕೆ ಜಯ ಸಿಗಲಿದೆ’ ಎಂದರು. ಅಲ್ಲದೇ ಜಾಮೀನು ಕೋರಿ ಶೀಘ್ರವೇ ಸೆಷೆನ್ಸ್ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವುದಾಗಿ ತಿಳಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.