ADVERTISEMENT

ಸಂಜಯ್‌ ದತ್‌ಗೆ ತಾತ್ಕಾಲಿಕ ರಜೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2014, 19:57 IST
Last Updated 24 ಡಿಸೆಂಬರ್ 2014, 19:57 IST

ಪುಣೆ (ಪಿಟಿಐ): 14 ದಿನಗಳ ತಾತ್ಕಾಲಿಕ ರಜೆಯ (ಫರ್ಲೊ) ಮೇಲೆ ನಟ ಸಂಜಯ್‌ ದತ್‌ ಅವ­ರನ್ನು ಯರವಾಡ ಕೇಂದ್ರ ಕಾರಾ­ಗೃಹದಿಂದ ಬುಧವಾರ ಬಿಡುಗಡೆ ಮಾಡಲಾಯಿತು. ಸಂಜಯ್‌ ದತ್‌ ಸಲ್ಲಿಸಿದ್ದ ಫರ್ಲೊ ಅರ್ಜಿಯನ್ನು ಪೊಲೀಸ್‌ ಅಧಿಕಾರಿಗಳು ಮಂಗಳವಾರ ಮಾನ್ಯ ಮಾಡಿದ್ದರು.

ಮುಂಬೈ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಅವರಿಗೆ 2013ರಲ್ಲಿ ಐದು ವರ್ಷ ಜೈಲುಶಿಕ್ಷೆ ವಿಧಿಸಲಾಗಿತ್ತು. 2013ರ ಮೇ ನಿಂದ 2014ರ ಮೇ ವರೆಗಿನ ಅವಧಿಯಲ್ಲಿ  ಅವರು ಸುಮಾರು 118 ದಿನಗಳನ್ನು ಪೆರೋಲ್‌ ಮತ್ತು ಫರ್ಲೊ ಮೇಲೆ ಜೈಲಿನಿಂದ ಹೊರಗೇ ಕಳೆದಿದ್ದಾರೆ.

‘ಸಂಜಯ್‌ ದತ್‌ ಅವರನ್ನು 14 ದಿನಗಳ ಫರ್ಲೊ ಮೇಲೆ ಬೆಳಿಗ್ಗೆ 9 ಗಂಟೆಗೆ ಬಿಡುಗಡೆ ಮಾಡಲಾಯಿತು. ಫರ್ಲೊ ಪ್ರತಿಯೊಬ್ಬ ಕೈದಿಯ ಹಕ್ಕು. ದತ್‌ ಅವರು ತಾತ್ಕಾಲಿಕ ರಜೆಗಾಗಿ ಯಾವ ಕಾರಣ ನೀಡಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ಅವರ ಫರ್ಲೊ ಅರ್ಜಿಗೆ ಸಂಬಂಧಿಸಿದಂತೆ ಪೊಲೀಸ್‌ ವರದಿ ಬಂದಿದ್ದರಿಂದ ಅವರನ್ನು ಬಿಡುಗಡೆ ಮಾಡಿದೆವು’ ಎಂದು ಹೆಚ್ಚುವರಿ ಪೊಲೀಸ್‌ ಮಹಾ­ನಿರ್ದೇಶಕಿ (ಬಂದಿಖಾನೆ) ಮೀರನ್‌ ಬೊರ್ವಾಂಕರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.