ADVERTISEMENT

ಸಂಸದರ ಅಮಾನತು; ಕಲಾಪಕ್ಕೆ ಬಹಿಷ್ಕಾರ

ಒಗ್ಗೂಡಿದ ವಿರೋಧ ಪಕ್ಷಗಳು

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2015, 19:30 IST
Last Updated 3 ಆಗಸ್ಟ್ 2015, 19:30 IST

ನವದೆಹಲಿ (ಪಿಟಿಐ): ಲೋಕಸಭೆ ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ 25 ಕಾಂಗ್ರೆಸ್ ಸಂಸದರನ್ನು ಸೋಮವಾರ ಅಮಾನತುಗೊಳಿಸಿದ  ಸ್ಪೀಕರ್‌ ಸುಮಿತ್ರಾ ಮಹಾಜನ್‌ ನಿರ್ಧಾರ ಚದುರಿ ಹೋಗಿದ್ದ ವಿರೋಧ ಪಕ್ಷಗಳನ್ನು ಒಗ್ಗೂಡುವಂತೆ ಮಾಡಿದೆ.

ಒಂದು ರೀತಿಯಲ್ಲಿ ಸ್ಪೀಕರ್‌ ನಿರ್ಧಾರ ಕಾಂಗ್ರೆಸ್‌ಗೆ ವರವಾಗಿ ಪರಿಣಮಿಸಿದ್ದು ಕನಿಷ್ಠ 9 ವಿರೋಧ ಪಕ್ಷಗಳು ಅದರ ಬೆಂಬಲಕ್ಕೆ ಧಾವಿಸಿವೆ.  ಸಂಸದರ ಅಮಾನತು  ನಿರ್ಧಾರ ವಿರೋಧಿಸಿ ಮುಂದಿನ ಐದು ದಿನ ಸಂಸತ್ ಕಲಾಪ ಬಹಿಷ್ಕರಿಸುವುದಾಗಿ  ವಿರೋಧ ಪಕ್ಷಗಳು ಹೇಳಿವೆ.

ತೃಣಮೂಲ ಕಾಂಗ್ರೆಸ್‌ (ಟಿಎಂಸಿ), ರಾಷ್ಟ್ರೀಯವಾದಿ ಕಾಂಗ್ರೆಸ್‌ ಪಕ್ಷ (ಎನ್‌ಸಿಪಿ), ಸಂಯುಕ್ತ ಜನತಾದಳ (ಜೆಡಿಯು), ರಾಷ್ಟ್ರೀಯ ಜನತಾದಳ (ಆರ್‌ಜೆಡಿ), ಇಂಡಿಯನ್ ಯೂನಿಯನ್‌ ಮುಸ್ಲಿಂ ಲೀಗ್ (ಐಯುಎಂಎಲ್‌) ಹಾಗೂ ಎಡ ಪಕ್ಷಗಳು ನಮ್ಮ ಬೆಂಬಲಕ್ಕೆ ನಿಂತಿವೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ  ತಿಳಿಸಿದರು.

ಅಮಾನತು ಆದೇಶ ವಿರೋಧಿಸಿ ಕಾಂಗ್ರೆಸ್ ಸಂಸದರು ಮಂಗಳವಾರ ಸಂಸತ್‌ ಭವನದ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಇನ್ನುಳಿದ ವಿರೋಧ ಪಕ್ಷಗಳ ಸಂಸದರೂ ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಸಮಾಜವಾದಿ ಪಕ್ಷದ (ಎಸ್‌ಪಿ) ಬೆಂಬಲ ಪಡೆಯಲು ವರಿಷ್ಠರೊಂದಿಗೆ ಮಾತುಕತೆ ನಡೆದಿದೆ ಎಂದು ಅವರು ತಿಳಿಸಿದರು. ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಎಎಪಿ ಕೂಡ ಮುಂದಿನ ಐದು ದಿನ ಸಂಸತ್ ಕಲಾಪ ಬಹಿಷ್ಕರಿಸಿ ಕಾಂಗ್ರೆಸ್‌ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಾಗಿ  ಹೇಳಿದೆ.

ನಾಯಕರ ಆಕ್ರೋಶ: ಇದೊಂದು ಅತ್ಯಂತ ಕಠಿಣ ನಿರ್ಧಾರ. ಸುಮಿತ್ರಾ ಮಹಾಜನ್‌ ಲೋಕಸಭೆಯ ವಿರೋಧ ಪಕ್ಷದ ಸದಸ್ಯರಾಗಿದ್ದಾಗ ಇಂಥ ಅನೇಕ ಪ್ರತಿಭಟನೆಗಳನ್ನು ನಡೆಸಿದ್ದರು ಎಂದು ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಸಂಸದೀಯ ಪ್ರಜಾಪ್ರಭುತ್ವ ಎತ್ತಿ ಹಿಡಿಯುವ ನಿಟ್ಟಿನಲ್ಲಿ ತಮ್ಮ ಪಕ್ಷ ಸ್ಪೀಕರ್‌ ಕ್ರಮವನ್ನು ವಿರೋಧಿಸಲಿದೆ.

ಕಾಂಗ್ರೆಸ್‌ ಬೆಂಬಲಕ್ಕೆ ನಿಲ್ಲಲು ಪಕ್ಷದ ವರಿಷ್ಠೆ ಮಮತಾ ಬ್ಯಾನರ್ಜಿ ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎಂದು ಟಿಎಂಸಿ ಸಂಸದೀಯ ಪಕ್ಷದ ನಾಯಕ ಸುದೀಪ್ ಬಂಡೋಪಾಧ್ಯಾಯ ಸ್ಪಷ್ಟಪಡಿಸಿದರು. ತುರ್ತು ಪರಿಸ್ಥಿತಿ ಮತ್ತೆ ಎದುರಾಗಲಿದೆ ಎಂಬ ಎಲ್‌.ಕೆ .ಆಡ್ವಾಣಿ ಅವರ ಆತಂಕ ನಿಜವಾಗುತ್ತಿದೆ ಎಂದು ಅನಿಸುತ್ತಿದೆ ಎಂದು ಎನ್‌ಸಿಪಿ ನಾಯಕ ತಾರಿಕ್‌ ಅನ್ವರ್ ಕಳವಳ ವ್ಯಕ್ತಪಡಿಸಿದರು.
*****
ಗುಜರಾತ್‌ ವಿಧಾನ ಸಭೆಯಲ್ಲಿ ವಿರೋಧ ಪಕ್ಷಗಳ  ಸದಸ್ಯರ ಅಮಾನತು ಸಂಪ್ರದಾಯವನ್ನು ಇಲ್ಲಿಯೂ ಅನುಸರಿಸಲಾಗುತ್ತಿದೆ. ಗುಜರಾತ್‌ ಮಾದರಿ ಎಂದರೆ ಇದೇ ಇರಬೇಕು
- ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ
*
ವಿರೋಧಿಗಳನ್ನು ದಮನಿಸುವ ಬಿಜೆಪಿ ನೀತಿ ಈಗ ದೇಶದ ಪ್ರಜಾಪ್ರಭುತ್ವದ ದೇಗುಲವನ್ನು ತಲುಪಿದೆ.  ಇದರ ವಿರುದ್ಧ ಸಂಘಟಿತ  ಹೋರಾಟ ನಡೆಸಬೇಕು 
- ಅಹ್ಮದ್‌ ಪಟೇಲ್‌, ಸೋನಿಯಾ ರಾಜಕೀಯ ಕಾರ್ಯದರ್ಶಿ

ಹಿಂದಿನ ಅಮಾನತು ಘಟನೆಗಳು...
*1989:  ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಬಜೆಟ್‌ ಅಧಿವೇಶನದ ವೇಳೆ ಏಕಕಾಲಕ್ಕೆ 58 ಸಂಸದರನ್ನು ಅಮಾನತು ಮಾಡಲಾಗಿತ್ತು. ಮರುದಿನ ಐದು ಸಂಸದರನ್ನು ಅಮಾನತು ಮಾಡಲಾಗಿತ್ತು. ಅಮಾನತುಗೊಂಡವರ ಸಂಖ್ಯೆ 63ಕ್ಕೆ ಏರಿತ್ತು. ಸಂಸತ್‌ ಇತಿಹಾಸದಲ್ಲಿ ಅತಿ ದೊಡ್ಡ ಸಾಮೂಹಿಕ  ಅಮಾನತು ಪ್ರಕರಣ ಇದಾಗಿದೆ.
* 2012: ಲೋಕಸಭಾ ಕಲಾಪಕ್ಕೆ ಅಡ್ಡಿಪಡಿಸಿದ 12 ಸಂಸದರ ಅಮಾನತು
* 2013: ತೆಲಂಗಾಣ ಪ್ರತ್ಯೇಕ ರಾಜ್ಯಕ್ಕೆ ಒತ್ತಾಯಿಸಿ ಸಂಸತ್ತಿನ ಚಳಿಗಾಲ ಅಧಿವೇಶನಕ್ಕೆ ಅಡ್ಡಿಪಡಿಸಿದ 17 ಆಂಧ್ರ  ಸಂಸದರ ಅಮಾನತು
* ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಸಮಾಜವಾದಿ ನಾಯಕರಾದ ಡಾ. ರಾಮಮನೋಹರ ಲೋಹಿಯಾ, ಮಧು ಲಿಮಯೇ ಅವರನ್ನು ಅಮಾನತು ಮಾಡಲಾಗಿತ್ತು.
* 1963, 1972,ಮತ್ತು 1987 ರಲ್ಲಿ ಅನೇಕ ಸಂಸದರಿಗೆ ದಂಡ ವಿಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT