ADVERTISEMENT

ಸದನದಲ್ಲಿ ಮಾತನಾಡಿ ಪೇಚಿಗೆ ಸಿಲುಕಿದ ಜಗನ್‌

​ಪ್ರಜಾವಾಣಿ ವಾರ್ತೆ
Published 24 ಜೂನ್ 2014, 19:30 IST
Last Updated 24 ಜೂನ್ 2014, 19:30 IST

ಹೈದರಾಬಾದ್‌(ಪಿಟಿಐ): ಭ್ರಷ್ಟಾಚಾರದ ಕುರಿತು ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಮಾತನಾಡಿದ ವೈಎಸ್ಆರ್‌ ಕಾಂಗ್ರೆಸ್ ಶಾಸಕ ವೈ.ಎಸ್.ಜಗನ್‌ ಮೋಹನ್‌ ರೆಡ್ಡಿ, ತಾವೇ ಮುಜುಗರಕ್ಕೆ ಒಳಗಾದ ಘಟನೆ ಮಂಗಳವಾರ ನಡೆಯಿತು.

ಸದನದಲ್ಲಿ ಮೊದಲ ಬಾರಿಗೆ ವಿರೋಧಪಕ್ಷದ ನಾಯಕನ ಸ್ಥಾನದಲ್ಲಿ ಜಗನ್‌ ಮಾತನಾಡಿದರು. ಕಪ್ಪು ಹಣದ ಕುರಿತು ಚರ್ಚೆ ನಡೆಯುತ್ತಿದ್ದಾಗ ಅವರು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಗುರಿಮಾಡಲು ಮುಂದಾದರು. ಆದರೆ ಆಡಳಿತಾರೂಢ ಟಿಡಿಪಿ ಸದಸ್ಯರು ಇದಕ್ಕೆ ಸರಿಯಾದ ಪ್ರತ್ಯುತ್ತರ ನೀಡಿದರು. ಜಗನ್‌ ಅವರ ಭ್ರಷ್ಟಾಚಾರ ಪ್ರಕರಣಗಳನ್ನು ಸದನದಲ್ಲಿ ಪ್ರಸ್ತಾಪಿಸಿದ್ದರಿಂದ ಅವರು ಮುಜುಗರಕ್ಕೆ ಒಳಗಾಗಬೇಕಾಯಿತು.

‘16 ತಿಂಗಳು ಕಾರಾಗೃಹದಲ್ಲಿ ಕಳೆದವರು ಈ ಸದನದಲ್ಲಿ ಯಾರಾದರೂ ಇದ್ದಾರೆಯೇ? ಸದನದ­ಲ್ಲಿನ ಸದಸ್ಯರ ಆಸ್ತಿ ಮೌಲ್ಯ ₨1,100 ಕೋಟಿ ಇದೆಯೇ? ಒಂದು ಲಕ್ಷ ಕೋಟಿ ಅಕ್ರಮ ಆಸ್ತಿ ಸಂಪಾ­ದಿಸಿದ ಆರೋಪ ಹೊಂದಿರುವ ಶಾಸಕರು ಇದ್ದಾರೆಯೇ? ಯಾವ ಸದಸ್ಯರ ವಿರುದ್ಧ ಸಿಬಿಐ ಆರೋಪ­ಪಟ್ಟಿ ದಾಖಲಿಸಿದೆ?’ ಎಂದು ಸಂಸದೀಯ ವ್ಯವಹಾರಗಳ ಸಚಿವ ಯಾನಮಾಲ ರಾಮಕೃಷ್ಣುಡು ಪ್ರಶ್ನಿಸಿದರು. ಈ ಅನಿರೀಕ್ಷಿತ ಪ್ರಶ್ನೆಗಳಿಂದ ದಿಕ್ಕುತೋಚ­ದಾದ  ಜಗನ್‌ ನಿರುತ್ತರರಾದರು. 

ಪೋಲವರಂ: ಆಂಧ್ರ ಮನವಿ
ಹೈದರಾಬಾದ್‌ (ಪಿಟಿಐ):
ಭದ್ರಾಚಲಂ ವಿಭಾಗದ ಏಳು ಕಂದಾಯ ಮಂಡಲಗಳನ್ನು ಆಂಧ್ರಪ್ರದೇಶಕ್ಕೆ ಸೇರಿಸಿರುವ ಕೇಂದ್ರದ ಸುಗ್ರೀವಾಜ್ಞೆಯನ್ನು ಶೀಘ್ರವೇ ಕಾನೂನಾಗಿ ಬದಲಾಯಿಸಬೇಕು ಎಂದು ಕೇಂದ್ರ ಸರ್ಕಾರವನ್ನು ವಿನಂತಿಸುವ ನಿರ್ಣಯವನ್ನು ಆಂಧ್ರ ಪ್ರದೇಶ ವಿಧಾನಸಭೆ ಅಂಗೀಕರಿಸಿದೆ.

ಪೋಲವರಂ ವಿವಿಧೋ­ದ್ದೇಶ ನೀರಾವರಿ ಯೋಜನೆ-­ಯನ್ನು ಮೂರು ವರ್ಷದ ಒಳಗೆ ಪೂರ್ಣಗೊಳಿಸಲು ಕೋರಿ ಮಂಡಿಸಲಾದ ನಿರ್ಣಯವನ್ನೂ ವಿಧಾನಸಭೆ ಮಂಗಳವಾರ ಅಂಗೀಕರಿಸಿತು. ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಸದನದಲ್ಲಿ ಮಂಡಿಸಿದ ನಿರ್ಣಯವನ್ನು ಅವಿರೋಧ­ವಾಗಿ ಅಂಗೀಕರಿಸಲಾ­ಯಿತು.  ಕಳೆದ ತಿಂಗಳು ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಆಂಧ್ರ ಪ್ರದೇಶ ರಾಜ್ಯಕ್ಕೆ  ಏಳು ಕಂದಾಯ ಮಂಡಲಗಳನ್ನು ಹಸ್ತಾಂ­ತರ ಮಾಡುವ ಸುಗ್ರೀವಾಜ್ಞೆಯನ್ನು ಹೊರಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.