ADVERTISEMENT

ಸರ್ಕಾರಿ ಅಧಿಕಾರಿಗಳೂ ಆಸ್ತಿ ವಿವರ ಘೋಷಿಸುವಂತೆ ಯೋಗಿ ಆದಿತ್ಯನಾಥ್‌ ಆದೇಶ

ಪಿಟಿಐ
Published 20 ಮಾರ್ಚ್ 2017, 17:05 IST
Last Updated 20 ಮಾರ್ಚ್ 2017, 17:05 IST
ಸರ್ಕಾರಿ ಅಧಿಕಾರಿಗಳೂ ಆಸ್ತಿ ವಿವರ ಘೋಷಿಸುವಂತೆ ಯೋಗಿ ಆದಿತ್ಯನಾಥ್‌ ಆದೇಶ
ಸರ್ಕಾರಿ ಅಧಿಕಾರಿಗಳೂ ಆಸ್ತಿ ವಿವರ ಘೋಷಿಸುವಂತೆ ಯೋಗಿ ಆದಿತ್ಯನಾಥ್‌ ಆದೇಶ   

ಲಖನೌ: ತಮ್ಮ ಸಂಪುಟದ ಸಚಿವರು ಆಸ್ತಿ ವಿವರ ಘೋಷಿಸುವಂತೆ ಆದೇಶಿಸಿದ ಬೆನ್ನಲ್ಲೇ ಸರ್ಕಾರಿ ಅಧಿಕಾರಿಗಳೂ 15 ದಿನಗಳೊಳಗೆ ತಮ್ಮ ಆಸ್ತಿ ವಿವರವನ್ನು ಘೋಷಿಸುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಆದೇಶಿಸಿದ್ದಾರೆ.

‘ಭ್ರಷ್ಟಾಚಾರವನ್ನು ಬೇರು ಸಹಿತ ಕಿತ್ತೊಗೆಯುವ ಉದ್ದೇಶದಿಂದ ಮುಖ್ಯಮಂತ್ರಿಯವರು ಈ ಆದೇಶ ಹೊರಡಿಸಿದ್ದಾರೆ. ಅಧಿಕಾರಿಗಳು 15 ದಿನಗಳೊಳಗೆ ತಮ್ಮ ಸ್ಥಿರ ಹಾಗೂ ಚರಾಸ್ತಿಯ ವಿವರವನ್ನು ಘೋಷಿಸಬೇಕು’ ಎಂದು ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್‌ ಮೌರ್ಯ ಹೇಳಿದ್ದಾರೆ.

ಲೋಕ ಭವನದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಮೊದಲ ಸಭೆಯಲ್ಲಿ ಆದಿತ್ಯನಾಥ್‌ ಅವರು ಈ ಆದೇಶ ನೀಡಿದ್ದಾರೆ. ಅಲ್ಲದೆ ಬಿಜೆಪಿಯ ‘ಸಂಕಲ್ಪ ಪತ್ರ’ದಲ್ಲಿ (ಚುನಾವಣಾ ಪ್ರನಾಳಿಕೆ) ನೀಡಲಾಗಿದ್ದ ಭರವಸೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ADVERTISEMENT

‘ಅಧಿಕಾರಿಗಳ ಪರಿಚಯದ ಸಭೆ ಇದಾಗಿತ್ತು. ಸುಮಾರು 65 ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಆಯಾ ಅಧಿಕಾರಿಗಳ ಇಲಾಖೆಯ ವ್ಯಾಪ್ತಿಯಲ್ಲಿ ‘ಸಂಕಲ್ಪ ಪತ್ರ’ದ ಭರವಸೆಗಳ ಈಡೇರಿಕೆಗೆ ಕಾರ್ಯಸೂಚಿ ಸಿದ್ಧಪಡಿಸುವಂತೆ ಮುಖ್ಯಮಂತ್ರಿಯವರು ಆದೇಶಿಸಿದ್ದಾರೆ’ ಎಂದು ಕೇಶವ ಪ್ರಸಾದ್‌ ಮೌರ್ಯ ತಿಳಿಸಿದ್ದಾರೆ.

ಕಾನೂನು, ಸುವ್ಯವಸ್ಥೆ ಬಿಗಿಗೊಳಿಸಲು ಸೂಚನೆ
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಬಿಗಿಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಆದಿತ್ಯನಾಥ್‌ ಅವರು ಡಿಜಿಪಿ ಜಾವೀದ್‌ ಅಹ್ಮದ್‌ ಅವರಿಗೆ ಸೂಚಿಸಿದ್ದಾರೆ. ಬಿಎಸ್‌ಪಿ ಮುಖಂಡನ ಕೊಲೆಯಾದ ಕೆಲ ಗಂಟೆಗಳಲ್ಲೇ ಅವರು ಈ ಸೂಚನೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.