ADVERTISEMENT

ಸಲಿಂಗಕಾಮ: ಬಹಿರಂಗ ವಿಚಾರಣೆ

ಪರಿಹಾರಾತ್ಮಕ ಅರ್ಜಿ ಕೈಗೆತ್ತಿಕೊಳ್ಳಲು ಒಪ್ಪಿದ ‘ಸುಪ್ರೀಂ’

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2014, 19:46 IST
Last Updated 3 ಏಪ್ರಿಲ್ 2014, 19:46 IST

ನವದೆಹಲಿ (ಪಿಟಿಐ): ಸಲಿಂಗ ಕಾಮ ಅಪರಾಧ ಎಂಬ ತೀರ್ಪಿನ ವಿರುದ್ಧ  ಸಲಿಂಗಿ ಹಕ್ಕುಗಳ ಕಾರ್ಯಕರ್ತರು ಸಲ್ಲಿಸಿದ ಪರಿಹಾರಾತ್ಮಕ ಅರ್ಜಿಗಳನ್ನು ಬಹಿರಂಗವಾಗಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್‌ ಗುರುವಾರ ಒಪ್ಪಿಕೊಂಡಿದೆ.

‘ಸಂಬಂಧಪಟ್ಟ ದಾಖಲೆಗಳನ್ನು ನೋಡಿದ ಬಳಿಕ ಅರ್ಜಿ ಪರಿಶೀಲಿಸ­ಲಾಗುತ್ತದೆ’ ಎಂದು ಮುಖ್ಯ­ನ್ಯಾಯ­ಮೂರ್ತಿ ಪಿ.ಸದಾಶಿವಂ ಅವರಿದ್ದ ಪೀಠ ಹೇಳಿತು.

ಸಾಮಾನ್ಯವಾಗಿ ಪರಿಹಾರಾತ್ಮಕ ಅರ್ಜಿಗಳನ್ನು ನ್ಯಾಯಾಧೀಶರ ಕೊಠಡಿ­ಯಲ್ಲಿ ವಿಚಾರಣೆ ಮಾಡಲಾಗುತ್ತದೆ.
ಅಲ್ಲದೇ ಇಲ್ಲಿ ವಾದಮಂಡನೆಗೆ ಕೂಡ ಅವಕಾಶ ಇರುವುದಿಲ್ಲ. ಆದರೆ ಈ ಪ್ರಕರಣದಲ್ಲಿ ಬಹಿರಂಗ ವಿಚಾರಣೆಗೆ ಕೋರ್ಟ್‌ ಒಪ್ಪಿಕೊಂಡಿದೆ.

ಸಲಿಂಗ ಕಾಮ  ಅಪರಾಧ ಎಂದು 2013ರ ಡಿಸೆಂಬರ್‌ 11ರಂದು ಸುಪ್ರೀಂಕೋರ್ಟ್‌ ನೀಡಿದ್ದ ತೀರ್ಪು ದೋಷಪೂರ್ಣವಾಗಿದೆ   ಎಂದು ಅರ್ಜಿದಾರರು ದೂರಿದ್ದರು.  ನಾಜ್‌ ಪ್ರತಿಷ್ಠಾನ ಕೂಡ ಅರ್ಜಿ ಸಲ್ಲಿಸಿತ್ತು.

‘ 2012ರ ಮಾರ್ಚ್‌ 27ರಂದು ಈ ತೀರ್ಪು ಕಾಯ್ದಿರಿಸಲಾಗಿತ್ತು. ಆದರೆ ಸುಮಾರು 21 ತಿಂಗಳ ಬಳಿಕ ತೀರ್ಪು ಹೊರಬಿತ್ತು.
ಈ ಅವಧಿಯಲ್ಲಿ ಕಾನೂನು ತಿದ್ದುಪಡಿ ಸೇರಿದಂತೆ ಹಲವಾರು ಬದಲಾವಣೆಗಳು ಆಗಿವೆ. ಆದರೆ ತೀರ್ಪು ನೀಡುವಾಗ ಪೀಠವು ಇವುಗಳನ್ನು ಪರಿಗಣಿಸಲೇ ಇಲ್ಲ’ ಎಂದು ಹಿರಿಯ ವಕೀಲ ಅಶೋಕ್‌ ದೇಸಾಯಿ ಕೋರ್ಟ್‌ಗೆ ತಿಳಿಸಿದರು.

ವಕೀಲರಾದ ಹರೀಶ್‌ ಸಾಳ್ವೆ, ಮುಕುಲ್‌ ರೋಹಟಗಿ, ಆನಂದ್‌ ಗ್ರೋವರ್‌ ಕೂಡ ದೇಸಾಯಿ ಅವರ ಮಾತನ್ನು ಅನುಮೋದಿಸಿದರು. ಅಲ್ಲದೇ  ಪರಿಹಾರಾತ್ಮಕ ಅರ್ಜಿ­ಗಳನ್ನು ಬಹಿರಂಗ­ವಾಗಿ ವಿಚಾರಣೆ ಮಾಡಬೇಕೆಂದು ಕೋರಿದರು.

‘ಈ ಪ್ರಕರಣವನ್ನು ದ್ವಿಸದಸ್ಯ ಪೀಠದ ಬದಲು ಸಂವಿಧಾನ ಪೀಠ ವಿಚಾರಣೆ ಮಾಡಬೇಕಿತ್ತು’ ಎಂದೂ ಅವರು ವಾದಿಸಿದರು.

ಪ್ರಮುಖ ಘಟನಾವಳಿಗಳು
*ಜುಲೈ 2, 2009:  ಸಲಿಂಗ ಕಾಮ ಅಪರಾಧವಲ್ಲ–ದೆಹಲಿ ಹೈಕೋರ್ಟ್‌್

*ಡಿಸೆಂಬರ್‌ 11, 2013: ಸಲಿಂಗ ಕಾಮ ಅಪರಾಧ–ಸುಪ್ರೀಂಕೋರ್ಟ್‌

*ಡಿಸೆಂಬರ್‌ 20, 2013: ತೀರ್ಪು ಪುನರ್‌ಪರಿಶೀಲಿಸುವಂತೆ ಕೋರಿ ಸುಪ್ರೀಂಗೆ ಕೇಂದ್ರದ ಮನವಿ

*ಜನವರಿ 28,  2014: ಕೇಂದ್ರದ ಪುನರ್‌ ಪರಿಶೀಲನಾ ಅರ್ಜಿ ವಜಾ ಮಾಡಿದ ಸುಪ್ರೀಂಕೋರ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT