ADVERTISEMENT

ಸಹರಾನ್‌ಪುರ ಗಲಭೆ: ಕರ್ಫ್ಯೂ ಜಾರಿ

​ಪ್ರಜಾವಾಣಿ ವಾರ್ತೆ
Published 26 ಜುಲೈ 2014, 10:30 IST
Last Updated 26 ಜುಲೈ 2014, 10:30 IST

ಸಹರಾನ್‌ಪುರ (ಪಿಟಿಐ): ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಎರಡು ಕೋಮುಗಳ ನಡುವೆ ಉಂಟಾದ ಗುಂಪು ಘರ್ಷಣೆಯಲ್ಲಿ ಶನಿವಾರ ಇಬ್ಬರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಐವರು ಪೊಲೀಸರು ಸೇರಿದಂತೆ ಸುಮಾರು 12 ಮಂದಿ ಗಾಯಗೊಂಡಿದ್ದು, ಗಲಭೆ ಪೀಡಿತ ಪ್ರದೇಶದಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ.

‘ಕಾರ್ಮಿಕ ಮುಖಂಡ ಹರೀಶ್‌ ಕೋಚಾರ್‌ ಮತ್ತು ಅಪರಿಚಿತರೊಬ್ಬರು ಗಲಭೆಯಲ್ಲಿ ಸಾವನ್ನಪ್ಪಿದ್ದಾರೆ. ಗುಂಡೇಟಿನಿಂದ ಪೊಲೀಸ್‌ ಸಿಬ್ಬಂದಿಯೊಬ್ಬರು ತೀರ್ವವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಸಹರಾನ್‌ಪುರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತನ್ವೀರ್‌ ಜಾಫರ್‌ ಅಲಿ ತಿಳಿಸಿದ್ದಾರೆ.

ಗಲಭೆ ನಿಯಂತ್ರಿಸಲು ರಬ್ಬರ್‌ ಬುಲೆಟ್‌ಗಳನ್ನು ಹಾರಿಸಲಾಗಿದೆ. ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಆರು ಕಡೆ ಕರ್ಫ್ಯೂ ಜಾರಿಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

‘ಭೂ ವಿವಾದಕ್ಕೆ ಸಂಬಂಧಿಸಿದಂತೆ ಎರಡು ಸಮುದಾಯಗಳ ನಡುವೆ ಉಂಟಾದ ಘರ್ಷಣೆ ಗಲಭೆಗೆ ಕಾರಣ ಎಂಬುದು ಗೊತ್ತಾಗಿದೆ. ಗಲಭೆ ನಿಯಂತ್ರಿಸಲು ವಿಶೇಷ ಪಡೆಗಳನ್ನು ನಿಯೋಜಿಸಲಾಗಿದೆ’ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಐಜಿಪಿ ಮುಕುಲ್‌ ಗೋಯಲ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.