ADVERTISEMENT

ಸಾನಿಯಾ ರಾಯಭಾರಿ: ಭುಗಿಲೆದ್ದ ವಿವಾದ

​ಪ್ರಜಾವಾಣಿ ವಾರ್ತೆ
Published 24 ಜುಲೈ 2014, 19:30 IST
Last Updated 24 ಜುಲೈ 2014, 19:30 IST

ಹೈದರಾಬಾದ್‌ (ಪಿಟಿಐ): ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಅವರನ್ನು ತೆಲಂಗಾಣ ಸರ್ಕಾರ ತನ್ನ  ಪ್ರಚಾರ ರಾಯಭಾರಿಯನ್ನಾಗಿ (ಬ್ರಾಂಡ್‌ ಅಂಬಾಸಡರ್‌) ನೇಮಕ ಮಾಡಿದ ಬೆನ್ನಲ್ಲೇ ವಿವಾದ ಭುಗಿಲೆದ್ದಿದೆ. ಪಾಕಿಸ್ತಾನದ ಸೊಸೆಗೆ ಈ ಗೌರವ ನೀಡಿದ ತೆಲಂಗಾಣ ಸರ್ಕಾರದ  ನಿರ್ಧಾರಕ್ಕೆ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಕೆ. ಲಕ್ಷ್ಮಣ್‌ ಆಕ್ಷೇಪ ಎತ್ತಿದ್ದಾರೆ.  ರಾಜ್ಯ ಕಾಂಗ್ರೆಸ್‌ ಸಮಿತಿ ಕೂಡ ಇದಕ್ಕೆ ಧ್ವನಿಗೂಡಿಸಿದ್ದು,   ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ.





 



‘ಪಾಕಿಸ್ತಾನದ ಸೊಸೆ’ ಹಾಗೂ ಮೂಲತಃ ಹೈದರಾಬಾದ್‌ನವರಲ್ಲದ ಹೊರಗಿನ ವ್ಯಕ್ತಿಯೊಬ್ಬರನ್ನು  ತೆಲಂಗಾಣ ಪ್ರಚಾರ ರಾಯಭಾರಿಯನ್ನಾಗಿ ಆಯ್ಕೆ ಮಾಡಿರುವುದು ಎಷ್ಟು ಸರಿ ಎಂದು ಲಕ್ಷ್ಮಣ್‌ ಬುಧವಾರ ಅಸಮಾಧಾನ ವ್ಯಕ್ತಪಡಿಸಿದ್ದರು. ‘ಸಾನಿಯಾ ಈ ಗೌರವಕ್ಕೆ ಅರ್ಹರಲ್ಲ’ ಎಂದು ತೆಲಂಗಾಣ ಕಾಂಗ್ರೆಸ್‌ ಕೂಡ ಹೇಳಿತ್ತು. 

ADVERTISEMENT


ಈ ನಡುವೆ ಸಾನಿಯಾ ವಿವಾದ ಲೋಕಸಭೆಯಲ್ಲಿಯೂ ಪ್ರತಿಧ್ವನಿಸಿದ್ದು,  ವಿವಿಧ ರಾಜಕೀಯ ಪಕ್ಷಗಳು ಪಕ್ಷಭೇದ ಮರೆತು ಟೆನಿಸ್‌ ತಾರೆಯ ಬೆಂಬಲಕ್ಕೆ ನಿಂತಿವೆ.

ಮತ್ತೊಂದು   ಬೆಳವಣಿಗೆಯೊಂದರಲ್ಲಿ ಲಕ್ಷ್ಮಣ್‌ ಹೇಳಿಕೆಯಿಂದ ಬಿಜೆಪಿ ಅಂತರ ಕಾಯ್ದುಕೊಂಡಿದ್ದು, ‘ಇದು ಪಕ್ಷದ ನಿಲುವಲ್ಲ. ಲಕ್ಷ್ಮಣ್‌ ವೈಯಕ್ತಿಕ ನಿಲುವು’ ಎಂದು ವಿವಾದ ಶಮನಗೊಳಿಸಲು ಮುಂದಾಗಿದೆ.   ಬಿಜೆಪಿಯ ಮುಖಂಡರೇ ಲಕ್ಷ್ಮಣ್‌ ಅವರನ್ನು ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ತನ್ನನ್ನು ‘ಹೊರಗಿನವಳು’ ಎಂದು ಬಿಂಬಿಸುವ ಯತ್ನವನ್ನು ತೀವ್ರವಾಗಿ ಖಂಡಿಸಿರುವ ಸಾನಿಯಾ ಮಿರ್ಜಾ, ‘ನಾನು ಹೊರಗಿನವಳಲ್ಲ, ಪಕ್ಕಾ ಹೈದರಾಬಾದಿ. ನನ್ನ ಜೀವನ ಕೊನೆಯ ಉಸಿರು ಇರುವವರೆಗೂ ಭಾರತದಲ್ಲಿ ಇರುತ್ತೇನೆ. ನನ್ನ ಬೇರುಗಳು ಇರುವುದು ಇಲ್ಲಿಯೇ. ನಾನು ಇಲ್ಲಿಯೇ ಸಾಯುತ್ತೇನೆ’ ಎಂದು  ಭಾವನಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.

ಲಕ್ಷ್ಮಣ್ ವಾದವೇನು?: ಮಹಾರಾಷ್ಟ್ರದಲ್ಲಿ ಜನಿಸಿದ ಟೆನಿಸ್‌ ತಾರೆ ನಂತರ ಹೈದರಾಬಾದ್‌ನಲ್ಲಿ ನೆಲೆ ನಿಂತಿದ್ದಾರೆ. ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್‌ ಮಲಿಕ್‌ ಅವರನ್ನು ಮದುವೆಯಾಗಿ  ಆ ದೇಶದ ಸೊಸೆಯಾಗಿದ್ದಾರೆ. ಮೇಲಾಗಿ  ತೆಲಂಗಾಣ ಪ್ರತ್ಯೇಕ ರಾಜ್ಯಕ್ಕಾಗಿ ನಡೆದ ಹೋರಾಟದಲ್ಲಿ ಅವರೆಂದೂ  ಭಾಗವಹಿಸಿರಲಿಲ್ಲ.  ರಾಜ್ಯದ ಪ್ರಚಾರ ರಾಯಭಾರಿಯನ್ನಾಗಿ ನೇಮಕ ಮಾಡಲು ಸಾನಿಯಾಗೆ ಯಾವ ಅರ್ಹತೆಯೂ ಇಲ್ಲ  ಎಂದು ಲಕ್ಷ್ಮಣ್ ತಮ್ಮ ವಾದವನ್ನು ಸಮರ್ಥಿಸಿಕೊಂಡಿದ್ದಾರೆ.

‘ನಾನು ಪಕ್ಕಾ ಹೈದರಾಬಾದಿ’: ‘ನನ್ನ ಕುಟುಂಬ ಶತಮಾನಗಳಿಂದ ಹೈದರಾಬಾದ್‌ನಲ್ಲಿ ನೆಲೆ ನಿಂತಿದೆ. ನನ್ನನ್ನು ಹೊರಗಿನವಳು ಎಂದು ಬಿಂಬಿಸುವ ಯತ್ನವನ್ನು ನಾನು ಖಂಡಿಸುತ್ತೇನೆ’ ಎಂದು ಎಂದು 27 ವರ್ಷದ ಸಾನಿಯಾ, ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ.

‘ಈ ವಿವಾದದಿಂದ ನನಗೆ ತೀವ್ರ ನೋವಾಗಿದೆ. ಇಂತಹ ಕ್ಷುಲ್ಲಕ ವಿಷಯವನ್ನು ಎತ್ತಿಕೊಂಡು ರಾಜಕಾರಣಿಗಳು ಮತ್ತು ಮಾಧ್ಯಮಗಳು ಅನಗತ್ಯವಾಗಿ ಸಮಯ ವ್ಯರ್ಥ ಮಾಡುತ್ತಿವೆ’ ಎಂದು ಅವರು ಹರಿಹಾಯ್ದಿದ್ದಾರೆ.

‘ಹೆರಿಗೆಯ ಸಮಯದಲ್ಲಿ ನನ್ನ ತಾಯಿ ತೀವ್ರ ಅಸ್ವಸ್ಥರಾದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೀಗಾಗಿ ನಾನು ಮುಂಬೈನಲ್ಲಿ ಜನಿಸಬೇಕಾಯಿತು. ಮೂರು ವಾರಗಳಲ್ಲಿಯೇ  ನನನ್ನು ಹೈದರಾಬಾದ್‌ಗೆ ಕರೆ­ತರಲಾಯಿತು. ನನ್ನ ಅಜ್ಜ, ಮುತ್ತಜ್ಜ ಇಲ್ಲಿಯ­ವರೇ.  ನಿಜಾಮ್ ಸರ್ಕಾರದಲ್ಲಿ ಅಧಿಕಾರಿಗಳಾಗಿ ಕೆಲಸ ಮಾಡಿದ್ದಾರೆ. ನನ್ನ ಕುಟುಂಬ ಶತಮಾನಗಳಿಂದ ಇಲ್ಲಿಯೇ  ನೆಲೆ ನಿಂತಿದೆ’ ಎಂದು ಸಾನಿಯಾ ಸಮರ್ಥಿಸಿಕೊಂಡಿದ್ದಾರೆ. 

ಬುಧವಾರ ನಡೆದ ಸಮಾರಂಭದಲ್ಲಿ  ಒಂದು ಕೋಟಿ ರೂಪಾಯಿ ಚೆಕ್‌ ಹಸ್ತಾಂತರಿಸಿ ಮಾತನಾಡಿದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್, ಸಾನಿಯಾ ಅವರನ್ನು ತೆಲಂಗಾಣ ರಾಜ್ಯದ ಪ್ರಚಾರ ರಾಯಭಾರಿ ಎಂದು ಘೋಷಿಸಿದ್ದರು. ಅಲ್ಲದೇ ‘ ಹೈದರಾಬಾದ್‌ನ ಹೆಮ್ಮೆಯ ಕುವರಿ’ ಎಂದು ಬಣ್ಣಿಸಿದ್ದರು.

ಲೋಕಸಭೆಯಲ್ಲೂ ಪ್ರತಿಧ್ವನಿ: ವಿವಾದಕ್ಕೆ ಕಾರಣವಾಗಿರುವ ಬಿಜೆಪಿ ಮುಖಂಡ ಲಕ್ಷ್ಮಣ್‌ ಮೇಲೆ ಮುಗಿಬಿದ್ದಿರುವ  ರಾಜಕೀಯ ಪಕ್ಷಗಳು ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ಪಕ್ಷಭೇದ ಮರೆತು ಸಾನಿಯಾ ಬೆಂಬಲಕ್ಕೆ ನಿಂತಿವೆ. 

‘ಟೆನಿಸ್ ತಾರೆ ಸಾನಿಯಾ ಭಾರತದ ಹೆಮ್ಮೆ. ಸ್ವಂತ ಪರಿಶ್ರಮದಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು, ಗೌರವ ಗಳಿಸಿರುವ ಆಕೆ  ಭಾರತದ ಪ್ರಚಾರ   ರಾಯಭಾರಿಯೂ ಹೌದು’ ಎಂದು ಹೇಳುವ ಮೂಲಕ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಪ್ರಕಾಶ್ ಜಾವಡೇಕರ್ ವಿವಾದ ಶಮನಗೊಳಿಸುವ ಯತ್ನ ಮಾಡಿದ್ದಾರೆ.

‘ಈ ಹೇಳಿಕೆ ಆಕ್ಷೇಪ ವ್ಯಕ್ತಪಡಿಸಿದ ವ್ಯಕ್ತಿಯ ಸಂಸ್ಕೃತಿಯನ್ನು ಬಿಂಬಿಸುತ್ತದೆ’ ಎಂದು ಬಿಜೆಪಿ ನಾಯಕ ಮುರುಳಿ ಮನೋಹರ ಜೋಷಿ ಪ್ರತಿಕ್ರಿಯಿಸಿದ್ದಾರೆ.

‘ನಮ್ಮ ಎಷ್ಟೋ ತಂಡಗಳಿಗೆ ವಿದೇಶಿ ಕೋಚ್‌ಗಳಿದ್ದಾರೆ. ಅವರನ್ನು ಯಾಕೆ ಬಿಜೆಪಿ ವಿರೋಧಿಸುವುದಿಲ್ಲ’ ಎಂದು ಸಮಾಜವಾದಿ ಪಕ್ಷದ ನರೇಶ್‌ ಅಗರ್‌ವಾಲ್‌ ಪ್ರಶ್ನಿಸಿದರು.

‘ಭಾರತಕ್ಕೆ ಹೊರಗಿನವರಿಗಿಂತ ಒಳಗಿನವರಿಂದಲೇ ಹೆಚ್ಚು ಅಪಾಯ ಎಂದು ನೆಹರೂ ಯಾವಾಗಲೂ ಹೇಳುತ್ತಿದ್ದರು. ಬಿಜೆಪಿ, ಶಿವಸೇನಾ, ಆರ್ಎಸ್‌ಎಸ್‌  ಈ ಎಲ್ಲವೂ  ಪ್ರತ್ಯೇಕತೆ ಮತ್ತು ಕೋಮುವಾದ ಬೆಂಬಲಿಸುವ ಶಕ್ತಿಗಳು. ಶಿವಸೇನಾದ ಕೇವಲ 11 ಸಂಸದರು ಮಹಾರಾಷ್ಟ್ರ ಸದನದಲ್ಲಿ ಏನೇನಲ್ಲಾ ಮಾಡಿದರು ಎಂದು ನೀವೆಲ್ಲ ನೋಡಿಲ್ಲವೇ?’ ಎಂದು ಕಾಂಗ್ರೆಸ್‌ ಸಂಸದ ಸೈಫುದ್ದೀನ್‌ ಸೋಜ್‌   ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.