ADVERTISEMENT

ಸಿಂಗ್‌ ಹೇಳಿಕೆಗೆ ಸರ್ಕಾರ ಪಟ್ಟು

ಭ್ರಷ್ಟ ನ್ಯಾಯಮೂರ್ತಿ ವಿವಾದ

​ಪ್ರಜಾವಾಣಿ ವಾರ್ತೆ
Published 23 ಜುಲೈ 2014, 19:30 IST
Last Updated 23 ಜುಲೈ 2014, 19:30 IST

ನವದೆಹಲಿ (ಪಿಟಿಐ): ಮದ್ರಾಸ್‌ ಹೈಕೋರ್ಟ್‌ ಹೆಚ್ಚುವರಿ ನ್ಯಾಯ­ಮೂರ್ತಿ ಸೇವಾ ಅವಧಿ ವಿಸ್ತರಣೆ ವಿವಾದಕ್ಕೆ ಸಂಬಂಧಿಸಿ ಮಾಜಿ ಪ್ರಧಾನಿ ಮನಮೋಹನ್‌  ಸಿಂಗ್‌ ಅವರು  ‘‘ಸ್ಪಷ್ಟ’’ ಹೇಳಿಕೆ ನೀಡಬೇಕು ಎಂದು ಸರ್ಕಾರ ಆಗ್ರಹಿಸಿದೆ.

ನ್ಯಾಯಮೂರ್ತಿಗಳ ನೇಮಕಾತಿ ಮಂಡಳಿಯು  ಯುಪಿಎ ಮೊದಲ ಅವಧಿಯಲ್ಲಿ ಪ್ರಧಾನಿ ಕಚೇರಿ ಸೂಚನೆ ಮೇರೆಗೆ ಈ ನ್ಯಾಯಮೂರ್ತಿ ಅವಧಿ ವಿಸ್ತರಿಸು­ವುದಕ್ಕೆ ಶಿಫಾರಸು ನೀಡಿತ್ತು ಎಂದು ಕಾನೂನು ಸಚಿವ ರವಿಶಂಕರ್‌್ ಪ್ರಸಾದ್‌್ ಮಂಗಳವಾರ ರಾಜ್ಯಸಭೆಯಲ್ಲಿ ಹೇಳಿಕೆ ನೀಡಿದ್ದರು.

‘ನ್ಯಾ. ಮಾರ್ಕಂಡೇಯ ಕಟ್ಜು ಬಹಿರಂಗಪಡಿಸಿದ ಅಂಶಗಳು ಯುಪಿಎ ಅವಧಿಯಲ್ಲಿ ಸರ್ಕಾರ ಯಾವ ರೀತಿ ಕೆಲಸ ಮಾಡಿತ್ತು ಎನ್ನುವುದನ್ನು ತೋರಿಸುತ್ತದೆ. ಆಗ ಪ್ರತಿ ವಿಷಯಕ್ಕೂ ಸರ್ಕಾರ ರಾಜಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿತ್ತು’ ಎಂದು ಸಂಸದೀಯ ವ್ಯವಹಾರ ಸಚಿವ ಎಂ.ವೆಂಕಯ್ಯ ನಾಯ್ಡು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ಸಿಂಗ್‌ ಈ ಬಗ್ಗೆ ಮೌನ ತಾಳಿರು­ವು­ದನ್ನು ನೋಡಿದರೆ ಅನು­ಮಾನ ಬರುತ್ತದೆ. ನ್ಯಾಯಾಂಗದ ಹಿತಾಸಕ್ತಿ­ಯನ್ನು ದೃಷ್ಟಿಯ­ಲ್ಲಿಟ್ಟು­ಕೊಂಡು ಮಾಜಿ ಪ್ರಧಾನಿ ಈ ಬಗ್ಗೆ ಹೇಳಿಕೆ ನೀಡಬೇಕು. ಆಗ ನಡೆದದ್ದಾ­ದರೂ ಏನು?  ಅವರ ಮೇಲೆ  ನಿಜವಾ­ಗಿಯೂ ಒತ್ತಡ ಇತ್ತೇ? ಇತ್ಯಾದಿ ವಿಚಾರಗಳನ್ನು ಅವರು ಮುಚ್ಚುಮರೆ ಇಲ್ಲದೇ ಹೇಳಬೇಕು’ ಎಂದು ನಾಯ್ಡು ಆಗ್ರಹಿಸಿದರು. ‘ಈ ಎಲ್ಲ ಸಂಗತಿಗಳನ್ನು ತಿಳಿದು­ಕೊಳ್ಳುವುದು ಈ ದೇಶದ ಜನರ ಹಕ್ಕು ಕೂಡ ಹೌದು’ ಎಂದೂ ಅವರು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.