ADVERTISEMENT

ಸುದ್ದಿಗೋಷ್ಠಿ ನಡುವೆಯೇ ಆಪ್ ಶಾಸಕ ಮೋಹನಿಯಾ ಬಂಧನ

​ಪ್ರಜಾವಾಣಿ ವಾರ್ತೆ
Published 25 ಜೂನ್ 2016, 10:16 IST
Last Updated 25 ಜೂನ್ 2016, 10:16 IST
ಸುದ್ದಿಗೋಷ್ಠಿ ನಡುವೆಯೇ ಆಪ್ ಶಾಸಕ ಮೋಹನಿಯಾ ಬಂಧನ
ಸುದ್ದಿಗೋಷ್ಠಿ ನಡುವೆಯೇ ಆಪ್ ಶಾಸಕ ಮೋಹನಿಯಾ ಬಂಧನ   

ನವದೆಹಲಿ (ಪಿಟಿಐ): ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತನೆ ತೋರಿದ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆಮ್ ಆದ್ಮಿ ಪಕ್ಷದ ಶಾಸಕ ದಿನೇಶ್ ಮೋಹನಿಯಾ ಅವರನ್ನು ಶನಿವಾರ ಬಂಧಿಸಲಾಗಿದೆ. ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ ಪೊಲೀಸರು ಮೋಹನಿಯಾ ಅವರನ್ನು ಬಂಧಿಸಿದ್ದರು. ಪೊಲೀಸರ ಈ ನಡೆಯನ್ನು ಖಂಡಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ದೆಹಲಿ ಜಲಮಂಡಳಿಯ ಅಧ್ಯಕ್ಷರಾಗಿರುವ ಮೋಹನಿಯಾ ಅವರು ದಕ್ಷಿಣ ದೆಹಲಿಯ ಖಾನ್ಪುರ್‍‍ನಲ್ಲಿರುವ ತಮ್ಮ ಕಚೇರಿಯಲ್ಲಿ ಮಧ್ಯಾಹ್ನ  12.10ಕ್ಕೆ ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ, ದಿಢೀರನೆ ನುಗ್ಗಿದ ಪೊಲೀಸರು ಮೋಹನಿಯಾ ಅವರನ್ನು ಕುರ್ಚಿಯಿಂದ ಎಳೆದು ನಾಟಕೀಯ ರೀತಿಯಲ್ಲಿ ಬಂಧಿಸಿದ್ದಾರೆ.

ಮೋಹನಿಯಾ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ 323 (ನೋವುಂಟು ಮಾಡುವುದು), 506 (ಬೆದರಿಕೆ), 509 (ಮಹಿಳೆಯರ ವಿರುದ್ಧ ಅವಾಚ್ಯ ಶಬ್ದಗಳ ಬಳಕೆ), 354 (ಮಹಿಳೆಯ ಗೌರವಕ್ಕೆ ಧಕ್ಕೆ ತರುವಂಥಾ ಕೆಲಸ), 354 ಎ( ಲೈಂಗಿಕ ಕಿರುಕುಳ), 354 ಬಿ (ಮಹಿಳೆಗೆ ಮಾನಹಾನಿಯುಂಟು ಮಾಡುವ ಕೆಲಸ)  ಮತ್ತು 354 ಸಿ (ಲೈಂಗಿಕ ಪ್ರಚೋದನೆ ನೀಡುವ ಚಿತ್ರಗಳನ್ನು ಪ್ರದರ್ಶಿಸುವುದು) ಕಾಯ್ದೆಗಳ ಪ್ರಕಾರ ಕೇಸು ದಾಖಲಿಸಲಾಗಿದೆ ಎಂದು ಆಗ್ನೇಯ ದೆಹಲಿ ಜಂಟಿ ಪೊಲೀಸ್ ಆಯುಕ್ತ ಆರ್ ಪಿ ಉಪಾಧ್ಯಾಯ್ ಹೇಳಿದ್ದಾರೆ.

ಪೊಲೀಸರ ಈ ನಡೆಯನ್ನು ಖಂಡಿಸಿದ ಕೇಜ್ರಿವಾಲ್, ಬಂಧನ, ದಾಳಿ ನಡೆಸುವುದು, ಬೆದರಿಕೆಯನ್ನೊಡ್ಡುವುದು, ದೆಹಲಿಯಲ್ಲಿ ಚುನಾಯಿತ ಪ್ರತಿನಿಧಿಗಳ ಮೇಲೆ ತಪ್ಪು ಆರೋಪಗಳನ್ನು ಹೊರಿಸುವ ಮೂಲಕ ದೆಹಲಿಯಲ್ಲಿ ಮೋದಿಯವರು ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ. 
ಎಲ್ಲ ಟೀವಿ ಕ್ಯಾಮೆರಾಗಳ ಮುಂದೆಯೇ ಸುದ್ದಿಗೋಷ್ಠಿ  ನಡೆಸುತ್ತಿರುವಾಗ ದಿನೇಶ್ ಮೋಹನಿಯಾ ಅವರನ್ನು ಬಂಧಿಸಲಾಗಿದೆ. ಈ ಮೂಲಕ ಮೋದಿ ಯಾವ ಸಂದೇಶವನ್ನು ನೀಡುತ್ತಿದ್ದಾರೆ? ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.