ADVERTISEMENT

ಸುಬ್ರತೊ ಶಿಕ್ಷೆ ಸಮರ್ಥಿಸಿದ ‘ಸುಪ್ರೀಂ’

₨10,000 ಕೋಟಿ ಪಾವತಿ ಅಸಾಧ್ಯ: ಸಹಾರಾ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2014, 19:30 IST
Last Updated 3 ಏಪ್ರಿಲ್ 2014, 19:30 IST

ನವದೆಹಲಿ(ಪಿಟಿಐ): ಸಹಾರಾ ಸಮೂಹಕ್ಕೆ ಸುಪ್ರೀಂ­ಕೋರ್ಟ್‌ನಲ್ಲಿ ಮತ್ತೊಮ್ಮೆ ಮುಖಭಂಗವಾಗಿದೆ. ಸಹಾರಾ ಅಧ್ಯಕ್ಷ ಸುಬ್ರತೊ ರಾಯ್‌ ಹಾಗೂ ಅದರ ಇಬ್ಬರು ನಿರ್ದೇಶಕರಿಗೆ ಜೈಲುಶಿಕ್ಷೆ ವಿಧಿಸಿರು ವುದನ್ನು ಕೋರ್ಟ್‌ ಸಮರ್ಥಿಸಿ ಕೊಂಡಿದೆ.

ಈ ಮೂವರಿಗೆ ಶಿಕ್ಷೆ ವಿಧಿಸಿಲ್ಲ. ಹೂಡಿಕೆದಾರರಿಗೆ ₨20,000 ಕೋಟಿ  ಪಾವತಿಸಲು ಸಾಧ್ಯವಿಲ್ಲದ ಕಾರಣ ಜೈಲಿನಲ್ಲಿರಬೇಕಾಗಿದೆ ಎಂದು ಹೇಳಿದೆ. ನ್ಯಾಯಾಲಯ ನಿಂದನೆಯ ವಿಷಯವನ್ನು ಪ್ರತ್ಯೇಕ­ವಾಗಿ ವಿಚಾರಣೆ ನಡೆಸಲಾಗುವುದು ಎಂದೂ ತಿಳಿಸಿದೆ.

ಕನಿಷ್ಠ ₨10,000 ಕೋಟಿಯ ನ್ನಾದರೂ ಪಾವತಿಸಿ ಕಂಪೆನಿ  ಪ್ರಾಮಾಣಿಕತೆ ಪ್ರದರ್ಶಿಸಲು ತಾಕೀತು ಮಾಡಿದೆ. ₨10,000 ಕೋಟಿ ಹಣ ಪಾವತಿಸುವಂತೆ ಆದೇಶಿಸಿರುವುದು ಜಾಮೀನಿಗೆ ಎಂಬ ಟೀಕೆಗೆ  ನ್ಯಾಯಮೂರ್ತಿ  ಕೆ.ಎಸ್‌. ರಾಧಾಕೃಷ್ಣನ್‌ ಮತ್ತು ಜೆ.ಎಸ್‌. ಖೇಹರ್ ಅವರನ್ನು ಒಳಗೊಂಡ ಪೀಠ ಈ ರೀತಿ ಪ್ರತಿಕ್ರಿಯಿಸಿದೆ.

ADVERTISEMENT

ಈ ನಡುವೆ ಜಾಮೀನು ಪಡೆಯಲು ₨10,000 ಕೋಟಿ ಪಾವತಿಸಲು ಸಾಧ್ಯವಿಲ್ಲ ಎಂದು  ಸಹಾರಾ ಸಮೂಹ ಗುರುವಾರ ಸುಪ್ರೀಂಕೋರ್ಟ್‌ಗೆ ಹೇಳಿದೆ.

ಸಹಾರಾ ಪರ ಹಾಜರಾಗಿದ್ದ ಹಿರಿಯ ವಕೀಲ ಸಿ.ಎ.ಸುಂದರಂ ₨2500 ಕೋಟಿಯನ್ನು ಸದ್ಯಕ್ಕೆ ಪಾವತಿ ಮಾಡಲಾಗುವುದು ಹಾಗೂ ₨2500 ಕೋಟಿಯನ್ನು ರಾಯ್‌ ಹಾಗೂ ಇನ್ನಿಬ್ಬರ ಬಿಡುಗಡೆಯ ಮೂರು ತಿಂಗಳ ನಂತರ ಪಾವತಿ ಮಾಡಲಾಗುವುದು ಎಂದು ಹೇಳಿದರು.

ಮಾರ್ಚ್‌ 4 ರಿಂದ ರಾಯ್‌ ಹಾಗೂ  ಇಬ್ಬರು ನಿರ್ದೇಶಕರಾದ ರವಿ ಶಂಕರ್‌ ದುಬೆ ಮತ್ತು ಅಶೋಕ್‌ ರಾಯ್‌ ಚೌಧರಿ ತಿಹಾರ್‌ ಜೈಲಿನಲ್ಲಿದ್ದಾರೆ.

₨ 10,000 ಕೋಟಿ ಪಾವತಿಸಿದರೆ ರಾಯ್‌ ಅವರನ್ನು ಬಿಡುಗಡೆ ಮಾಡಲಾಗುವುದು ಎಂದು ಈ ಹಿಂದೆ ಸುಪ್ರೀಂಕೋರ್ಟ್‌ ಹೇಳಿತ್ತು. ಈ 10,000 ಕೋಟಿಯಲ್ಲಿ ₨5000 ಕೋಟಿ ಬ್ಯಾಂಕ್‌ ಖಾತರಿ ಹಾಗೂ ಇನ್ನುಳಿದ ₨5000 ಕೋಟಿ ನಗದು ರೂಪದಲ್ಲಿರಬೇಕು ಎಂಬ ಷರತ್ತು ವಿಧಿಸಿತ್ತು.

ರಿಜಿಸ್ಟ್ರಾರ್‌ ಅವರಿಗೆ ಕಂಪೆನಿಯ ಪ್ರಸ್ತಾವ ಮಂಡಿಸುವಂತೆ ಸುಪ್ರೀಂ ಕೋರ್ಟ್‌್ ಸಹಾರಾ ಸಮೂಹಕ್ಕೆ ತಿಳಿಸಿದೆ. ಸುಬ್ರತೊ ರಾಯ್‌ ಅವರಿಗೆ ಹಣಕಾಸು ಸಲಹೆಗಾರರನ್ನು ಭೇಟಿ ಮಾಡಲು ಅವಕಾಶ ನೀಡುವಂತೆ ಹಿರಿಯ ವಕೀಲ ರಾಂ ಜೇಠ್ಮಲಾನಿ ನ್ಯಾಯಾಲಯಕ್ಕೆ ಮನವಿ ಮಾಡಿದರು. ಇದೇ ವೇಳೆ ರಾಯ್‌ ಅವರನ್ನು ಜೈಲಿಗೆ  ಕಳುಹಿಸು­ವಂತೆ ಸೆಬಿ ಮನವಿ ಮಾಡಿಲ್ಲ ಎಂಬುದನ್ನು ಹಿರಿಯ ವಕೀಲ ರಾಜೀವ್‌ ಧವನ್‌ ಪುನರುಚ್ಚರಿಸಿದರು.

ರಾಯ್‌ ಪರ ಹಲವು ಹಿರಿಯ ವಕೀಲರು ಹಾಜರಾಗಿದ್ದಕ್ಕೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು. ಒಬ್ಬ ಆರೋಪಿ ಪರ ಕೇವಲ ಇಬ್ಬರು ವಕೀಲರು ಮಾತ್ರ ವಕಾಲತ್ತು ವಹಿಸಬೇಕು ಎಂದು ಸೂಚಿಸಿತು.

ಅಭಿಷೇಕ್ ಸಿಂಘ್ವಿ, ಎಸ್‌.ಗಣೇಶ್‌ ಮತ್ತು ಪಿ.ಎಚ್‌.ಪಾರೇಖ್‌ ಸಹ ರಾಯ್‌ ಪರ ಹಾಜರಾಗಿದ್ದರು. ಈ ಮೊದಲು ರವಿ ಶಂಕರ್‌ ಪ್ರಸಾದ್‌ ಸಹ ವಾದಿಸಿದ್ದರು. ಮುಂದಿನ ವಿಚಾರಣೆಯನ್ನು ಏ.9ಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.