ADVERTISEMENT

ಸುರೇಂದರ್‌ ಕೋಲಿಗೆ ಜೀವಾವಧಿ

ಗಲ್ಲಿನಿಂದ ಜೀವಾವಧಿಗೆ ಶಿಕ್ಷೆ ಬದಲಾವಣೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2015, 13:27 IST
Last Updated 28 ಜನವರಿ 2015, 13:27 IST

ಅಲಹಾಬಾದ್‌ (ಪಿಟಿಐ): ನಿತಾರಿ ಅತ್ಯಾಚಾರ ಮತ್ತು ಮಹಿಳೆಯರ ಸರಣಿ ಕೊಲೆ ಪ್ರಕರಣದ ಆರೋಪಿ ಸುರೇಂದರ್‌ ಕೋಲಿಗೆ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಅಲಹಾಬಾದ್‌ ಹೈಕೋರ್ಟ್‌ ಜೀವಾವಧಿ ಶಿಕ್ಷೆಗೆ ಬದಲಾಯಿಸಿದೆ.

2006ರಲ್ಲಿ ನಡೆದ ಐದು ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಆರೋಪಿ ಕೋಲಿಗೆ ಸಿಬಿಐ ವಿಶೇಷ ನ್ಯಾಯಾಲಯ 2009ರ ಫೆ.19ರಂದು ಗಲ್ಲು ಶಿಕ್ಷೆ ವಿಧಿಸಿತ್ತು. ಕೋಲಿ ಕ್ಷಮಾಧಾನ ಅರ್ಜಿಗೆ ಸಂಬಂಧಿಸಿದಂತೆ ‘ಅತಿಯಾದ ವಿಳಂಬ’ದ ಕಾರಣದಿಂದ ನ್ಯಾಯಾಲಯ ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಬದಲಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ಮತ್ತು ನ್ಯಾಯಮೂರ್ತಿ ಪಿ.ಕೆ.ಎಸ್‌.ಬಾಘೆಲ್‌ ಅವರನ್ನೊಳಗೊಂಡ ವಿಭಾಗೀಯ ಪೀಠವು ಕ್ಷಮಾಧಾನ ಕುರಿತ ಅತಿಯಾದ ವಿಳಂಬದ ಕಾರಣದಿಂದ ಕೋಲಿಗೆ ಗಲ್ಲು ಶಿಕ್ಷೆ ವಿಧಿಸುವುದು ಅಸಂವಿಧಾನಿಕ ಎಂದು ಅಭಿಪ್ರಾಯಪಟ್ಟಿದೆ.

ADVERTISEMENT

2011ರ ಮೇ 7ರಂದು ಕೋಲಿ ಉತ್ತರ ಪ್ರದೇಶದ ರಾಜ್ಯಪಾಲರಿಗೆ ಕ್ಷಮಾಧಾನ ಅರ್ಜಿ ಸಲ್ಲಿಸಿದ್ದ. 23 ತಿಂಗಳ ಬಳಿಕ, 2013ರ ಏಪ್ರಿಲ್‌ 2ರಂದು ಕ್ಷಮಾಧಾನದ ಅರ್ಜಿ ತಿರಸ್ಕೃತವಾಗಿತ್ತು. 2013ರ ಜುಲೈ 19ರಂದು ಮತ್ತೆ ಕ್ಷಮಾಧಾನದ ಅರ್ಜಿಯನ್ನು ಕೇಂದ್ರ ಗೃಹ ಇಲಾಖೆಗೆ ಕಳಿಸಲಾಗಿತ್ತು. ಆ ಅರ್ಜಿಯೂ 2014ರ ಜುಲೈ 20ರಂದು ತಿರಸ್ಕೃತಗೊಂಡಿತ್ತು.

ಕೋಲಿಯ ಕ್ಷಮಾಧಾನ ಹಾಗೂ ಶಿಕ್ಷೆಯ ವಿಚಾರವನ್ನು ‘3 ವರ್ಷ 3 ತಿಂಗಳು’ ತಳ್ಳುತ್ತಾ ಬರಲಾಗಿದೆ ಎಂದು ‘ಪೀಪಲ್ಸ್‌ ಯೂನಿಯನ್‌ ಫಾರ್‌ ಡೆಮಾಕ್ರಟಿಕ್‌ ರೈಟ್ಸ್‌’ (ಪಿಯುಡಿಆರ್‌) ಸಂಘಟನೆಯು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಅಲ್ಲದೆ ಗಲ್ಲು ಶಿಕ್ಷೆಯು ಸಂವಿಧಾನದತ್ತವಾದ ಜೀವಿಸುವ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ವಾದಿಸಿತ್ತು.

ಇದೇ ವಾದವನ್ನು ಮುಂದಿಟ್ಟು ಕೋಲಿ ಸಹ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ. ಈ ಮಧ್ಯೆ ಸೆಪ್ಟೆಂಬರ್‌ 12ರಂದು ಕೋಲಿಗೆ ಗಲ್ಲು ಶಿಕ್ಷೆ ಜಾರಿ ಮಾಡುವಂತೆ ವಿಚಾರಣಾ ನ್ಯಾಯಾಲಯವು ಸೆ. 2ರಂದು ಆದೇಶ ಹೊರಡಿಸಿತ್ತು. ಆದರೆ, ಪಿಯುಡಿಆರ್‌ ಸಲ್ಲಿಸಿದ್ದ ಅರ್ಜಿ ಇತ್ಯರ್ಥವಾಗುವವರೆಗೂ ಕೋಲಿ ಶಿಕ್ಷೆ ಜಾರಿಗೆ ಹೈಕೋರ್ಟ್‌ ತಡೆಯಾಜ್ಞೆ ವಿಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.