ADVERTISEMENT

ಸೇನಾ ಸಾಮಗ್ರಿ: ಖರೀದಿಗೆ ಮುನ್ನವೇ ಲೆಕ್ಕಪರಿಶೋಧನೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2014, 19:30 IST
Last Updated 21 ಡಿಸೆಂಬರ್ 2014, 19:30 IST

ನವದೆಹಲಿ: ಸೇನೆಯ ಖರೀದಿ ವ್ಯವಹಾರಗಳಲ್ಲಿನ ಭ್ರಷ್ಟಾಚಾರ ದಿಂದಾಗಿ ಸೇನಾ ಸಾಮಗ್ರಿಗಳ ಖರೀದಿಯಲ್ಲಿ ವಿಳಂಬವಾಗುವುದನ್ನು ತಪ್ಪಿಸಲು  ಖರೀದಿಗಿಂತ ಮುನ್ನವೇ ಆ ಪ್ರಸ್ತಾಪವನ್ನು ಸಿಎಜಿ (ಮಹಾಲೇಖ­ಪಾಲರು), ಸಿವಿಸಿ ಅಥವಾ ಸಿಬಿಐನಿಂದ ಲೆಕ್ಕಪರಿಶೋಧನೆಗೆ ಒಳಪಡಿಸಬೇಕು  ಎಂದು ರಕ್ಷಣೆಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿ ಹೇಳಿದೆ.

ಸೇನಾ ಸಾಮಗ್ರಿಗಳನ್ನು ತ್ವರಿತವಾಗಿ ಖರೀದಿಸಲು ವ್ಯವಸ್ಥೆಯೊಂದನ್ನು ರೂಪಿಸುವಲ್ಲಿ ರಕ್ಷಣಾ ಸಚಿವಾಲಯ ವಿಫಲವಾಗಿದ್ದು, ಇದರಿಂದಾಗಿ ದೇಶದ ಭದ್ರತೆಯ ವಿಚಾರದಲ್ಲಿ ರಾಜಿ ಮಾಡಿಕೊಂಡಂತಾಗಿದೆ ಎಂದೂ ಸಂಸದೀಯ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.

ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳ ಕಳಪೆ ಗುಣಮಟ್ಟದ ಕುರಿತೂ ಸಂಸದೀಯ ಸಮಿತಿ ಅಸಮಾಧಾನ ವ್ಯಕ್ತಪಡಿಸಿದ್ದು,  ಗುಣಮಟ್ಟ ಭರವಸೆಯ ಮಹಾ ನಿರ್ದೇಶನಾಲಯ (ಡಿಜಿಕ್ಯೂಎ)­ಸೈನಿಕರಲ್ಲಿ ವಿಶ್ವಾಸ ತುಂಬುವ ಸಲುವಾಗಿ ಇದೆಯೇ ಹೊರತೂ ಅವರನ್ನು ಹೆದರಿಸುವುದಕ್ಕಲ್ಲ ಎಂದು ವ್ಯಂಗ್ಯವಾಗಿ ಹೇಳಿದೆ.

ಬಿಜೆಪಿ ಸಂಸದ ಹಾಗೂ ಮಾಜಿ ಮೇಜರ್‌ ಜನರಲ್‌ ಬಿ.ಸಿ. ಖಂಡೂರಿ  ಈ ಸಂಸದೀಯ ಸಮಿತಿಯ ಅಧ್ಯಕ್ಷರಾಗಿದ್ದು, ಸೋಮವಾರ ಈ ವರದಿಯನ್ನು ಸಂಸತ್ತಿನ ಮುಂದೆ ಮಂಡಿಸುವ ಸಾಧ್ಯತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.