ADVERTISEMENT

ಸೇನೆ ಮೇಲೆ ನಿಲ್ಲದ ಕಲ್ಲು ತೂರಾಟ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2014, 19:30 IST
Last Updated 13 ಸೆಪ್ಟೆಂಬರ್ 2014, 19:30 IST

ಶ್ರೀನಗರ (ಪಿಟಿಐ): ಪ್ರವಾಹ ಪೀಡಿತ ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿ­ಹಾರ ಕಾರ್ಯಾಚರಣೆಯಲ್ಲಿ ತೊಡಗಿ­ರುವ ಸೇನಾ ವಿಮಾನ ಹಾಗೂ ದೋಣಿ­ಗಳ ಮೇಲೆ ಕಲ್ಲು ತೂರಾಟ­ದಂತಹ ದುಷ್ಕೃತ್ಯಗಳು ಇನ್ನೂ ಮುಂದು­ವರಿದಿದೆ. ನಿತ್ಯ ನಡೆಯುತ್ತಿರುವ ಕಲ್ಲು ತೂರಾಟ­ದಲ್ಲಿ ಹಲವಾರು  ವಿಮಾನ ಮತ್ತು ಹೆಲಿಕಾಪ್ಟರ್‌ ಜಖಂಗೊಂಡಿವೆ. ಕಡಿಮೆ ಎತ್ತರದಲ್ಲಿ ಹಾರಾಟ ನಡೆ­ಸುವ ಹೆಲಿಕಾಪ್ಟರ್‌ಗಳತ್ತ ಏಕಾಏಕಿ ನೂರಾರು ಕಲ್ಲುಗಳು ತೂರಿ ಬರುತ್ತಿವೆ.

‘ಕಾರ್ಯಾಚರಣೆಗೆ ಅಡ್ಡಿಪಡಿಸು­ವಂತೆ ಪ್ರತ್ಯೇಕತಾವಾದಿಗಳು ಸ್ಥಳೀಯ­ರಿಗೆ ಕುಮ್ಮಕ್ಕು ನೀಡುತ್ತಿರುವ ಮಾಹಿತಿ ಇದೆ. ಇದರಿಂದ  ಸೇನೆ ಎದೆಗುಂದಿಲ್ಲ ಮತ್ತು ಕೊನೆಯ ಜೀವ ರಕ್ಷಿಸುವವ­ರೆಗೂ  ವಿರಮಿಸುವುದಿಲ್ಲ’ ಎಂದು ವಾಯು ಕಾರ್ಯಾಚರಣೆ ಮಹಾ ನಿರ್ದೇಶಕ  ಏರ್‌ ಮಾರ್ಷಲ್‌ ಎಸ್‌.ಬಿ. ದೇವ್‌ ಸ್ಪಷ್ಟಪಡಿಸಿದ್ದಾರೆ.

ರಕ್ಷಣಾ ಕಾರ್ಯದಲ್ಲಿ ತೊಡಗಿ­ರುವ  ಯೋಧರ ಮೇಲೆ ನಡೆಯುತ್ತಿ­ರುವ ದಾಳಿಯನ್ನು ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಖಂಡಿಸಿದ್ದಾರೆ.
ಕಣಿವೆಯಲ್ಲಿ ಪ್ರವಾಹ ಇಳಿಮುಖ­ವಾಗುತ್ತಿದ್ದಂತೆ ಸಾಂಕ್ರಾಮಿಕ ರೋಗ­ಗಳ ಭೀತಿ ಕಾಣಿಸಿಕೊಂಡಿದೆ. ಈವರೆಗೆ 1.42 ಲಕ್ಷ ಜನರನ್ನು ರಕ್ಷಿಸಲಾಗಿದ್ದು, ಇನ್ನೂ ಸಾವಿರಾರು ಮಂದಿ ಪ್ರವಾಹ­ದಲ್ಲಿ ಸಿಲುಕಿಕೊಂಡೇ ಇದ್ದಾರೆ.

ರಾಜ್ಯದ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಜಮ್ಮು–ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಸತತ ಹತ್ತನೇ ದಿನವೂ ಸಂಚಾರಕ್ಕೆ ಮುಕ್ತಗೊಂಡಿಲ್ಲ. ಭೂಕುಸಿತ ಮತ್ತು ಪ್ರವಾಹದಲ್ಲಿ ಹೆದ್ದಾರಿ ಕೊಚ್ಚಿ ಹೋದ ಕಾರಣ ಸಾವಿರಾರು ವಾಹನಗಳು ರಸ್ತೆ ಮಧ್ಯೆ ಬೀಡುಬಿಟ್ಟಿವೆ.  ಹೆದ್ದಾರಿ ದುರಸ್ತಿ ಕೈಗೊಳ್ಳಲಾಗಿದ್ದು, ಭಾರತೀಯ ವಾಯುಪಡೆ ಇದುವರೆಗೂ 11 ಸಾವಿರ ಸಂತ್ರಸ್ತರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿದೆ.

ಜೀವನದಿಯ ರೌದ್ರಾವತಾರ
ಶತಮಾನದಿಂದ ಶಾಂತವಾಗಿ ಹರಿಯುತ್ತಿದ್ದ ಕಾಶ್ಮೀರ ಕಣಿವೆಯ ಜೀವನದಿ  ಝೇಲಂನ ಮತ್ತೊಂದು ಕರಾಳ ಮುಖ ಕಾಶ್ಮೀರಿಗಳಿಗೆ  ಈಗ ಪರಿಚಯ­ವಾಗಿದೆ. ಜೀವಮಾನದಲ್ಲಿ ಝೇಲಂ  ರೌದ್ರಾವತಾರ ಕಂಡರಿಯದ ಸ್ಥಳೀ­ಯರು  15 ದಿನಗಳಲ್ಲಿ  ಅದರ ರುದ್ರ ನರ್ತನ  ಕಂಡು  ಬೆಚ್ಚಿ ಬಿದ್ದಿದ್ದಾರೆ.

ಕಣಿವೆಯಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ಝೇಲಂ ಕಾಶ್ಮೀರಿಗಳ  ಜೀವನಾಡಿ. ಈ ನದಿಯನ್ನು ಜನ್ಮಕೊಟ್ಟ ತಾಯಿಯಷ್ಟೇ ಪೂಜ್ಯ ಭಾವನೆ­ಯಿಂದ ಕಾಣುತ್ತಿದ್ದ  ಜನರ ಜೀವನವನ್ನು ರಕ್ಕಸ ಅಲೆಗಳು ಕೊಚ್ಚಿ ಒಯ್ದಿವೆ. ‘ಅನ್ನ ಕೊಡುತ್ತಿದ್ದ  ತಾಯಿಯೇ ನಮ್ಮ ಮೇಲೆ ಮುನಿಸಿಕೊಂಡು ಅನ್ನ ಕಸಿದುಕೊಂಡು ನಮ್ಮನ್ನು ಬೀದಿಗೆ ತಂದಿದ್ದಾಳೆ’ ಎನ್ನುತ್ತಾರೆ ಸ್ಥಳೀಯರು.

ಉಚಿತ ಕರೆ: ಬಿಎಸ್‌ಎನ್‌ಎಲ್‌ ಜಮ್ಮು ಕಾಶ್ಮೀರದ ಜನರಿಗೆ ಒಂದು ವಾರ ಕಾಲ  ಉಚಿತ ಸೇವೆ ಒದಗಿಸಲಿದೆ ಎಂದು ದೂರಸಂಪರ್ಕ ಸಚಿವ ರವಿ ಶಂಕರ್‌ ಪ್ರಸಾದ್‌ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.