ADVERTISEMENT

ಸೇವಾಶುಲ್ಕ ಕಡಿತಕ್ಕೆ ಆರ್‌ಬಿಐ ಕ್ರಮ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2017, 19:30 IST
Last Updated 17 ಫೆಬ್ರುವರಿ 2017, 19:30 IST
ಸೇವಾಶುಲ್ಕ ಕಡಿತಕ್ಕೆ ಆರ್‌ಬಿಐ ಕ್ರಮ
ಸೇವಾಶುಲ್ಕ ಕಡಿತಕ್ಕೆ ಆರ್‌ಬಿಐ ಕ್ರಮ   

ಮುಂಬೈ: ನಗದುರಹಿತ ಡಿಜಿಟಲ್‌ ವಹಿವಾಟು ಉತ್ತೇಜಿಸಲು ಡೆಬಿಟ್‌ ಕಾರ್ಡ್‌ ಪಾವತಿಗಳ ಮೇಲೆ ಬ್ಯಾಂಕ್‌ಗಳು ಗ್ರಾಹಕರು ಅಥವಾ  ವರ್ತಕರಿಗೆ ವಿಧಿಸುವ  ಸೇವಾಶುಲ್ಕದಲ್ಲಿ (ಎಂಡಿಆರ್‌)  ಭಾರಿ ಪ್ರಮಾಣದ ಕಡಿತ ಮಾಡಲು  ಭಾರತೀಯ ರಿಸರ್ವ್ ಬ್ಯಾಂಕ್‌ ಮುಂದಾಗಿದೆ.

ಡೆಬಿಟ್‌ ಕಾರ್ಡ್‌ ಮೂಲಕ ನಡೆಯುವ ವಹಿವಾಟು ಮೊತ್ತದ ಶೇ 0.70ರ ಬದಲು ಇನ್ನು ಮುಂದೆ ಶೇ 0.40 ರಷ್ಟನ್ನು   ಮಾತ್ರ ವರ್ತಕರಿಂದ ಸೇವಾಶುಲ್ಕ ರೂಪದಲ್ಲಿ ಸಂಗ್ರಹಿಸಲಾಗುವುದು ಎಂದು ಆರ್‌ಬಿಐ  ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಏಪ್ರಿಲ್‌ 1ರಿಂದ ಪರಿಷ್ಕೃತ ದರ  ಜಾರಿಗೆ ಬರಲಿದೆ.
ಸದ್ಯ ಡೆಬಿಟ್ ಕಾರ್ಡ್‌ ಮೂಲಕ ನಡೆಯುವ ₹2 ಸಾವಿರದವರೆಗಿನ ವಹಿವಾಟಿಗೆ  ಶೇ 0.75ರಷ್ಟು ಮತ್ತು ₹2 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ವಹಿವಾಟಿಗೆ ಶೇ 1ರಷ್ಟು ಸೇವಾಶುಲ್ಕ ಸಂಗ್ರಹಿಸಲಾಗುತ್ತಿದೆ.  ಕ್ರೆಡಿಟ್‌ ಕಾರ್ಡ್‌ ಮೂಲಕ ಪಾವತಿಸುವ ಮೊತ್ತದ ಮೇಲಿನ ಎಂಡಿಆರ್‌ಗೆ ಆರ್‌ಬಿಐ ಮಿತಿ ವಿಧಿಸಿಲ್ಲ.
ವಾರ್ಷಿಕ ₹20 ಲಕ್ಷದೊಳಗೆ ವಹಿವಾಟು ನಡೆಸುವ ಸಣ್ಣ ವರ್ತಕರು,  ವಿಮೆ, ಮ್ಯೂಚುವಲ್‌ ಫಂಡ್ಸ್‌, ಶೈಕ್ಷಣಿಕ ಸಂಸ್ಥೆ, ಸರ್ಕಾರಿ ಆಸ್ಪತ್ರೆಗಳಲ್ಲಿನ ಡೆಬಿಟ್‌ ಕಾರ್ಡ್‌ ವಹಿವಾಟಿಗೆ ಶೇ 0.40ರಷ್ಟು ಎಂಡಿಆರ್‌ ಅನ್ವಯಿಸಲಿವೆ.

ಸ್ವೈಪಿಂಗ್‌ ಮಷಿನ್‌ (ಪಿಒಎಸ್‌), ಕ್ಯೂಆರ್‌ ಕೋಡ್‌ ಮೂಲಕ ನಡೆಸುವ ಡಿಜಿಟಲ್‌ ವ್ಯವಹಾರದ ಮೇಲೆ ಶೇ 0.3ಕ್ಕಿಂತ ಕಡಿಮೆ ಸೇವಾಶುಲ್ಕ ಆಕರಿಸಲಾಗುವುದು.

ADVERTISEMENT

ಮಳಿಗೆಗಳಲ್ಲಿ ಫಲಕ: ‘ಗ್ರಾಹಕರು ಸೇವಾಶುಲ್ಕ ತೆರಬೇಕಾಗಿಲ್ಲ’ ಎಂಬ ಫಲಕವನ್ನು ವರ್ತಕರು ತಮ್ಮ ಅಂಗಡಿಗಳಲ್ಲಿ ನೇತು ಹಾಕುವಂತೆ ಸೂಚಿಸಬೇಕು ಎಂದು ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ.  ಈಚೆಗೆ ಡೆಬಿಟ್‌ ಕಾರ್ಡ್‌ಗಳ ಮೂಲಕ ಹಣ ಪಾವತಿಸುವ ವಹಿವಾಟು ಗಮನಾರ್ಹವಾಗಿ ಹೆಚ್ಚಿದೆ ಎಂದು ಆರ್‌ಬಿಐ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.