ADVERTISEMENT

‘ಸ್ಟೆಂಟ್‌ಗೆ ಹೆಚ್ಚಿನ ದರ ವಿಧಿಸಿದರೆ ಕ್ರಮ’

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2017, 19:30 IST
Last Updated 17 ಫೆಬ್ರುವರಿ 2017, 19:30 IST
ಸ್ಟೆಂಟ್‌ -ಕೃಪೆ ಬ್ಲೂಮ್ ಬರ್ಗ್
ಸ್ಟೆಂಟ್‌ -ಕೃಪೆ ಬ್ಲೂಮ್ ಬರ್ಗ್   

ಬೆಂಗಳೂರು: ಹೃದಯದ ಶಸ್ತ್ರಚಿಕಿತ್ಸೆಗೆ ಬಳಸುವ ಕೊರೊನರಿ ಸ್ಟೆಂಟ್‌ಗೆ ಕೇಂದ್ರ ಸರ್ಕಾರ ನಿಗದಿ ಮಾಡಿರುವ ದರಕ್ಕಿಂತ ಹೆಚ್ಚು ಹಣ ಪಡೆದರೆ ಅಂತಹ ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು ಎಂದು ಕೇಂದ್ರ ರಸಗೊಬ್ಬರ ಮತ್ತು ರಸಾಯನಿಕ ಸಚಿವ ಅನಂತಕುಮಾರ್‌ ಎಚ್ಚರಿಸಿದರು.

ಸ್ಟೆಂಟ್‌ಗಳ ಬೆಲೆ ಇಳಿಕೆ ಕುರಿತು ಅವರು ಶುಕ್ರವಾರ ಬಸವನಗುಡಿಯ ಬಿ.ಪಿ.ವಾಡಿಯಾ ಸಭಾಂಗಣದಲ್ಲಿ ವೈದ್ಯರಿಗೆ ಮಾಹಿತಿ ನೀಡಿದರು.
ಸ್ಟೆಂಟ್‌ಗಳ ದರದಲ್ಲಿ ಶೇ 85ರಷ್ಟು ಇಳಿಕೆಯಾಗಿದೆ. ಲೋಹದ ಸ್ಟೆಂಟ್‌ಗಳಿಗೆ ₹7,260 ಮತ್ತು ಔಷಧ ರವಾನೆ ಮಾಡಲು ಬಳಸುವ ವಿಶೇಷ ಸ್ಟೆಂಟ್‌ಗಳಿಗೆ ₹29,600 ನಿಗದಿ ಮಾಡಲಾಗಿದೆ. ಹೊಸ ದರ ಇದೇ 14ರಿಂದಲೇ ಜಾರಿಯಾಗಿದೆ. ರೋಗಿಗಳು ಇದಕ್ಕಿಂತ ಹೆಚ್ಚು ಮೊತ್ತ ಪಾವತಿಸಬಾರದು ಎಂದರು.

ಆಸ್ಪತ್ರೆಗಳು ನಿಗದಿತ ಮೊತ್ತಕ್ಕಿಂತ ಹೆಚ್ಚು ಹಣ ಪಡೆದಲ್ಲಿ ಅದು ಶಿಕ್ಷಾರ್ಹ ಅಪರಾಧ ಆಗುತ್ತದೆ. ಹೆಚ್ಚುವರಿ ಮೊತ್ತಕ್ಕೆ ಶೇ13ರಷ್ಟು ಬಡ್ಡಿ ಸಮೇತ ವಾಪಸ್‌ ಪಡೆಯಲಾಗುವುದು. ಅಲ್ಲದೆ, ಆಸ್ಪತ್ರೆ ಮಾಲೀಕರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು. ಆಸ್ಪತ್ರೆಯ ಪರವಾನಗಿ ರದ್ದು ಮಾಡುವ ಸಾಧ್ಯತೆಯೂ ಇರುತ್ತದೆ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಕೇಂದ್ರ ಆರೋಗ್ಯ ಸಚಿವಾಲಯ 2015ರಲ್ಲಿ ಬಿಡುಗಡೆ ಮಾಡಿರುವ ವರದಿ ಪ್ರಕಾರ ದೇಶದಲ್ಲಿ 6.19 ಕೋಟಿ ಜನ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಕಳೆದ ವರ್ಷ ಒಟ್ಟು 4 ಲಕ್ಷ ಮಂದಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈ ವರ್ಷ 5 ಲಕ್ಷ ತಲುಪುವ ಸಾಧ್ಯತೆ ಇದೆ ಎಂದರು.

ಜನಸಾಮಾನ್ಯರಿಗೆ ಬೇಕಾದಂತಹ ಅಗತ್ಯ ಔಷಧಗಳ ಪಟ್ಟಿಯಲ್ಲಿ ಇದುವರೆಗೆ ಸ್ಟೆಂಟ್‌ಗಳು ಸೇರಿರಲಿಲ್ಲ. ಇದರಿಂದಾಗಿ ಆಸ್ಪತ್ರೆಗಳು ₹40 ಸಾವಿರದಿಂದ ₹ 2ಲಕ್ಷದ ವರೆಗೂ ದರ ವಿಧಿಸುತ್ತಿದ್ದವು. ಸ್ಟೆಂಟ್‌ಗಳನ್ನು ಅಗತ್ಯ ಔಷಧಗಳ ಪಟ್ಟಿಯಲ್ಲಿ ಇತ್ತೀಚೆಗೆ ಸೇರಿಸಲಾಗಿದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.