ADVERTISEMENT

ಹಗರಣ ಮುಕ್ತ ಭಾರತ

ಲೋಕಸಭೆಯಲ್ಲಿ ಪ್ರಧಾನಿ ಮೋದಿ ಚೊಚ್ಚಲ ಭಾಷಣ

​ಪ್ರಜಾವಾಣಿ ವಾರ್ತೆ
Published 11 ಜೂನ್ 2014, 19:30 IST
Last Updated 11 ಜೂನ್ 2014, 19:30 IST

ನವದೆಹಲಿ (ಪಿಟಿಐ): ಬಡವರ ಸಬ­ಲೀಕರಣ,  ಮುಸ್ಲಿ­ಮರ ಜೀವನ ಮಟ್ಟ ಸುಧಾ­ರಣೆ, ಎಲ್ಲ ರಾಜ­ಕೀಯ ಪಕ್ಷಗ­ಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸದೃಢ ಹಾಗೂ ಸಂಪದ್ಭರಿತ  ದೇಶ ನಿರ್ಮಾಣ, ಮಹಿಳೆಯರ ಸುರಕ್ಷೆಗೆ ಆದ್ಯತೆ...

–ಇವು, ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ಬುಧವಾರ ಮಾಡಿದ ಚೊಚ್ಚಲ ಭಾಷಣದಲ್ಲಿ  ಪ್ರಸ್ತಾಪಿಸಿದ ಪ್ರಮುಖ ವಿಷಯಗಳು.
ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿ­ಸಿದ ಮೋದಿ, ಹಗರಣಗಳ ಭಾರತ ಎನ್ನುವ ಅಪಖ್ಯಾತಿಯನ್ನು  ತೊಲಗಿಸಿ  ಕೌಶಲ­ಪೂರ್ಣ ಭಾರತವಾಗಿಸುವ ತಮ್ಮ ಕನಸನ್ನು ಬಿಚ್ಚಿಟ್ಟರು.

ಪ್ರಧಾನಿ ಹೇಳಿದ್ದೇನು...?

ಉತ್ತಮ ಆಡಳಿತ ನಮ್ಮ ಗುರಿ
ಸಕ್ಕರೆ ಕಾಯಿಲೆಯು ವ್ಯಕ್ತಿಯ  ದೇಹವನ್ನು ದುರ್ಬ­ಲ­ಗೊಳಿಸಿದಂತೆ, ಸರ್ಕಾರದ ಕೆಟ್ಟ ಆಡಳಿ­ತವು ಇಡೀ ಆಡಳಿತ ವ್ಯವಸ್ಥೆಯನ್ನು ಹಾಳು­ಮಾಡುತ್ತದೆ. ಉತ್ತಮ ಆಡಳಿತ ನೀಡುವುದೇ ನಮ್ಮ ಗುರಿ
– ಪ್ರಧಾನಿ ನರೇಂದ್ರ ಮೋದಿ

‘ಕೃಷಿ ಹಾಗೂ ಮೂಲಸೌಕರ್ಯ ವಲಯಗಳ ಅಭಿವೃದ್ಧಿಗೆ ಶ್ರಮಿಸಲಾ­ಗುತ್ತದೆ. 2022ರೊಳಗೆ ಎಲ್ಲರಿಗೂ ಮನೆ, ನೀರು ಹಾಗೂ ವಿದ್ಯುತ್‌್ ಸೌಲಭ್ಯ ಒದಗಿಸಬೇಕು ಎನ್ನುವುದು ನಮ್ಮ ಸಂಕಲ್ಪವಾಗಿದೆ.


‘ಹೊಸ ಸರ್ಕಾರದಲ್ಲಿ ಅಲ್ಪಸಂಖ್ಯಾ­ತರ ಭವಿಷ್ಯದ ಬಗ್ಗೆ ಯಾರೂ ಆತಂಕ­ಪಡಬೇಕಾಗಿಲ್ಲ. ಯಾವುದೇ ಒಂದು ಅಂಗ ದುರ್ಬಲವಾದರೂ ಅದು ಇಡೀ ದೇಹದ ಮೇಲೆ ಪರಿಣಾಮ ಬೀರುತ್ತದೆ.  ಅಲ್ಪ­ಸಂಖ್ಯಾತರ ಶ್ರೇಯೋಭಿವೃದ್ಧಿಗೆ ನಾವು ಬದ್ಧರಾ­ಗಿದ್ದೇವೆ. ಇದನ್ನು ನಾವು ಓಲೈಕೆ ರಾಜಕೀಯ ಎಂದು ಭಾವಿಸುವುದಿಲ್ಲ.

‘ಅಭಿವೃದ್ಧಿಯ ವಿಚಾರದಲ್ಲಿ ರಾಜ್ಯ­ಗಳ ನಡುವೆ ಪೈಪೋಟಿ ಇರಬೇಕು. ನಾವು ಗುಜರಾತ್‌ ಹಿಂದಿಕ್ಕಿದ್ದೇವೆ ಎಂದು ರಾಜ್ಯಗಳು ಹೇಳುವುದನ್ನು ಕೇಳಿ­ಸಿ­­ಕೊಳ್ಳಲು  ತುದಿಗಾಲ ಮೇಲೆ ನಿಂತಿ­ದ್ದೇನೆ. ರಾಜ್ಯಗಳ ಜತೆ ದೊಡ್ಡಣ್ಣನಂತೆ ವರ್ತಿಸುವುದಿಲ್ಲ. ಪರಸ್ಪರ ಸಹಕಾರದ ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿಕೆ ಹೊಂದಿದ್ದೇವೆ.

‘ಲೋಕಸಭೆ ಚುನಾವಣೆಯ ಬಳಿಕ ಬಿಜೆಪಿ ಗರ್ವ­ಪಡುತ್ತಿದೆ ಎಂದು ವಿರೋಧ­ಪಕ್ಷಗಳು ಮಾಡಿದ ಆರೋಪ­­ವನ್ನು ನಾನು ಅಲ್ಲಗಳೆಯುತ್ತೇನೆ. ಗೆಲುವು ಪಾಠ ಕಲಿಸುತ್ತದೆ. ನಮ್ಮನ್ನು ವಿನಮ್ರರ­ನ್ನಾಗಿ ಮಾಡುತ್ತದೆ.

‘ನಾವು ಟೀಕೆಗಳನ್ನು ಸ್ವಾಗತಿಸು­ತ್ತೇವೆ.   ಪ್ರಜಾತಂತ್ರ­ದಲ್ಲಿ ಟೀಕೆ­ಗಳು ನಮಗೆ ಬಲ ನೀಡುತ್ತವೆ ಹಾಗೂ ನಮ್ಮನ್ನು ಮುನ್ನಡೆಸುತ್ತವೆ’ ಎಂದರು.   
ತಮ್ಮ ಭಾಷಣದಲ್ಲಿ ಆಗಾಗ ಮಹಾತ್ಮ ಗಾಂಧಿ ಅವ­ರನ್ನು ಉಲ್ಲೇಖಿ­ಸಿದ ಅವರು, ಗಾಂಧಿ ಅವರ 150ನೇ ಜಯಂತಿಯ ವರ್ಷವಾದ 2019­ರೊ­ಳಗೆ ದೇಶ­ದಾದ್ಯಂತ ಸ್ವಚ್ಛತಾ ಆಂದೋ­ಲನ ಕೈಗೊಳ್ಳಬೇಕು ಎಂದು ಹೇಳಿದರು.

ಕಾಂಗ್ರೆಸ್‌್ ನಾಯಕ  ಮಲ್ಲಿ­ಕಾರ್ಜುನ ಖರ್ಗೆ ಅವರು, ಲೋಕಸಭೆ­ಯಲ್ಲಿ ಆಡಳಿತ ಪಕ್ಷ ಹಾಗೂ ವಿರೋಧ­­ಪಕ್ಷದ ಬಲಾಬಲವನ್ನು ಕೌರವರು–ಪಾಂಡ­ವರಿಗೆ ಹೋಲಿಸಿದ್ದಕ್ಕೆ  ತಿರುಗೇಟು ನೀಡಿದ ಮೋದಿ, ‘ಕೌರವ–ಪಾಂಡವ ಯುಗ ಮುಗಿಯಿತು. ನಾವು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಸಾಗುತ್ತೇವೆ’ ಎಂದರು.

‘ಕಷ್ಟಗಳು ಎದುರಾಗ­ಬಹುದು. ಆದರೆ  ನಿಮ್ಮ (ವಿರೋಧ­ಪಕ್ಷ) ಸಹ­ಕಾರ­ದಿಂದ ನಾವು ಮುಂದೆ ಸಾಗು­ತ್ತೇವೆ. ಈ ಸದನಕ್ಕೆ ಬರುವಾಗ ಕಹಿಭಾವನೆ­ಯನ್ನು ಹೊರಗೇ ಬಿಟ್ಟು ಒಳಗೆ ಕಾಲಿಡೋಣ’ ಎಂದರು.

ರಾಜ್ಯಸಭೆಯಲ್ಲಿ: ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಮೇಲ್ಮನೆಯಲ್ಲಿ ಉತ್ತರಿಸಿದ ಪ್ರಧಾನಿ ಮೋದಿ,  ಭ್ರಷ್ಟಾಚಾರ ರಹಿತ ಭಾರತ ತಮ್ಮ ಗುರಿ ಎಂದು ಅವರು ಹೇಳಿದರು.

ರಾಜಕೀಯವನ್ನು ಅಪರಾಧದಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಕಳಂಕಿತ ಸಂಸದರ ವಿರುದ್ಧ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥ­ಗೊಳಿಸುವಂತೆ ನ್ಯಾಯಾಂಗಕ್ಕೆ ಮನವಿ ಮಾಡಿಕೊಳ್ಳಲಾಗುವುದು ಎಂದರು.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.