ADVERTISEMENT

ಹಣೆಬರಹ ಇಂದು ನಿರ್ಧಾರ

ಗಲ್ಲು ಪ್ರಶ್ನಿಸಿ ಯಾಕೂಬ್‌ ಮೆಮನ್‌ ಅರ್ಜಿಗೆ ಭಿನ್ನ ತೀರ್ಪು: ಪ್ರಕರಣ ವಿಸ್ತೃತ ಪೀಠಕ್ಕೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2015, 19:30 IST
Last Updated 28 ಜುಲೈ 2015, 19:30 IST

ನವದೆಹಲಿ: ತನಗೆ ವಿಧಿಸಿರುವ ಗಲ್ಲು ಶಿಕ್ಷೆ ಜಾರಿಗೆ ತಡೆ ಕೊಡುವಂತೆ ಕೋರಿ ಮುಂಬೈ ಸರಣಿ ಬಾಂಬ್‌ ಸ್ಫೋಟದ ಪ್ರಮುಖ ಅಪರಾಧಿ ಯಾಕೂಬ್‌ ಮೆಮನ್‌ ಸಲ್ಲಿಸಿರುವ ಪರಿಹಾರಾತ್ಮಕ ಅರ್ಜಿ ಸಂಬಂಧ, ಸುಪ್ರೀಂ ಕೋರ್ಟ್‌ ದ್ವಿಸದಸ್ಯ ಪೀಠ ಮಂಗಳವಾರ ವಿಭಿನ್ನ ತೀರ್ಪು ನೀಡಿದ್ದರಿಂದಾಗಿ ವಿಸ್ತೃತ ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸಲಾಯಿತು.

ಯಾಕೂಬ್‌ ಮೆಮನ್‌ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ.ಆರ್‌. ದವೆ ಮತ್ತು ಕುರಿಯನ್‌ ಜೋಸೆಫ್‌ ಅವರು ವಿಭಿನ್ನವಾದ ತೀರ್ಪು ನೀಡಿದ್ದಾರೆ. ಆರೋಪಿ ಸಲ್ಲಿಸಿರುವ ಅರ್ಜಿಯನ್ನು ದವೆ ವಜಾ ಮಾಡಿದ್ದಾರೆ. ಆದರೆ, ಕುರಿಯನ್‌ ಜೋಸೆಫ್‌ ಇದೇ 30ರಂದು ಜಾರಿಯಾಗಬೇಕಿದ್ದ ಗಲ್ಲು ಶಿಕ್ಷೆಗೆ ಮುಂದಿನ ಆದೇಶದವರೆಗೆ ತಡೆಯಾಜ್ಞೆ ಕೊಟ್ಟಿದ್ದಾರೆ.

‘ಗಲ್ಲು ಶಿಕ್ಷೆಗೊಳಗಾಗಿರುವ ಯಾಕೂಬ್‌, ಅತ್ಯಂತ ಗಂಭೀರವಾದ ಅಪರಾಧ ಎಸಗಿದ್ದಾನೆ. ಅದೇ ಕಾರಣಕ್ಕೆ ಗಲ್ಲು ಶಿಕ್ಷೆ ನೀಡಲಾಗಿದೆ. ಸರ್ವೋಚ್ಚ ನ್ಯಾಯಾಲಯ ಶಿಕ್ಷೆ ಕಾಯಂಗೊಳಿಸಿದೆ. ಅಪರಾಧಿ ಸಲ್ಲಿಸಿರುವ ಪುನರ್‌ ಪರಿಶೀಲನಾ ಮತ್ತು ಪರಿಹಾರಾತ್ಮಕ ಅರ್ಜಿಗಳೂ ವಜಾ ಆಗಿವೆ. ಕ್ಷಮಾದಾನ ಕೋರಿದ್ದ ಅರ್ಜಿ ತಿರಸ್ಕೃತವಾಗಿದೆ. ಹೀಗಾಗಿ ಪ್ರಸ್ತುತ ಅರ್ಜಿ ವಜಾ ಮಾಡಲಾಗಿದೆ’ ಎಂದು ನ್ಯಾ. ದವೆ ಹೇಳಿದ್ದಾರೆ.

ಕುರಿಯನ್‌ ಭಿನ್ನ ನಿಲುವು: ಆದರೆ, ನ್ಯಾಯಮೂರ್ತಿ ಕುರಿಯನ್‌ ಜೋಸೆಫ್‌ ವಿಭಿನ್ನ ನಿಲುವು ತಳೆದಿದ್ದಾರೆ. ‘ಗಲ್ಲು ಶಿಕ್ಷೆಗೊಳಗಾದ ಅಪರಾಧಿ ಸಲ್ಲಿಸಿದ್ದ ಪರಿಹಾರಾತ್ಮಕ ಅರ್ಜಿ ಇತ್ಯರ್ಥಪಡಿಸುವ ಸಮಯದಲ್ಲಿ ಕಾನೂನಿನಡಿ ಸೂಚಿತವಾಗಿರುವ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಈ ಕಾರಣಕ್ಕೆ ಸೆಪ್ಟೆಂಬರ್ 12ರಂದು ಹೊರಡಿಸಲಾಗಿದ್ದ ಗಲ್ಲು ಶಿಕ್ಷೆ ಜಾರಿ ವಾರಂಟ್‌ಗೆ ತಡೆ ನೀಡಲಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಅತಂತ್ರಗೊಂಡ ಅರ್ಜಿ: ಇಬ್ಬರೂ ನ್ಯಾಯಮೂರ್ತಿಗಳು ಬೇರೆ ಬೇರೆ ನಿಲುವು ತಳೆದಿದ್ದರಿಂದ ಗಲ್ಲು ಶಿಕ್ಷೆ ಜಾರಿ ತಡೆಗೆ ಸಂಬಂಧಿಸಿದ ಅರ್ಜಿ ಅತಂತ್ರವಾಯಿತು. ಅನಂತರ ಅಟಾರ್ನಿ ಜನರಲ್‌ ಮುಕುಲ್ ರೋಹಟಗಿ, ಯಾಕೂಬ್‌ ಮೆಮನ್‌ ಅವರ ವಕೀಲರಾದ ರಾಜು ರಾಮಚಂದ್ರನ್‌ ಮುಖ್ಯ ನ್ಯಾಯಮೂರ್ತಿ ಎಚ್‌.ಎಲ್‌. ದತ್ತು ಅವರ ಪೀಠದ ಮುಂದೆ ಹಾಜರಾಗಿ ಕೂಡಲೇ ಪರಿಹಾರಾತ್ಮಕ ಅರ್ಜಿ ವಿಚಾರಣೆ ನಡೆಸುವಂತೆ ಮನವಿ ಮಾಡಿದರು.

ಮುಖ್ಯ ನ್ಯಾಯಮೂರ್ತಿಗಳು ಪ್ರಕರಣದ ವಿಚಾರಣೆಗೆ ವಿಸ್ತೃತ ಪೀಠ ರಚಿಸಲು ಒಪ್ಪಿದರು. ಯಾಕೂಬ್‌ ಅರ್ಜಿ ಬುಧವಾರ ವಿಚಾರಣೆಗೆ ಬರುವ ಸಾಧ್ಯತೆಯಿದೆ.
ಯಾಕೂಬ್ ಪ್ರಕರಣದ ವಿಚಾರಣೆ ಆರಂಭವಾದಾಗಿನಿಂದಲೂ ಇಬ್ಬರೂ ನ್ಯಾಯಮೂರ್ತಿಗಳು ವಿಭಿನ್ನ ತೀರ್ಪು ನೀಡುವುದು ಸ್ಪಷ್ಟವಾಗಿತ್ತು. ‘ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿಗಳು ಮತ್ತು ಅಪರಾಧಿ ರಕ್ಷಣೆ ಮಾಡಲು ನಿಂತಿರುವ ವಕೀಲರಿಗೆ ವರ್ಗಾಯಿಸಿ ಕೈತೊಳೆದುಕೊಳ್ಳುತ್ತಿದ್ದೇವೆ. ನಿರ್ಧಾರ ನಿಮಗೇ ಬಿಟ್ಟಿದ್ದು. ನೀವು ಯಾರನ್ನು ರಕ್ಷಿಸುತ್ತಿದ್ದೀರಿ ಎಂಬ ಸಂಗತಿ ಮನವರಿಕೆ ಆಗಿರಬಹುದು’ ಎಂದು ನ್ಯಾಯಮೂರ್ತಿ ದವೆ, ಹಿರಿಯ ವಕೀಲರಾದ ರಾಜು ರಾಮಚಂದ್ರನ್‌ ಮತ್ತು ಅಂಧ್ಯಾರ್ಜುನ ಅವರತ್ತ ನೋಡಿ ಹೇಳಿದರು.

ಮನುಸ್ಮೃತಿ ಶ್ಲೋಕಗಳನ್ನೂ ಉಲ್ಲೇಖಿಸಿರುವ ನ್ಯಾಯಮೂರ್ತಿ ದವೆ, ‘ಅಮಾಯಕರ ಮೇಲೆ ಕ್ರೌರ್ಯ ಎಸಗುವವರ ವಿರುದ್ಧ ದಂಡ ಪ್ರಯೋಗಿಸುವುದು ರಾಜನ ಧರ್ಮ’ ಎಂದಿದ್ದಾರೆ.

ಕುರಿಯನ್‌ ವ್ಯಾಖ್ಯಾನ: ದವೆ ಅವರ ನಿಲುವನ್ನು ಒಪ್ಪದ ನ್ಯಾ. ಕುರಿಯನ್‌ ಜೋಸೆಫ್‌, ‘ಜೀವಿಸುವುದು ಸಂವಿಧಾನಾತ್ಮಕವಾದ ಹಕ್ಕು. ಯಾವುದೇ ವ್ಯಕ್ತಿಯ ಜೀವಿಸುವ ಹಕ್ಕನ್ನು ರಕ್ಷಣೆ ಮಾಡಲಾಗದಷ್ಟು ಕಾನೂನು ದುರ್ಬಲವಾಗಿಲ್ಲ ಅಥವಾ ಸುಪ್ರೀಂ ಕೋರ್ಟ್‌ ಅಶಕ್ತವಾಗಿಲ್ಲ. ಕಾನೂನು ಇರುವುದೇ ಮನುಷ್ಯನ ರಕ್ಷಣೆಗಾಗಿ. ನ್ಯಾಯಾಲಯ ಸಮರ್ಪಕ ತೀರ್ಪುಗಳನ್ನು ನೀಡುವುದಕ್ಕೆ ತಾಂತ್ರಿಕ ಅಂಶಗಳು ಅಡ್ಡಿಯಾಗಬಾರದು’ ಎಂದು ವ್ಯಾಖ್ಯಾನಿಸಿದ್ದಾರೆ.

ಯಾಕೂಬ್‌ ಮೆಮನ್‌ ಸಲ್ಲಿಸಿದ್ದ ಪುನರ್‌ ಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ. ಜೆ. ಚಲಮೇಶ್ವರ್‌ ಅವರಾಗಲೀ ಅಥವಾ ತಾವಾಗಲೀ, ಈ ತಿಂಗಳ 21ರಂದು ಪರಿಹಾರಾತ್ಮಕ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯ ಪೀಠದ ಭಾಗವಾಗಿರಲಿಲ್ಲ. ಇದು ಸುಪ್ರೀಂ ಕೋರ್ಟ್‌ ನಿಯಮದ ಉಲ್ಲಂಘನೆ ಎಂದು ಸ್‍ಪಷ್ಟಪಡಿಸಿದ್ದಾರೆ.

2013ರ ಸುಪ್ರೀಂ ಕೋರ್ಟ್‌ ನಿಯಮದ ಪ್ರಕಾರ ಪುನರ್‌ ಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಪರಿಹಾರಾತ್ಮಕ ಅರ್ಜಿ ವಿಚಾರಣೆ ನಡೆಸುವ ನ್ಯಾಯಪೀಠದ ಭಾಗವಾಗಿರಬೇಕು. ಯಾಕೂಬ್‌ ಪರಿಹಾರಾತ್ಮಕ ಅರ್ಜಿ ತಿರಸ್ಕರಿಸಿದ ಪೀಠದಲ್ಲಿ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ನ್ಯಾಯಮೂರ್ತಿಗಳಾದ ಟಿ.ಎಸ್‌.ಠಾಕೂರ್ ಹಾಗೂ  ದವೆ ಅವರಿದ್ದರು.

ಅಟಾರ್ನಿ ಜನರಲ್‌ ವಿರೋಧ: ಈ ಪ್ರಕರಣದಲ್ಲಿ ಮಹಾರಾಷ್ಟ್ರ ಸರ್ಕಾರವನ್ನು ಪ್ರತಿನಿಧಿಸಿರುವ ಅಟಾರ್ನಿ ಜನರಲ್‌ ಮುಕುಲ್‌ ರೋಹಟಗಿ, ಯಾಕೂಬ್‌ ಮೆಮನ್‌  ಅರ್ಜಿ ವಿಚಾರಣೆ ನಡೆಸುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ‘ಅಪರಾಧಿ ಗಲ್ಲುಗಂಬ ಏರುವುದನ್ನು ತಪ್ಪಿಸಲು ಸಾಧ್ಯವಿಲ್ಲ. ನೀವು ಶಿಕ್ಷೆ ಜಾರಿಗೆ ವಿಳಂಬ ಮಾಡುತ್ತಿದ್ದೀರಿ. ನಮಗೂ ಮನುಷ್ಯನ ಪ್ರಾಣದ ಬಗ್ಗೆ ಗೌರವವಿದೆ. ಆದರೆ, ಸರಣಿ ಬಾಂಬ್‌ ಸ್ಫೋಟದಲ್ಲಿ 257 ಜನ ಮೃತಪಟ್ಟಿದ್ದಾರೆ’ ಎಂದು ವಾದಿಸಿದರು.

‘ರಿಟ್‌ ಅರ್ಜಿಗಳಿಗೆ ಕೊನೆ ಇಲ್ಲದಿರುವುದರಿಂದ ಯಾವುದಾದರೂ ಹಂತದಲ್ಲಿ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪು ಅಂತಿಮಗೊಳ್ಳಲೇಬೇಕು. ಗಲ್ಲು ಶಿಕ್ಷೆ ಜಾರಿ ವಾರಂಟ್‌ ರದ್ದಾದರೂ ಹೊಸದಾಗಿ ಹೊರಡಿಸಬಹುದು’  ಎಂದೂ ರೋಹಟಗಿ ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.