ADVERTISEMENT

ಹಸನ್ಮುಖಿಯ ಬುಲೆಟ್‌ ಬಜೆಟ್‌

​ಪ್ರಜಾವಾಣಿ ವಾರ್ತೆ
Published 8 ಜುಲೈ 2014, 19:30 IST
Last Updated 8 ಜುಲೈ 2014, 19:30 IST

ನವದೆಹಲಿ (ಪಿಟಿಐ): ಬಜೆಟ್‌ನಲ್ಲಿ ಬುಲೆಟ್‌ ರೈಲುಗಳ ಘೋಷಣೆ ಮಾಡಿದ  ರೈಲ್ವೆ ಸಚಿವ ಸದಾನಂದ ಗೌಡ ಮಂಗಳವಾರ ಬುಲೆಟ್‌ ವೇಗದಲ್ಲಿಯೇ ತಮ್ಮ ಮೊದಲ ರೈಲ್ವೆ ಬಜೆಟ್‌ ಮಂಡಿಸಿದರು.

ಕೆನೆ ಬಣ್ಣದ  ಅರ್ಧ ತೋಳಿನ  ಕೋಟು ತೊಟ್ಟು ‘ಬಜೆಟ್‌ ಬ್ರೀಫ್‌­ಕೇಸ್‌’ನೊಂದಿಗೆ ಸಂಸತ್‌ಗೆ ಬಂದ ಗೌಡರು ಎಂದಿನ ತಮ್ಮ ಮಂದಹಾಸ ಬೀರುತ್ತ ಬಜೆಟ್‌ ಮಂಡಿಸಿದರು. ಗೌಡರು ನಿರಾತಂಕವಾಗಿ  ಮಂಡಿ­ಸಿದ ಬಜೆಟ್ಅನ್ನು ಪ್ರಧಾನಿ ನರೇಂದ್ರ ಮೋದಿ ತದೇಕ ಚಿತ್ತದಿಂದ  ಆಲಿಸುತ್ತಿ­ದ್ದರು. ಎನ್‌ಡಿಎ ಪಾಳಯದಲ್ಲಿ ಉತ್ಸಾಹ ಮೇರೆ ಮೀರಿತ್ತು.

ಗೌಡರು ಬಜೆಟ್‌ ಮಂಡಿಸಲು ಆರಂಭಿಸುತ್ತಿದ್ದಂತೆಯೇ ಹಿಂಬದಿಯಿಂದ ಕೇಳಿ ಬರುತ್ತಿದ್ದ ಅಲ್ಲೊಂದು, ಇಲ್ಲೊಂದು ಕೂಗು ಬಿಟ್ಟರೆ ಹೆಚ್ಚಿನ ಗದ್ದಲ, ಗಲಾಟೆಗಳಿರಲಿಲ್ಲ.   ವಿರೋಧ­ಪಕ್ಷಗಳ  ಅಡೆತಡೆ ಮೀರಿ ಗೌಡರ ಬಜೆಟ್‌ ಬುಲೆಟ್‌ ವೇಗದಲ್ಲಿ ಸಾಗು­ತ್ತಿತ್ತು. ಅವರ ವೇಗಕ್ಕೆ ಟಿಎಂಸಿಯ ಸಂಸದ ಸುಗತ್‌ ರಾಯ್‌ ಬ್ರೇಕ್‌ ಹಾಕಿದರು.

ಬಜೆಟ್‌ ಮಂಡನೆಯ  ಮಧ್ಯೆ ನೀರು ಕುಡಿಯಲು  ಮುಂದಾದ ಸಚಿವರನ್ನು ಕುರಿತು ಸುಗತ್‌ ರಾಯ್‌ ‘ನಿಧಾನವಾಗಿ ಬಜೆಟ್‌ ಮಂಡಿಸಿ’ ಎಂದು ಸಲಹೆ ನೀಡಿದರು.  ಆಗ ಸಚಿವರು ನಸು ನಗು­ತ್ತಲೇ ‘ಹಾಗಾದರೆ ನನ್ನ ಬಜೆಟ್‌ ನಿಮಗೆ ಇಷ್ಟವಾಗಿದೆ ಎಂದರ್ಥ’  ಎಂದು  ತಿರುಗೇಟು ನೀಡಿದರು. 

ಉಧಮ್‌ಪುರ–ಕತ್ರಾ ರೈಲು ಜೋಡಣೆ ಅಟಲ್‌ ಬಿಹಾರಿ ವಾಜ­ಪೇಯಿ ಅವರ ಕನಸನ್ನು ನನಸು ಮಾಡುತ್ತಿದ್ದೇವೆ ಎಂದು ಗೌಡರು  ಹೇಳಿದರು.  ಸಾಮಾನ್ಯವಾಗಿ ಯಾವುದೇ ಭಾವನೆ ವ್ಯಕ್ತಪಡಿಸದ ಸೋನಿಯಾ ‘ಇದು ಯುಪಿಎ ಯೋಜನೆ’ ಎಂದು  ಗೊಣಗಿದರು.  

ಕೊನೆಯಲ್ಲಿ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಮತ್ತು ಕೇರಳದ ಸಂಸದರು, ‘ಬಜೆಟ್‌ನಲ್ಲಿ ತಮ್ಮ ರಾಜ್ಯಗಳಿಗೆ ಅನ್ಯಾಯವಾಗಿದೆ’ ‘ಗುಜರಾತ್‌ ಮಾದರಿ ನಡೆಯುವುದಿಲ್ಲ’ ಎಂದು  ಘೋಷಣೆ ಕೂಗಿದರು.

ಚಾಣಕ್ಯನ ನೆನಪು
ಪ್ರಜಾಸುಖೇ ಸುಖಂ ರಾಜಃ

ಪ್ರಜಾನಾಂ ಚ ಹಿತೇ ಹಿತಂ
ನಾತ್ಮಪ್ರಿಯಾಂ ಹಿತಂ ರಾಜಃ
ಪ್ರಜಾನಾಂ ತು ಪ್ರಿಯಂ ಹಿತಂ
–ಕೌಟಿಲ್ಯ
(ಪ್ರಜೆಗಳ ಸುಖದಲ್ಲೇ ರಾಜನ ಸುಖ ಇದೆ. ಅವರ ಕಲ್ಯಾಣವೇ ರಾಜನ ಕಲ್ಯಾಣ. ತನಗೆ ಪ್ರಿಯವಾ­ದುದು ಒಳ್ಳೆಯದು ಎಂದು ರಾಜ ಭಾವಿಸಬಾರದು. ಆದರೆ, ಪ್ರಜೆ­ಗಳಿಗೆ ಪ್ರಿಯವಾದುದೇ ತನಗೆ ಪ್ರಿಯ ಎಂದಾತ ಭಾವಿಸಬೇಕು)

ಔಷಧಿಯ ಕಹಿ, ಜೇನಿನ ಸಿಹಿ
ಔಷಧ ಆರಂಭದಲ್ಲಿ ಕಹಿ ಎನಿಸಬಹುದು. ಕೊನೆಯಲ್ಲಿ ಅದು ಜೇನಿನಂತೆ ಸಿಹಿಯಾಗಿರುತ್ತದೆ. ಅದೇ ರೀತಿ ರೈಲು ದರ ಹೆಚ್ಚಳ ಕೂಡ ಆರಂಭದಲ್ಲಿ ಕಹಿ ಎನಿಸಬಹುದು. ಕೊನೆಗೆ ಅದರ ಫಲ ಸಿಹಿಯಾಗಿರುತ್ತದೆ.

– ಸದಾನಂದ ಗೌಡ
ರೈಲ್ವೆ ಸಚಿವ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.