ADVERTISEMENT

‘ಹಿಂಸೆಗೆ ಪಾಕ್‌ ಕುಮ್ಮಕ್ಕು’

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2016, 19:30 IST
Last Updated 27 ಆಗಸ್ಟ್ 2016, 19:30 IST

ನವದೆಹಲಿ (ಪಿಟಿಐ): ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸೆ ವ್ಯಾಪಿಸಲು ಪಾಕಿಸ್ತಾನವೇ ಕಾರಣ ಎಂದು ಮೆಹಬೂಬ ನೆರೆಯ ದೇಶವನ್ನು ನೇರವಾಗಿ ಟೀಕಿಸಿದ್ದಾರೆ.

‘ಕಾಶ್ಮೀರ ಕಣಿವೆಯಲ್ಲಿ ಉದ್ವಿಗ್ನತೆ ಸೃಷ್ಟಿಸಲು ಪಾಕಿಸ್ತಾನ ಬಹಿರಂಗವಾಗಿ ಪ್ರಚೋದನೆ ನೀಡುತ್ತಿದೆ’ ಎಂದು ಆರೋಪಿಸಿದ್ದಾರೆ.

‘ಪಾಕಿಸ್ತಾನಕ್ಕೆ ಕಾಶ್ಮೀರದ ಜನರ ಮೇಲೆ ನಿಜವಾದ ಕಳಕಳಿಯಿದ್ದರೆ, ಯುವಕರನ್ನು ಹಿಂಸೆಗೆ ಪ್ರಚೋದಿಸುವ ಬದಲು ಶಾಂತಿ ನೆಲೆಸಲು ಸಹಕರಿಸಲಿ’ ಎಂದಿದ್ದಾರೆ.  ಪಾಕಿಸ್ತಾನದ ಜತೆ ಸಂಧಾನ ಮಾತುಕತೆ ಮುಂದುವರಿಸಲು ಪ್ರಯತ್ನಿಸಿದ ಮೋದಿ ಮತ್ತು ಗೃಹಸಚಿವ ರಾಜನಾಥ್‌ ಸಿಂಗ್‌ ಅವರನ್ನು ಮೆಹಬೂಬ ಶ್ಲಾಘಿಸಿದರು.

‘ಮೋದಿ ಪ್ರಮಾಣವಚನ ಸಮಾರಂಭಕ್ಕೆ ನವಾಜ್‌ ಷರೀಫ್‌ ಅವರನ್ನು ಆಹ್ವಾನಿಸುವ ಮೂಲಕ ಪಾಕ್‌ ಜತೆ ಸ್ನೇಹ ಹಸ್ತ ಚಾಚಿದ್ದರು. ದುರದೃಷ್ಟವೆಂದರೆ ಅದರ ಬೆನ್ನಲ್ಲೇ ಪಠಾಣ್‌ಕೋಟ್‌ ಮೇಲಿನ ದಾಳಿ ನಡೆಯಿತು.

‘ಕಾಶ್ಮೀರದಲ್ಲಿ ಹಿಂಸಾಚಾರ ಹರಡಲು ಪಾಕಿಸ್ತಾನ ಪ್ರಚೋದನೆ ನೀಡುತ್ತಿರುವುದರ ಮಧ್ಯೆಯೇ ಗೃಹ ಸಚಿವ ರಾಜನಾಥ್‌ ಸಿಂಗ್‌ ಆ ದೇಶಕ್ಕೆ ಭೇಟಿ ಕೊಟ್ಟಿದ್ದರು. ಆದರೆ ಭಾರತದ ಜತೆ ಶಾಂತಿ ಮಾತುಕತೆ ಮುಂದುವರಿಸಲು ಲಭಿಸಿದ್ದ ಚಿನ್ನದಂತಹ ಅವಕಾಶವನ್ನು ಪಾಕ್‌ ಮತ್ತೆ ಹಾಳುಮಾಡಿಕೊಂಡಿತು. ಒಬ್ಬ ಅತಿಥಿಗೆ  ತೋರಿಸಬೇಕಾದ ಗೌರವವನ್ನೂ ಗೃಹಸಚಿವರಿಗೆ ತೋರಿಸಲಿಲ್ಲ’ ಎಂದು ನೆರೆಯ ರಾಷ್ಟ್ರವನ್ನು ದೂರಿದರು.

ಒವೈಸಿ ಸಲಹೆ:  ಕಾಶ್ಮೀರದಲ್ಲಿರುವ ಆತಂಕಕಾರಿ ಸ್ಥಿತಿಯಲ್ಲಿ ಸುಧಾರಣೆ ತರಲು ಕೇಂದ್ರ ಸರ್ಕಾರವು ಸಂಬಂಧಪಟ್ಟವರ ಎಲ್ಲರೊಂದಿಗೆ ಶೀಘ್ರ ಮಾತುಕತೆ ನಡೆಸಬೇಕೆಂದು ಅಖಿಲ ಭಾರತ ಮಜ್ಲಿಸ್‌–ಇ–ಇತೆಹಾದುಲ್‌ ಮುಸ್ಲಿಮೀನ್‌ನ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ ಅವರು ಶನಿವಾರ ಆಗ್ರಹಿಸಿದರು.

ಕಾಶ್ಮೀರದಲ್ಲಿ ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿ (ಪಿಡಿಪಿ), ವಿರೋಧ ಪಕ್ಷವಾದ ನ್ಯಾಷನಲ್‌ ಕಾನ್ಫರೆನ್ಸ್ (ಎನ್‌ಸಿ) ಮತ್ತು ಹುರಿಯತ್‌ ನಾಯಕರು ನೆಲೆ ಕಳೆದುಕೊಂಡಿದ್ದಾರೆ. ಶಾಂತಿ ಮರುಸ್ಥಾಪನೆಗೆ ಯಾರ ಜತೆ ಮಾತುಕತೆ ನಡೆಸಬೇಕೆಂದು ತಿಳಿಯಲಾಗದ ಸ್ಥಿತಿಯಲ್ಲಿ ಸರ್ಕಾರ ಇದೆ ಎಂದು ಒವೈಸಿ ಇಲ್ಲಿ ಪತ್ರಕರ್ತರಿಗೆ ತಿಳಿಸಿದರು.

ಸರ್ಕಾರ ಕೂಡಲೇ ಮಾತುಕತೆಗೆ ಮುಂದಾಗಬೇಕು ಎಂದು ಹೈದರಾಬಾದ್‌ನ ಸಂಸದರೂ ಆಗಿರುವ ಒವೈಸಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT