ADVERTISEMENT

ಹೆಮ್ಮೆಯ ಹಿಂದೂ ಕೈಗೆ ದೆಹಲಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2014, 19:30 IST
Last Updated 21 ನವೆಂಬರ್ 2014, 19:30 IST

ನವದೆಹಲಿ (ಪಿಟಿಐ): ಎಂಟು ನೂರು ವರ್ಷಗಳ ನಂತರ ದೆಹಲಿಯನ್ನು ಆಳಲು ‘ಹೆಮ್ಮೆಯ ಹಿಂದೂಗಳು’ ಬಂದಿದ್ದಾರೆ ಎಂದಿ­ರುವ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ), ಶಾಲೆಗಳಲ್ಲಿ ಸಂಸ್ಕೃತವನ್ನು ಕಡ್ಡಾಯ ಮಾಡಬೇಕು ಎಂದು ಒತ್ತಾಯಿಸಿದೆ.

ಇಲ್ಲಿ ಶುಕ್ರವಾರ ಆರಂಭವಾದ 3 ದಿನಗಳ ವಿಶ್ವ ಹಿಂದೂ ಸಮ್ಮೇಳ­ನವನ್ನು ಉದ್ದೇಶಿಸಿ ಮಾತನಾಡಿದ ವಿಎಚ್‌ಪಿ ಮುಖ್ಯಸ್ಥ ಅಶೋಕ್ ಸಿಂಘಾಲ್, ‘800 ವರ್ಷ ಹಿಂದೆ ದೆಹಲಿಯನ್ನು ಫೃಥ್ವಿ­ರಾಜ್ ಚೌಹಾಣ್‌ ಆಳಿದ್ದ. ಆತನ ನಂತರ  ಮುಸ್ಲಿಮರು, ಇಂಗ್ಲಿಷರ ಕೈಗೆ ದೆಹಲಿ ಆಡಳಿತ ಹೋಗಿತ್ತು. ಈಗಷ್ಟೇ ಹೆಮ್ಮೆಯ ಹಿಂದೂಗಳು ರಾಜ­ಧಾನಿ­­ ಆಳಲು ಬಂದಿದ್ದಾರೆ’ ಎಂದಿದ್ದಾರೆ.

‘ಕೇಂದ್ರೀಯ ವಿದ್ಯಾಲಯಗಳಲ್ಲಿ  ಸಂಸ್ಕೃ­ತದ ಅಧ್ಯಯನವನ್ನು ಕಡ್ಡಾಯ­ಗೊಳಿಸಬೇಕು. ಅಲ್ಲದೆ ಕಡ್ಡಾಯ­ಗೊಳಿ­ಸ­ಬೇಕಾದ ಮತ್ತಷ್ಟು ವಿಷಯ­ಗಳಿವೆ. ಅದಕ್ಕೆ ಈಗ ಸಮಯ ಬಂದಿದೆ’ ಎಂದಿ­ದ್ದಾರೆ. ಸಮ್ಮೇಳನದಲ್ಲಿ ಆರ್‌ಎಸ್‌ಎಸ್‌ ಮುಖಂಡ ಮೋಹನ್ ಭಾಗವತ್ ಮಾತ­ನಾಡಿ, ‘ಹಿಂದೂಗಳು ಒಗ್ಗಟ್ಟಿ­ನಿಂದ ಎದ್ದೇ­ಳ­ಬೇಕು. ನಾವು ವಿಶ್ವನಾ­ಯಕರು ಎಂಬು­ದನ್ನು ತೋರಿಸಬೇಕು’ ಎಂದಿದ್ದಾರೆ.

ನರಸಿಂಹ ರಾವ್, ದೇವೇಗೌಡ, ವಾಜಪೇಯಿ ಹಿಂದೂಗಳಲ್ಲವೆ?: ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕರು, ಇಂತಹ ಕೋಮುವಾದಿ ರಾಜಕಾರಣ ದೇಶದ ಏಕತೆ ಮತ್ತು ಸಂವಿಧಾನಕ್ಕೆ ವಿರೋಧವಾದುದು.  ಕೇಸರಿವಾಲಾಗಳು ಭಾಷೆಯ ವಿಚಾರ­ದಲ್ಲೂ ತಮ್ಮ  ಬೂಟಾ­ಟಿಕೆ ಪ್ರದರ್ಶಿಸು­ತ್ತಿ­ದ್ದಾರೆ ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್ ವಕ್ತಾರ ಶಕ್ತಿಸಿನ್ಹ ಗೋಹಿಲ್, ‘ಸಂಘ ಪರಿವಾರದವರ ಹಿಂದೂ ವ್ಯಾಖ್ಯಾನ ಬೇರೆಯೇ ಆಗಿದೆ. ಹಾಗಿದ್ದಲ್ಲಿ, ಪಿ.ವಿ. ನರಸಿಂಹ ರಾವ್, ಅಟಲ್‌ ಬಿಹಾರಿ ವಾಜಪೇಯಿ ಮತ್ತು ಎಚ್‌.ಡಿ. ದೇವೇಗೌಡ ಹಿಂದೂಗಳಲ್ಲದೆ ಯಾರು ಎಂದು ಕೇಳಬೇಕಿದೆ’ ಎಂದು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.