ADVERTISEMENT

ಹೆರಾತ್ ದಾಳಿ: ಮೋದಿ ಖಂಡನೆ, ಪಡೆಗಳಿಗೆ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 23 ಮೇ 2014, 12:54 IST
Last Updated 23 ಮೇ 2014, 12:54 IST

ನವದೆಹಲಿ (ಪಿಟಿಐ): ಹೆರಾತ್ ಪ್ರಾಂತ್ಯದಲ್ಲಿ ಭಾರತೀಯ ರಾಜತಾಂತ್ರಿಕ ಕಚೇರಿ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಆಫ್ಘಾನಿಸ್ತಾನದ ಅಧ್ಯಕ್ಷ ಹಮೀದ್ ಕರ್ಝೈ ಅವರ ಜೊತೆಗೆ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಮಾತನಾಡಿದ್ದು ಆಫ್ಘಾನಿಸ್ತಾನದಲ್ಲಿನ ಭಾರತೀಯ ಕಚೇರಿಗಳ ರಕ್ಷಣೆಗೆ ಎಲ್ಲಾ ಕ್ರಮ ಕೈಗೊಳ್ಳಲಾಗುವುದೆಂಬ ಭರವಸೆಯನ್ನು ಪಡೆದುಕೊಂಡಿದ್ದಾರೆ.

ಮೋದಿಯವರು ಆಫ್ಘಾನಿಸ್ತಾನದಲ್ಲಿನ ಭಾರತೀಯ ರಾಯಭಾರಿ ಅಮರ ಸಿನ್ಹ ಅವರ ಜೊತೆಗೂ ದಾಳಿ ನಡೆದ ಬೆನ್ನಲ್ಲೇ ಮಾತನಾಡಿ, ದಾಳಿಯನ್ನು ಖಂಡಿಸಿ ಪರಿಸ್ಥಿತಿಯ ಮೇಲೆ ತಾವು ಕಣ್ಣಿಟ್ಟಿರುವುದಾಗಿ ಹೇಳಿದ್ದಾರೆ.

ಭಯೋತ್ಪಾದಕರ ಜೊತೆಗೆ ಶೌರ್ಯದಿಂದ ಹೋರಾಡಿ ಅವರನ್ನು ಕೊಂದು ಹಾಕುವಲ್ಲಿ ಹೆರಾತ್ ರಾಜತಾಂತ್ರಿಕ ಕಚೇರಿಯಲ್ಲಿನ ಭದ್ರತಾ ಪಡೆಗಳು ವಹಿಸಿದ ಪಾತ್ರವನ್ನೂ ಮೋದಿ ಪ್ರಶಂಸಿದ್ದಾರೆ. 'ಅಧ್ಯಕ್ಷ ಕರ್ಝೈ ಮತ್ತು ನಾನು ಹೆರಾತ್ ನಲ್ಲಿನ ರಾಜತಾಂತ್ರಿಕ ಕಚೇರಿ ಮೇಲಿನ ದಾಳಿ ಬಗ್ಗೆ ಮಾತನಾಡಿದ್ದೇವೆ. ಆಫ್ಘಾನಿಸ್ತಾನದಲ್ಲಿನ ಭಾರತೀಯ ಕಚೇರಿಗಳ ರಕ್ಷಣೆಗೆ ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ನನಗೆ ಭರವಸೆ ನೀಡಿದ್ದಾರೆ' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ದೂರವಾಣಿ ಸಂಭಾಷಣೆ ಕಾಲದಲ್ಲಿ ಭಾರತದ ನಿಯೋಜಿತ ಪ್ರದಾನಿ ಭಾರತೀಯ ರಾಯಭಾರಿ ಕಚೇರಿ ಮೇಲಿನ ಭಯೋತ್ತಾದಕ ದಾಳಿಯನ್ನು ಹಿಮ್ಮೆಟ್ಟಿಸುವಲ್ಲಿನ ಭಾರತೀಯ ಮತ್ತು ಆಫ್ಘಾನ್ ಪಡೆಗಳ ಯತ್ನಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.

'ಭಾರತೀಯ ಭದ್ರತಾ ಸಿಬ್ಬಂದಿ ಮತ್ತು ಆಫ್ಘಾನ್ ಭದ್ರತಾ ಪಡೆಗಳಿಗೆ ಹೆರಾತ್ ನಲ್ಲಿ ಭಯೋತ್ಪಾದಕರ ವಿರುದ್ಧದ ಸಮರ ಹಿಮ್ಮೆಟ್ಟಿಸಲು ನಡೆಸಿ ಶೌರ್ಯಶಾಲಿ ಪ್ರಯತ್ನಗಳಿಗೆ ಭಾರತ ವಂದಿಸುತ್ತದೆ' ಎಂದೂ ಮೋದಿ ಹೇಳಿದ್ದಾರೆ.

ರಾಜತಾಂತ್ರಿಕ ಸಿಬ್ಬಂದಿಯ 'ಮಟ್ಟಹಾಕಲಾಗದಂತಹ ಧೈರ್ಯ ಹಾಗೂ ಉತ್ಸಾಹವನ್ನೂ' ಮೋದಿ ಪ್ರಶಂಸಿಸಿ ಅದಕ್ಕಾಗಿ ಅವರನ್ನು ವಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.