ADVERTISEMENT

‘ಕಪ್ಪಗಾದರೆ ಗಂಡು ಸಿಗಲ್ಲ’

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2015, 19:30 IST
Last Updated 1 ಏಪ್ರಿಲ್ 2015, 19:30 IST

ಪಣಜಿ (ಪಿಟಿಐ): ‘ನೀವು ಬಿಸಿಲಿನಲ್ಲಿ ಈ ರೀತಿ ಉಪವಾಸ ಕೂತರೇ ಕಪ್ಪಗಾಗುತ್ತೀರಿ. ಆಗ ನಿಮಗೆ ಗಂಡು ಸಿಗುವುದು ಕಷ್ಟ’ ಎಂದು ಪ್ರತಿಭಟನಾನಿರತ ದಾದಿಯರನ್ನು ಉದ್ದೇಶಿಸಿ ಗೋವಾ ಮುಖ್ಯಮಂತ್ರಿ ಲಕ್ಷ್ಮಿಕಾಂತ್‌ ಪರ್ಸೇಕರ್‌ ನೀಡಿದ್ದಾರೆ ಎನ್ನಲಾದ ಹೇಳಿಕೆ ಕೂಡ ವಿವಾದಕ್ಕೆ ಕಾರಣವಾಗಿದೆ.

‌‘ನಾನು ಈ ರೀತಿ ಹೇಳಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ’ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

‘ನಮ್ಮ ಬೇಡಿಕೆಯನ್ನು ಮುಂದಿಟ್ಟುಕೊಂಡು ಪೊಂಡಾದಲ್ಲಿ ಮುಖ್ಯಮಂತ್ರಿಯವರನ್ನು ಭೇಟಿಯಾಗಲು ಹೋಗಿದ್ದೆವು. ಹೆಣ್ಣುಮಕ್ಕಳು ಈ ಉರಿ ಬಿಸಿಲಿನಲ್ಲಿ ಹೀಗೆ ಉಪವಾಸ ಸತ್ಯಾಗ್ರಹ ಮಾಡಬಾರದು. ಇದರಿಂದ ಅವರು ಕಪ್ಪಗಾಗುತ್ತಾರೆ. ಆಗ ಒಳ್ಳೆಯ ವರ ಸಿಗುವುದು ಕಷ್ಟವಾಗುತ್ತದೆ ಎಂದು ಮುಖ್ಯಮಂತ್ರಿ  ಹೇಳಿದರು’ ಎಂಬುದಾಗಿ ಅನುಷಾ ಸಾವಂತ್‌ ಮಂಗಳವಾರ ಆರೋಪಿಸಿದ್ದರು.

‘ಈ ಯುವತಿ ನನಗೆ ಗೊತ್ತು. ಹಿಂದೆ ನೋಡಿದ್ದಕ್ಕೂ ಈಗ ನೋಡುತ್ತಿರುವುದಕ್ಕೂ ಅವರ ಬಣ್ಣದಲ್ಲಿ ವ್ಯತ್ಯಾಸ ಕಂಡಿತು.  ಆದ ಕಾರಣ ಪ್ರಾಸಂಗಿಕವಾಗಿ ನಾನು  ಆ ರೀತಿ ಹೇಳಿದ್ದೆ’ ಎಂದು ಮುಖ್ಯಮಂತ್ರಿ ಸಮರ್ಥಿಸಿಕೊಂಡಿದ್ದಾರೆ.

ಕೆಲವು ಪ್ರತಿಭಟನಾಕಾರರು ನಮ್ಮ ನಡುವಿನ ಮಾತುಕತೆಯನ್ನು ಮೊಬೈಲ್‌ನಲ್ಲಿ ಧ್ವನಿಮುದ್ರಿಸಿಕೊಂಡಿದ್ದಾರೆ.  ನನ್ನ ಹೇಳಿಕೆ ಬಗ್ಗೆ ಅನುಮಾನ ಇದ್ದವರು  ಇದನ್ನು ಆಲಿಸಬಹುದು ಎಂದೂ ಅವರು ಹೇಳಿದ್ದಾರೆ.

ಹಳೆಯ ವಿವಾದ: ಈ ಹಿಂದೆಯೂ ಪರ್ಸೇಕರ್‌ ವಿವಾದಿತ ಹೇಳಿಕೆ ನೀಡಿದ್ದರು. ದೇವರ ‘ತಪ್ಪು’ ಹಾಗೂ ‘ನಿರ್ಲಕ್ಷ್ಯ’ದಿಂದ ಕೆಲವರು ಹುಟ್ಟಿನಿಂದ ಅಂಗವಿಕಲರಾಗಿದ್ದಾರೆ ಎಂದು ಹೇಳಿದ್ದರು.

ಅಂಗವಿಕಲರ ಶ್ರೇಯೋಭಿವೃದ್ಧಿಗೆ ಕೆಲಸ ಮಾಡುತ್ತಿರುವ ಸ್ವಯಂಸೇವಾ ಸಂಸ್ಥೆಗಳು ದೇವರಿಗಿಂತ ಮಿಗಿಲಾಗಿವೆ. ದೇವರು ಮಾಡದ ಕೆಲಸವನ್ನು ಅವು ಮಾಡುತ್ತಿವೆ ಎಂದು ಅವರು ನುಡಿದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.