ಶ್ರಿಹರಿಕೋಟ: ಬಾಹ್ಯಾಕಾಶಕ್ಕೆ ಮಾನವನನ್ನು ಕಳುಹಿಸುವ ಯೋಜನೆಗೆ ಮೊದಲ ಮೆಟ್ಟಿಲು ಎಂದೇ ಬಣ್ಣಿಸಲಾಗಿರುವ, ‘ಇಸ್ರೊ’ದ ಮಹತ್ವಾಂಕಾಂಕ್ಷೆಯ ‘ಜಿಎಸ್ಎಲ್ವಿ ಮಾರ್ಕ್–3’ ರಾಕೆಟ್ನ ಪ್ರಾಯೋಗಿಕ ಉಡಾವಣೆ ಗುರುವಾರ ಯಶಸ್ವಿಯಾಗಿ ನಡೆಯಿತು.
ಭಾರಿ ತೂಕದ ಉಪಗ್ರಹಗಳು ಹಾಗೂ ಮಾನವಸಹಿತ ಅಂತರಿಕ್ಷ ನೌಕೆಗಳನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯುವ ಸಾಮರ್ಥ್ಯ ಹೊಂದಿರುವ ಈ ರಾಕೆಟ್ ಅನ್ನು ಪೂರ್ವ ನಿಗದಿಯಂತೆ ಗುರುವಾರ ಬೆಳಿಗ್ಗೆ 9.30ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು ಎಂದು ಈ ಕೇಂದ್ರದ ನಿರ್ದೇಶಕ ವೈ. ಎಸ್. ಪ್ರಸಾದ್ ತಿಳಿಸಿದರು.
630 ಟನ್ ತೂಕ ಮತ್ತು 43.43 ಮೀಟರ್ ಎತ್ತರ ಇರುವ ಈ ರಾಕೆಟ್ಗೆ ದ್ರವ ಹಾಗೂ ಘನ ಇಂಧನದ ಮೂಲಕ ಬಲ ತುಂಬಲಾಗುತ್ತದೆ. ಈ ಪ್ರಾಯೋಗಿಕ ಉಡಾವಣೆಗೆ 155 ಕೋಟಿ ರೂಪಾಯಿ ವೆಚ್ಚವಾಗುತ್ತಿದೆ. ರಾಕೆಟ್ 126 ಕಿ.ಮೀ. ಎತ್ತರಕ್ಕೆ ಚಿಮ್ಮಲಿದ್ದು, ಮನುಷ್ಯರನ್ನು ಕೊಂಡೊಯ್ಯುವ ಅಂತರಿಕ್ಷ ನೌಕೆಯ ಮಾದರಿ 20 ನಿಮಿಷಗಳ ನಂತರ ಬಂಗಾಳ ಕೊಲ್ಲಿಯಲ್ಲಿ ಬೀಳಲಿದೆ.
ದೈತ್ಯ ಕಪ್ ಕೇಕ್ನಂತೆ ಕಾಣುವ ಈ ಅಂತರಿಕ್ಷ ನೌಕೆಯ ಮಾದರಿ 3650 ಕೆ.ಜಿ ತೂಕದ್ದಾಗಿದೆ. 23 ಜನರು ಅದರಲ್ಲಿ ಕುಳಿತುಕೊಳ್ಳಬಹುದಾಗಿದೆ. ಶ್ರೀಹರಿಕೋಟಾ ಕೇಂದ್ರದಿಂದ 1,600 ಕಿ.ಮೀ. ದೂರ ಸಮುದ್ರದಲ್ಲಿ ಬೀಳುವ ಅಂತರಿಕ್ಷ ನೌಕೆಯನ್ನು ಭಾರತೀಯ ನೌಕಾಪಡೆ ಇಸ್ರೊಗೆ ಮುಟ್ಟಿಸಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.