ADVERTISEMENT

‘ದೇವದಾಸಿ ಪದ್ಧತಿ ತಡೆಗೆ ಕ್ರಮ ಕೈಗೊಳ್ಳಿ’

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2016, 19:30 IST
Last Updated 12 ಫೆಬ್ರುವರಿ 2016, 19:30 IST
‘ದೇವದಾಸಿ ಪದ್ಧತಿ ತಡೆಗೆ ಕ್ರಮ ಕೈಗೊಳ್ಳಿ’
‘ದೇವದಾಸಿ ಪದ್ಧತಿ ತಡೆಗೆ ಕ್ರಮ ಕೈಗೊಳ್ಳಿ’   

‌ನವದೆಹಲಿ (ಪಿಟಿಐ): ‘ಅನಾಗರಿಕ ಆಚರಣೆ ಎನಿಸಿರುವ ದೇವದಾಸಿ ಪದ್ಧತಿಯನ್ನು ಸಂಪೂರ್ಣವಾಗಿ ತೊಡೆದು ಹಾಕಬೇಕೆಂಬ ಕೇಂದ್ರ ಸರ್ಕಾರದ ಸೂಚನೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ’ ಎಂದು ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ಇತರ ರಾಜ್ಯಗಳಿಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ನಿರ್ದೇಶಿಸಿದೆ.

ಸರ್ಕಾರೇತರ ಸಂಸ್ಥೆ ಎಸ್‌.ಎಲ್‌. ಫೌಂಡೇಷನ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಎಫ್‌.ಎಂ.ಐ ಖಲೀಫುಲ್ಲಾ ಮತ್ತು ಎಸ್‌.ಎ ಬೊಬ್ಡೆ ಅವರಿದ್ದ ಪೀಠ ಹೀಗೆ ಹೇಳಿದೆ.

‘ಅಮಾಯಕ ಹೆಣ್ಣುಮಕ್ಕಳು ದೇವದಾಸಿ ಪದ್ಧತಿಗೆ ಬಲಿಪಶುಗಳಾಗುತ್ತಿದ್ದಾರೆ. ಇದನ್ನು ತಡೆಗಟ್ಟುವಂತೆ ಕೇಂದ್ರ ಸರ್ಕಾರವು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿತ್ತು. ಈ ನಿರ್ದೇಶನಗಳನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಪೀಠ ತಿಳಿಸಿತು.

ಹೆಣ್ಣುಮಕ್ಕಳನ್ನು ದೇವದಾಸಿ ಪದ್ಧತಿಗೆ ತಳ್ಳುವ ಘಟನೆ ನಡೆದರೆ ಆಯಾ ರಾಜ್ಯ ಸರ್ಕಾರದ ಗಮನಕ್ಕೆ ತರಬಹುದು ಎಂದು ಎಸ್‌.ಎಲ್‌. ಫೌಂಡೇಷನ್‌ ಅನ್ನು ಪ್ರತಿನಿಧಿಸುತ್ತಿರುವ ವಕೀಲ ವಿ.ಕೆ. ಬಿಜು ಅವರಿಗೆ ಪೀಠ ಹೇಳಿತು.

ದೇವದಾಸಿ ಪದ್ಧತಿ ತಡೆಗೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಸುಪ್ರೀಂ ಕೋರ್ಟ್‌ 2014ರ ಫೆಬ್ರುವರಿ ತಿಂಗಳಲ್ಲಿ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಆದೇಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.