ADVERTISEMENT

‘ಪ್ರತಿಭಟನಾ ಚುಂಬನ’ಕ್ಕೆ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2014, 19:45 IST
Last Updated 29 ಅಕ್ಟೋಬರ್ 2014, 19:45 IST

ಕೊಚ್ಚಿ (ಪಿಟಿಐ): ನೈತಿಕ ಪೊಲೀಸ್‌ಗಿರಿ ಪ್ರತಿಭಟಿಸಿ ಇಲ್ಲಿನ ಮರೀನ್‌ ಡ್ರೈವ್‌ನಲ್ಲಿ ನವೆಂಬರ್‌ 2ರಂದು ಹಮ್ಮಿಕೊಳ್ಳಲಾ­ಗಿ­ರುವ ‘ಕಿಸ್‌ ಆಫ್‌ ಲವ್‌’ ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಆರೋಪಿಸಿ ಭಾರತೀಯ ಜನತಾ ಯುವ ಮೋರ್ಚಾದ ಕಾರ್ಯ­ಕರ್ತರು ಕೋಯಿಕ್ಕೋಡ್‌ನ ಹೋಟೆಲೊಂದರ ಮೇಲೆ ಕಳೆದ ವಾರ ದಾಳಿ ನಡೆಸಿದ್ದರು. ಅದನ್ನು ಪ್ರತಿಭಟಿಸಿ ಸಾಮಾಜಿಕ ಜಾಲತಾಣ ಬಳಕೆದಾರರ ಗುಂಪು ಈ ಪ್ರತಿಭಟನೆಯನ್ನು ಆಯೋಜಿಸಿದೆ.

ಕಿರು ಚಿತ್ರ ನಿರ್ದೇಶಕ ರಾಹುಲ್‌ ಪಶುಪಾಲನ್‌ ನೇತೃತ್ವದ ‘ಫ್ರೀ ಥಿಂಕರ್ಸ್‌’ ಎಂಬ ಹೆಸರಿನ ಗುಂಪು ‘ಕಿಸ್‌ ಆಫ್‌ ಲವ್‌’ ಪ್ರತಿಭಟನೆಗೆ ಕರೆ ನೀಡಿದೆ. ಯುವ ಮತ್ತು ಹಿರಿಯ ಜೋಡಿ­ಗಳು ಸಂಜೆ ಮರೀನ್‌ ಡ್ರೈವ್‌ಗೆ ಬಂದು ಪರಸ್ಪರ ಅಪ್ಪಿಕೊಳ್ಳುವುದು ಮತ್ತು ಚುಂಬಿಸುವ ಮೂಲಕ ಪ್ರತಿಭಟನೆ ನಡೆಸುವುದು ಉದ್ದೇಶವಾಗಿತ್ತು. ಈ ಕಾರ್ಯಕ್ರಮಕ್ಕೆ ಅನುಮತಿ ನೀಡದಿರಲು ನಿರ್ಧರಿಸ­ಲಾಗಿದೆ ಎಂದು ಪೊಲೀಸ್‌ ಉಪ ಆಯುಕ್ತೆ (ಕಾನೂನು ಮತ್ತು ಸುವ್ಯವಸ್ಥೆ) ಆರ್‌. ನಿಷಾಂತಿನಿ ತಿಳಿಸಿದ್ದಾರೆ. 

ಪ್ರತಿಭಟನೆಗೆ ಅನುಮತಿ ನೀಡು­ವಂತೆ ಮಂಗಳವಾರ ಪೊಲೀ­­­ಸರಿಗೆ ಲಿಖಿತ ಅರ್ಜಿ ನೀಡ­ಲಾಗಿದೆ. ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ರಾಹುಲ್‌ ತಿಳಿಸಿದ್ದಾರೆ.  ಹಾಗಾಗಿ ಪ್ರತಿಭಟನೆ ನಡೆಸಲಾಗುವುದು. ಅನುಮತಿ ನಿರಾಕರಿಸಲಾಗಿದೆ ಎಂಬ ಮಾಹಿತಿ ತಮಗೆ ದೊರೆತಿಲ್ಲ ಎಂದು ಅವರು ಹೇಳಿದ್ದಾರೆ. ಫೇಸ್‌ಬುಕ್‌ನಲ್ಲಿ ನೀಡಿದ ಪ್ರತಿಭಟನೆ ಕರೆಗೆ 20 ಸಾವಿರ ಲೈಕ್‌ಗಳು ದೊರೆತಿವೆ.

ಕನಿಷ್ಠ 200 ಮಂದಿ ಪ್ರತಿಭಟನೆಗೆ ಬರುವ ನಿರೀಕ್ಷೆ ಇದೆ ಎಂದು ರಾಹುಲ್‌ ಹೇಳಿದ್ದಾರೆ. ಬುಧವಾರವೂ ಮರೀನ್‌ ಡ್ರೈವ್‌­ನಲ್ಲಿ ಕೆಲವು ಜನರು ‘ಪ್ರೀತಿಯ ಸ್ವಾತಂತ್ರ್ಯ’ ಎಂಬ ಫಲಕ ಹಿಡಿದು ಪ್ರತಿಭಟನೆಗೆ ಮುಂದಾದರು. ಆದರೆ ಅಲ್ಲಿ ಬಂದ ಕೆಲವರು ಈ ಫಲಕಗಳನ್ನು ಹರಿದು ಇಂತಹ ಯಾವುದೇ ಪ್ರತಿಭಟನೆಗೆ ಅವಕಾಶ ನೀಡುವುದಿಲ್ಲ ಎಂದರು. ಇಂತಹ ಕಾರ್ಯಕ್ರಮ ನಡೆಯದಂತೆ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗುವುದು ಎಂದು ವಿಶ್ವ ಹಿಂದೂ ಪರಿಷತ್‌ ರಾಜ್ಯ ಘಟಕ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.