ADVERTISEMENT

‘ಭ್ರಷ್ಟಾಚಾರ ನಿಗ್ರಹಕ್ಕೆ ಸಮಿತಿ ಅಗತ್ಯ’

​ಪ್ರಜಾವಾಣಿ ವಾರ್ತೆ
Published 25 ಮೇ 2014, 19:30 IST
Last Updated 25 ಮೇ 2014, 19:30 IST

ನವದೆಹಲಿ(ಪಿಟಿಐ): ಸರ್ಕಾರದ ವ್ಯವ­ಸ್ಥೆ­ಯಲ್ಲಿ ಇರುವ ವ್ಯಾಪಕ ಭ್ರಷ್ಟಾಚಾರ ನಿಗ್ರಹಿಸುವ ನಿಟ್ಟಿನಲ್ಲಿ ಉನ್ನತ ಮಟ್ಟದ ಸಮಿತಿ ರಚಿಸುವ ಅಗತ್ಯ ಇದೆ ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್‌ ಸಿಂಗ್‌ ಅಹ್ಲುವಾಲಿಯ ಸಲಹೆ ಮಾಡಿದ್ದಾರೆ.

‘ಗಣ್ಯ ನ್ಯಾಯಮೂರ್ತಿಗಳು, ಹಿಂದಿನ ಸಂಪುಟ ಕಾರ್ಯದರ್ಶಿಗಳು,  ಕೇಂದ್ರೀಯ ಜಾಗೃತಿ ಸಮಿತಿ (ಸಿವಿಸಿ) ಪ್ರಮುಖರು ಮತ್ತು ಸಿಬಿಐ ಮುಖ್ಯಸ್ಥರು ಸೇರಿದಂತೆ ಉನ್ನತ ಸಮಿತಿ ರಚನೆ ಆಗಬೇಕು. ಈಗಿನ ಆರ್ಥಿಕ ವ್ಯವಸ್ಥೆಯ ರಚನೆಯನ್ನು ಅಧ್ಯಯನ ಮಾಡಿ ಭ್ರಷ್ಟಾಚಾರ ನಿಗ್ರಹಿಸಲು ಈ ಸಮಿತಿ ಸಲಹೆ ನೀಡಬೇಕು ಎಂದು ಅವರು ಉಸ್ತುವಾರಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರಿಗೆ  ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

‘ಸದ್ಯದ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಲ್ಲಿ ಭ್ರಷ್ಟಾ­ಚಾರ ತಡೆ­ಗ­ಟ್ಟಲು ಯತ್ನಿಸುವ ಅಧಿ­ಕಾರಿ­ಗಳಿಗೆ ಕಿರು­ಕುಳ ಕೊಡಲು ಅವಕಾಶ­ವಿರುವ  ಅಂಶ­ಗಳಿವೆ’ ಎಂದು ಅಹ್ಲುವಾಲಿಯ ಪ್ರಧಾ­ನಿಗೆ ಬರೆದ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

‘ನಾವು ಅನೇಕ ವರ್ಷಗಳಲ್ಲಿ ರೈಲ್ವೆ, ಬಂದರು, ಜಾಗತಿಕ ದರದೊಂದಿಗೆ ನಮ್ಮ ದೇಶದ ಇಂಧನ ದರದ ಹೊಂದಾ­ಣಿಕೆ, ಕಾರ್ಮಿಕ ಕಾನೂನಿನ ಸಡಿಲಿಕೆ, ಸಾರ್ವಜನಿಕ ವಲಯದ ಘಟ­ಕಗಳ ಕಾರ್ಯನಿರ್ವಹಣೆಯ ಸ್ವಾಯ­ತ್ತತೆ ಮುಂತಾದ ವಿಷಯ­ಗ­ಳಲ್ಲಿ  ದೊಡ್ಡಮಟ್ಟದ ಸುಧಾರಣೆ ತರಲು ಸಾಧ್ಯವಾಗಿಲ್ಲ’ ಎಂದು ಅಹ್ಲು­ವಾಲಿಯ ಪತ್ರದಲ್ಲಿ ಒಪ್ಪಿಕೊಂಡಿದ್ದಾರೆ.

ಮಾರುಕಟ್ಟೆ ಆಧಾರಿತ ಆರ್ಥಿಕತೆ ಜಾರಿಯಲ್ಲಿರುವಾಗ,  ರಾಷ್ಟ್ರೀಯ ಅಭಿ­ವೃದ್ಧಿ ಮಂಡಳಿಯ ಸಭೆಗಳಲ್ಲಿ ಯೋಜನಾ ಆಯೋಗ  ಸ್ಪಷ್ಟವಾಗಿ ತನ್ನ ವಿಚಾರ ವ್ಯಕ್ತಪಡಿಸಬೇಕು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.