ADVERTISEMENT

‘ಮೂವರು ತಪ್ಪಿತಸ್ಥರಿಗೆ’ ಬುದ್ಧಿಕಲಿಸಿ: ಮೋದಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2014, 11:04 IST
Last Updated 13 ಡಿಸೆಂಬರ್ 2014, 11:04 IST

ಕಥುವಾ, ಜಮ್ಮು ಮತ್ತು ಕಾಶ್ಮೀರ (ಪಿಟಿಐ): ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆ ಅಖಾಡ ರಂಗು ಪಡೆದಿದೆ. ಕಾಂಗ್ರೆಸ್‌, ನ್ಯಾಷನಲ್‌ ಕಾನ್ಫೆರೆನ್ಸ್‌ ಹಾಗೂ ಪಿಡಿಪಿ ವಿರುದ್ಧ ಶನಿವಾರ ಹರಿಹಾಯ್ದಿರುವ ಪ್ರಧಾನಿ ನರೇಂದ್ರ ಮೋದಿ ಅವರು, ರಾಜ್ಯದಲ್ಲಿ ಬಿಜೆಪಿ ಪಕ್ಷವು ಪರ್ಯಾಯ ಎಂದು ಚಿತ್ರಿಸಿದ್ದಾರೆ.

ರಾಜ್ಯದಲ್ಲಿರುವ ಸಮಸ್ಯೆಗಳಿಗೆ ಕಾಂಗ್ರೆಸ್‌, ನ್ಯಾಷನಲ್‌ ಕಾನ್ಫೆರೆನ್ಸ್‌ ಹಾಗೂ ಪಿಡಿಪಿ  ಟೀಕಿಸಿದ ಪ್ರಧಾನಿ,  ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಎಲ್ಲಾ ‘ಮೂರು ದೋಷಿಗಳನ್ನು’ ಶಿಕ್ಷಿಸುವಂತೆ ಜನತೆಗೆ ಕರೆ ನೀಡಿದರು.

ಚುನಾವಣಾ ಪ್ರಚಾರ ಸಭೆಯುದ್ದೇಶಿಸಿ ಮಾತನಾಡಿದ ಅವರು, ‘ನೀವು ಅವರಿಗೆ ಒಂದು ಬಾರಿಗೆ ಬುದ್ಧಿ ಕಲಿಸಿ. ಅವರು ತಮ್ಮ ತಪ್ಪುಗಳನ್ನು ಅರಿಯುತ್ತಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ಎಂದಾದರೂ ಸರ್ಕಾರ ರಚಿಸಿದೆಯೇ?  ನಾವು ಯಾವತ್ತಾದರೂ ಯಾವುದಾದರೂ ತಪ್ಪು ಎಸೆಗಿದ್ದೇವೆ? ಮೊದಲ, ಎರಡನೇ ಹಾಗೂ ಮೂರನೇ  ದೋಷಿಗಳು ಯಾರೆಂದು ನಿಮಗೆ ತಿಳಿದಿಲ್ಲವೇ?’ ಎಂದು ನೆರೆದಿದ್ದ ಜನರನ್ನು ಪ್ರಶ್ನಿಸಿದರು.

ಮೂವರು ದೋಷಿಗಳು ಯಾರು ಎಂಬುದು ರಾಜ್ಯದ ಜನತೆಗೆ ಗೊತ್ತಿದೆ ಎಂದ ಪ್ರಧಾನಿ, ಮತದಾರರು ಶಿಕ್ಷಿಸುವವರೆಗೂ  ಅವರು ತಮ್ಮ ದಾರಿಗಳನ್ನು ಬದಲಿಸುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ರಾಜ್ಯದಲ್ಲಿ ಒಂದು ಸರ್ಕಾರ ರಚನೆಯಾದರೆ – ಅದು ಪಿಡಿಪಿ ಅಥವಾ ಎನ್‌ಸಿ ಯಾವುದಾದರೂ ಇರಲಿ, ಕಾಂಗ್ರೆಸ್‌ ಅದರಲ್ಲಿ ಸೇರಿಕೊಳ್ಳುತ್ತದೆ. ಚುನಾವಣೆ ಸಮೀಪಿಸುತ್ತಿದ್ದಂತೆಯೇ ಅದು ಹೊರ ಬರುತ್ತದೆ’ ಎಂದು ಅವರು ಜರಿದರು.

‘ವಂಶಪಾರಂಪರಿಕ ಅಧಿಕಾರ ಹಾಗೂ ಸ್ವಜನಪಕ್ಷಪಾತ’ದ ವಿರುದ್ಧ ಗುಡುಗುವ ಮೂಲಕ ಮೋದಿ ಅವರು, ಎನ್‌ಸಿ ಹಾಗೂ ಪಿಡಿಪಿಯನ್ನು ಟೀಕಿಸಿದರು.

‘ರಾಜ್ಯದಲ್ಲಿ ಅಪ್ಪ–ಮಗ ಮತ್ತು ಅಪ್ಪ –ಮಗಳು ಮಾತ್ರವೇ ಸರ್ಕಾರವನ್ನು ನಡೆಸುತ್ತಾರೆಯೇ? ನೀವು ಯಾವಾಗಲೂ ಅವರ ಗೋಜಲಿನಲ್ಲಿ ಸಿಕ್ಕಿಹಾಕಿಕೊಳ್ಳಬೇಕೆ? ಇನ್ಮುಂದೆ ಅವರ ಆಟ ನಡೆಯದು. ನೀವು ಅಪ್ಪ–ಮಗ, ಅಪ್ಪ–ಮಗಳತ್ತ ನೋಡಬೇಡಿ. ನೀವು ನಿಮ್ಮ ಮಕ್ಕಳತ್ತ ನೋಡಿ’ ಎಂದು ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.