ADVERTISEMENT

‘ರಾಮಮಂದಿರ ನಿರ್ಮಿಸಿ’

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2014, 19:30 IST
Last Updated 23 ಅಕ್ಟೋಬರ್ 2014, 19:30 IST

ಅಲಹಾಬಾದ್‌ (ಪಿಟಿಐ): ಕೇಂದ್ರದಲ್ಲಿ ಬಿಜೆಪಿಗೆ ಬಹುಮತ ಇದೆ. ಆದ ಕಾರಣ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಭರವಸೆಯನ್ನು ಈಡೇರಿಸ­ಬೇಕು ಎಂದು ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಒತ್ತಾಯಿಸಿದೆ.

‘ಅಟಲ್‌ ಬಿಹಾರಿ ವಾಜಪೇಯಿ ಅವರ ನೇತೃತ್ವದ ಸರ್ಕಾರ ಇದ್ದಾಗ ಮಿತ್ರಪಕ್ಷಗಳನ್ನು ಸರಿದೂಗಿಸಿಕೊಂಡು ಹೋಗುವ ಸಂಕಷ್ಟ ಇತ್ತು. ಆದ್ದರಿಂದ ರಾಮಮಂದಿರ ನಿರ್ಮಾಣ ವಿಷಯ ನನೆಗುದಿಗೆ ಬಿದ್ದಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂತಹ ಸಂಕಷ್ಟ ಇಲ್ಲ. ಅವರ ಸರ್ಕಾರಕ್ಕೆ ಬೇರೆ ಪಕ್ಷಗಳು ಬೆಂಬಲ ನೀಡಿದ್ದರೂ ಬಿಜೆಪಿಗೆ ಲೋಕಸಭೆಯಲ್ಲಿ ಸ್ಪಷ್ಟ ಬಹುಮತ ಇದೆ. ಆದ್ದರಿಂದ ರಾಮಮಂದಿರ ನಿರ್ಮಾಣ ವಿಷಯದಲ್ಲಿ ವಿಳಂಬ ಸಲ್ಲ’ ಎಂದು ವಿಎಚ್‌ಪಿ ಅಧ್ಯಕ್ಷ ಅಶೋಕ್‌ ಸಿಂಘಾಲ್‌ ಸುದ್ದಿಗಾರರಿಗೆ ತಿಳಿಸಿದರು.

ರಾಜ್ಯಪಾಲರ ಸಮರ್ಥನೆ
ಮುಂಬೈ (ಪಿಟಿಐ):
ಉತ್ತರ ಪ್ರದೇಶದಲ್ಲಿನ ಕಾನೂನು ಸುವ್ಯವಸ್ಥೆ ಕುರಿತು ತಾವು ಬಿಡುಗಡೆ ಮಾಡಿರುವ ವರದಿ ಸಂವಿಧಾನ ಬದ್ಧವಾಗಿಯೇ ಇದೆ ಎಂದು ಆ ರಾಜ್ಯದ ರಾಜ್ಯಪಾಲ ರಾಂ ನಾಯ್ಕ್ ಹೇಳಿದ್ದಾರೆ.

ಜೊತೆಗೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್‌ ಭಾಗವತ್‌ ಅವರಿಗೆ ಔತಣ­ಕೂಟಕ್ಕೆ ನೀಡಿದ್ದ ಆಹ್ವಾನವನ್ನೂ ರಾಂ ನಾಯ್ಕ್ ಸಮರ್ಥಿಸಿ­ಕೊಂಡಿದ್ದಾರೆ.

‘ಹಿಂದಿನ ರಾಜ್ಯಪಾಲರು ರಾಜ್ಯ ಸರ್ಕಾ­ರದ ಆಡಳಿತವನ್ನು ಮೌಲ್ಯ­ಮಾಪನ ಮಾಡಿರಲಿಲ್ಲ. ನಾನು ಅಧಿ­ಕಾರ ವಹಿಸಿಕೊಂಡ ಮೂರೇ ತಿಂಗಳಲ್ಲಿ ಇಂತಹ ಕೆಲಸ ಮಾಡಿದ್ದೇನೆ ಮತ್ತು ಇದು ಸಂವಿಧಾನ ಬದ್ಧವಾಗಿಯೇ ಇದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನತೆ ಜತೆ ಸಂವಹನ ಅಗತ್ಯ. ಇದನ್ನು ಶ್ಲಾಘಿಸು­ವುದನ್ನು ಬಿಟ್ಟು, ಟೀಕಿಸಲಾಗುತ್ತದೆ’ ಎಂದು ಅವರು ಸುದ್ದಿಗಾರರಿಗೆ ಗುರುವಾರ ಹೇಳಿದರು.

ಉತ್ತರ ಪ್ರದೇಶದಲ್ಲಿನ ಕಾನೂನು ಸುವ್ಯವಸ್ಥೆ ಕುರಿತಂತೆ ರಾಂ ನಾಯ್ಕ್  ಸೋಮವಾರ ಬಿಡುಗಡೆ ಮಾಡಿದ ವರದಿ ವಿವಾದ ಎಬ್ಬಿಸಿತು. ರಾಜ್ಯ­ಪಾಲರ ಈ ನಡೆಯನ್ನು ಆಕ್ಷೇಪಿ­ಸಿದ ಸಮಾಜವಾದಿ ಪಕ್ಷ, ರಾಜ್ಯ­ಪಾ­ಲರು ಸಂವಿಧಾನದ ಮಿತಿಯೊಳಗೆ ಕಾರ್ಯ­ನಿರ್ವಹಿಸಬೇಕು ಎಂದು ಹೇಳಿತ್ತು.

ರಾಜ್ಯಗಳಿಗೆ ಹೆಚ್ಚಿನ ಅಧಿಕಾರ
ನವದೆಹಲಿ:
‘ಸ್ವಚ್ಛ ಭಾರತ ಅಭಿಯಾನ’  ಅನುಷ್ಠಾನಕ್ಕೆ ರಾಜ್ಯಗಳಿಗೆ ಹೆಚ್ಚಿನ ಅಧಿಕಾರ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಈ ಯೋಜನೆ ಅನುಷ್ಠಾನಕ್ಕೆ ‘ಕನಿಷ್ಠ ನಿಬಂಧನೆ’ಗಳಿರುವ ಮಾರ್ಗಸೂಚಿ ಹೊರಡಿಸಬೇಕು ಮತ್ತು  ಅಗತ್ಯಕ್ಕೆ ತಕ್ಕಂತೆ ಯೋಜನೆಯನ್ನು ಮಾರ್ಪ­ಡಿಸಿಕೊಳ್ಳಲು ರಾಜ್ಯ ಸರ್ಕಾರ­ಗಳಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಬೇಕು ಎಂದು ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯಕ್ಕೆ (ಎಂಡಿಡಬ್ಲುಎಸ್‌) ಸೂಚಿಲಾಗಿದೆ.

೨೦೧೯ರ ಅ.೨ರೊಳಗೆ ಈ ಯೋಜನೆ ಅಡಿಯಲ್ಲಿ ಗ್ರಾಮೀಣ ಪ್ರದೇಶಗಳ  ೧೧.೧೧ ಕೋಟಿ ಮನೆಗಳಲ್ಲಿ ಶೌಚಾಲಯ ಕಟ್ಟಿಸುವ ಗುರಿಯನ್ನು ಎಂಡಿಡಬ್ಲುಎಸ್‌ ಹೊಂದಿದೆ.

ಕಲಾಕ್ಷೇತ್ರಕ್ಕೆ ಗೋಪಾಲಸ್ವಾಮಿ
ನವದೆಹಲಿ: ಸಂಸ್ಕೃತಿ ಸಚಿವಾಲಯದ ಮಾಜಿ ಕಾರ್ಯದರ್ಶಿ ಮತ್ತು ಮಾಜಿ ಮುಖ್ಯ ಚುನಾವಣಾ ಆಯುಕ್ತ ಎನ್‌. ಗೋಪಾಲಸ್ವಾಮಿ ಅವರನ್ನು ಚೆನ್ನೈ ಮೂಲದ ಕಲಾಕ್ಷೇತ್ರ ಫೌಂಡೇಷನ್‌ನ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

1966ರ ಗುಜರಾತ್‌ ಕೇಡರ್‌ನ ಐಎಎಸ್‌ ಅಧಿಕಾರಿಯಾಗಿದ್ದ ಗೋಪಾಲ­ಸ್ವಾಮಿ ಅವರ ಅಧಿಕಾರಾವಧಿ ಐದು ವರ್ಷ. ಕಲಾಕ್ಷೇತ್ರ ಸಂಸ್ಥೆಯ ಅಧ್ಯಕ್ಷರಾಗಿದ್ದ ನಿವೃತ್ತ ಐಎಎಸ್‌ ಅಧಿಕಾರಿ ಗೋಪಾಲ­ಕೃಷ್ಣ ಗಾಂಧಿ ಅವರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಿದ ಬಳಿಕ ಮೇ 21ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ­ದ್ದರು. ಜೂನ್‌ 3ರಂದು ಸರ್ಕಾರ ಅವರ ರಾಜೀನಾಮೆಯನ್ನು ಅಂಗೀಕರಿಸಿತ್ತು. ಭಾರತೀಯ ಕಲೆ, ಮುಖ್ಯವಾಗಿ ಭರತನಾಟ್ಯ ನೃತ್ಯದಲ್ಲಿನ ಸಾಂಪ್ರದಾಯಿಕ ಮೌಲ್ಯಗಳನ್ನು ಉಳಿಸುವ ನಿಟ್ಟಿನಲ್ಲಿ ಕಲಾಕ್ಷೇತ್ರ ಸಂಸ್ಥೆ ತೊಡಗಿಸಿಕೊಂಡಿದೆ.

30 ಲಕ್ಷ ಕುಟುಂಬ ಸಂಕಷ್ಟಕ್ಕೆ
ಹೈದರಾಬಾದ್‌ (ಪಿಟಿಐ): ಹುದ್ ಹುದ್‌ ಚಂಡಮಾರುತದಿಂದಾಗಿ ಆಂಧ್ರ­ಪ್ರದೇಶದ ಕರಾವಳಿಯಲ್ಲಿನ ಸುಮಾರು 30 ಲಕ್ಷ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ರಾಜ್ಯ ಸರ್ಕಾರದ ವರದಿ ತಿಳಿಸಿದೆ.ವಿಶಾಖಪಟ್ಟಣ, ಶ್ರೀಕಾಕುಳಂ, ವಿಜಯನಗರ ಮತ್ತು ಪೂರ್ವ ಗೋದಾವರಿ ಜಿಲ್ಲೆಗಳು 30 ಲಕ್ಷಕ್ಕೂ ಅಧಿಕ ಕುಟುಂಬಗಳು ಚಂಡ­ಮಾರು­ತದ ಹಾವಳಿಯಿಂದ ಸಂತ್ರಸ್ತಗೊಂಡಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ವರದಿ ಹೇಳಿದೆ.

ಕದನ ವಿರಾಮ ಉಲ್ಲಂಘನೆ
ಜಮ್ಮು (ಪಿಟಿಐ):
ಪುನಃ ಎರಡು ಕದನ ವಿರಾಮ ಉಲ್ಲಂಘಿಸಿರುವ ಪಾಕಿಸ್ತಾನ ಪಡೆಗಳು ಗುರುವಾರ ಸಾಂಬಾದಲ್ಲಿನ  ಗಡಿ ಚೌಕಿಗಳು ಮತ್ತು ಜಮ್ಮು ಜಿಲ್ಲೆಯಲ್ಲಿ ಗುಂಡಿನ ದಾಳಿ ನಡೆಸಿವೆ.‘ಪಾಕ್‌ ಪಡೆಗಳು ತಡರಾತ್ರಿ 1 ರಿಂದ 4 ಗಂಟೆವರೆಗೆ ಸಾಂಬಾದ ರಾಮಗಡದ ಐಬಿ ಮತ್ತು ಕೆಲವು ಗಡಿ ಚೌಕಿಗಳು ಹಾಗೂ ಜಮ್ಮುವಿನ ಅರ್ನಿಯಾ ವಲಯಗಳ ಮೇಲೆ ಗುಂಡು ಹಾರಿಸಿದವು’ ಎಂದು ಬಿಎಸ್‌ಎಫ್‌ ವಕ್ತಾರರು ತಿಳಿಸಿದ್ದಾರೆ.

ಗಡಿ ಕಾವಲು ಕಾಯುತ್ತಿದ್ದ ಬಿಎಸ್‌ಎಫ್‌ ಸಿಬ್ಬಂದಿ ಪ್ರತಿದಾಳಿ ನಡೆಸಿದರು. ಗುಂಡಿನ ಚಕಮಕಿಯಲ್ಲಿ ಎರಡೂ ಕಡೆಗಳಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಅವರು ಹೇಳಿದ್ದಾರೆ.

ಸಾಮೂಹಿಕ ಅತ್ಯಾಚಾರ
ಮುಜಫ್ಫರ್‌ನಗರ (ಪಿಟಿಐ):
ವಿವಾಹಿತ ಮಹಿಳೆ ಮೇಲೆ ಮೂವರು ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಜನಕಪುರಿ ಎಂಬಲ್ಲಿ ಬುಧವಾರ ನಡೆದಿದೆ. ಆರೋಪಿಗಳಾದ ಮೊಮಿನ್‌, ಅಖಿಲ್‌ ಮತ್ತು ಗುಲ್ಫಾಮ್‌ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಮೂವರೂ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.