ADVERTISEMENT

‘ಲವ್‌ ಜಿಹಾದ್‌’ ನಂತರ ಮತಾಂತರ ಬಿರುಗಾಳಿ

ರಾಜ್ಯ ವಾರ್ತಾಪತ್ರ - ಉತ್ತರ ಪ್ರದೇಶ

ಸಂಜಯ ಪಾಂಡೆ
Published 21 ಡಿಸೆಂಬರ್ 2014, 19:30 IST
Last Updated 21 ಡಿಸೆಂಬರ್ 2014, 19:30 IST

ಲಖನೌ: ಲೋಕಸಭಾ ಚುನಾವಣೆ ವೇಳೆ  ‘ಲವ್‌ ಜಿಹಾದ್‌’ ಎಂಬ ಸುಂಟರಗಾಳಿಗೆ ಸಿಲುಕಿ ತತ್ತರಿಸಿದ್ದ ಉತ್ತರ ಪ್ರದೇಶದಲ್ಲಿ ಏಕಾಏಕಿ ಮತಾಂತರ ವಿವಾದ ಭುಗಿಲೆದ್ದಿದೆ.

ಕಳೆದ ಹಲವು ದಿನಗಳಿಂದ ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿನಿತ್ಯ ಪ್ರತಿಧ್ವನಿಸುತ್ತಿ­ರುವ ಈ ವಿವಾದ ದೇಶದಲ್ಲಿ ಹೊಸ ಚರ್ಚೆ ಹುಟ್ಟು ಹಾಕಿದೆ. ಸಂಘ ಪರಿವಾರ ‘ಘರ್‌ ವಾಪಸಿ’ ಹೆಸರಿ­ನಲ್ಲಿ ಹುಟ್ಟು ಹಾಕಿದ ಮರು ಮತಾಂ­ತರ  ಎಂಬ ಸಣ್ಣ  ಕಿಡಿ­ಯೊಂದು  ಬೆಂಕಿ­ಯಾಗಿ ಹೊತ್ತಿ­ಕೊಂಡು ಉರಿ­ಯುತ್ತಿದೆ. 

ಮರು ಮತಾಂತರ ಮೊದಲ ಕಿಡಿ ಹೊತ್ತಿಕೊಂಡಿದ್ದು ಪ್ರೀತಿ, ಪ್ರೇಮದ ಅಜರಾಮರ ಸಂಕೇತ­ವಾಗಿ ನಿಂತಿರುವ ಪ್ರೇಮಸೌಧ ‘ತಾಜ್‌­ಮಹಲ್‌’ ನೆಲದಲ್ಲಿ. ಆಗ್ರಾದಲ್ಲಿ ಕೆಲವು ದಿನಗಳ ಹಿಂದೆ ಸಂಘ ಪರಿವಾರ 50 ಕುಟುಂಬಗಳ 250 ಮುಸ್ಲಿಮ­ರನ್ನು ಸಾಮೂಹಿಕ­ವಾಗಿ ಹಿಂದೂ ಧರ್ಮಕ್ಕೆ ಮತಾಂತರ­ಗೊಳಿಸಿತು.

ಬಾಂಗ್ಲಾದೇಶದಿಂದ ವಲಸೆ ಬಂದು ಹಲವು ವರ್ಷಗಳಿಂದ ಇಲ್ಲಿಯ ಕೊಳೆ­ಗೇರಿಯಲ್ಲಿ ನೆಲೆಸಿ­ರುವ ಚಿಂದಿ ಆಯುವ ಬಡ ಮುಸ್ಲಿಮರ ಮತಾಂತರ ಮಾಧ್ಯ­ಮ­ಗಳಲ್ಲಿ ದೊಡ್ಡ ಸುದ್ದಿಯಾಯಿತು.

‘ಹಣ, ನಿವೇಶನ ಹಾಗೂ ಬಿಪಿಎಲ್‌ ಪಡಿತರ ಚೀಟಿ ನೀಡುವ ಆಮಿಷ ಒಡ್ಡಿ  ನಮ್ಮನ್ನು ಮತಾಂತರ ಮಾಡಲಾಗಿದೆ’ ಎಂದು ಮುಸ್ಲಿ­ಮರು ಮರು­ದಿನ ಆರೋಪಿಸಿ­ದಾಗ ಉರಿಯು­ತ್ತಿದ್ದ ಬೆಂಕಿಗೆ ತುಪ್ಪ ಸುರಿವಿದಂತಾ­ಯಿತು.

ತಿಲಕವಿಟ್ಟುಕೊಂಡ ಹಣೆಯಿಂದ ನಮಾಜ್: ಸಾಮೂಹಿಕ ಮತಾಂತರ ಕಾರ್ಯಕ್ರಮ­ದಲ್ಲಿ ಹಣೆಯ ಮೇಲೆ ತಿಲಕವಿಟ್ಟು­ಕೊಂಡು ಹೋಮ, ಹವನದಲ್ಲಿ ಭಾಗಿಯಾಗಿದ್ದ ಅದೇ ಜನ ಮರುದಿನ ಯಥಾ­ರೀತಿ ನಮಾಜ್‌ನಲ್ಲೂ ಪಾಲ್ಗೊಂಡಿದ್ದರು.

ಕಾರ್ಯಕ್ರಮ ಆಯೋಜಿಸಿದ ಆರ್‌ಎಸ್‌ಎಸ್‌ ಧರ್ಮ ಜಾಗರಣ ಮಂಚ್‌ ರಾಜ್ಯ ಅಧ್ಯಕ್ಷ   ನಂದಕಿಶೋರ್‌  ವಾಲ್ಮೀಕಿ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿದರೂ ಗಂಭೀರವಾಗಿ ತೆಗೆದುಕೊಳ್ಳದ ಸಂಘ ಪರಿವಾರದವರು ಮರು ಮತಾಂತರ  ಕಾರ್ಯಕ್ರಮ ಕೈಬಿಡುವುದಿಲ್ಲ ಎಂದು ಘೋಷಿಸಿದ್ದಾರೆ.

ಮತೀಯವಾಗಿ ಅತ್ಯಂತ ಸೂಕ್ಷ್ಮ ಪ್ರದೇಶ­ದವಾದ ಅಲೀಗಡದಲ್ಲೂ ಮುಂದಿನ ಸಾಮೂ­ಹಿಕ ಮತಾಂ­ತರ ಕಾರ್ಯಕ್ರಮ ನಡೆಸಲು ಸಂಘ ಪರಿವಾರದವರು ಭರದ ಸಿದ್ಧತೆ ನಡೆಸಿದ್ದಾರೆ. 

ದೇಶದಾದ್ಯಂತ ದೊಡ್ಡ ವಿವಾದ ಹುಟ್ಟು ಹಾಕಿದ ಮತಾಂತರ ಮತ್ತೊಮ್ಮೆ ಕೇಸರಿ ಪಡೆ ಹಾಗೂ ಮುಸ್ಲಿಮರನ್ನು  ಮುಖಾ­ಮುಖಿ­ಗೊಳಿಸಿದೆ.

ಮುಸ್ಲಿಮರಿಗೆ ಆಮಿಷ ಒಡ್ಡಿ ಮತಾಂ­ತರ­ಗೊಳಿಸಲಾ­ಗುತ್ತಿದೆ ಎಂದು ಆರೋಪಿ­ಸಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಧಾರ್ಮಿಕ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿ ಸುವಂತೆ ಒತ್ತಾಯಿಸಿದೆ.

ಸಾಮೂ­­ಹಿಕ ಮತಾಂತರಕ್ಕೆ ಕಡಿವಾಣ ಹಾಕುವಂತೆ ಮುಸ್ಲಿಮರ ಧರ್ಮ ಗುರುಗಳು ಹಾಗೂ ಮುಖಂಡರು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಅವರನ್ನು ಒತ್ತಾಯಿಸಿದ್ದಾರೆ.

‘ಮತಾಂತರ ಅಲ್ಲ, ಮರಳಿ ಮನೆಗೆ...’: ‘ಇದು ಮತಾಂತರ ಅಲ್ಲ, ‘ಘರ್‌ ವಾಪಸಿ’ ಹಿಂದೂ ಧರ್ಮದಿಂದ ಮತಾಂ­ತರಗೊಂಡವರನ್ನು ಮರಳಿ ಹಿಂದೂ ಧರ್ಮದ ತೆಕ್ಕೆಗೆ ತೆಗೆದು­ಕೊಳ್ಳುತ್ತಿ-­ದ್ದೇವೆ’ ಎಂದು ಸಂಘ ಪರಿ­ವಾರದ ಮುಖಂ­ಡರು, ಬಿಜೆಪಿ ಸಂಸದರು ಹಾಗೂ ಕೇಂದ್ರ ಸಚಿವರು ವಾದ ಮುಂದಿಟ್ಟಿದ್ದಾರೆ.

ದೇಶದ ಬಹುತೇಕ ಮುಸ್ಲಿಮರು ಹಿಂದೂ ಧರ್ಮದಿಂದ ಮತಾಂತರ­ಗೊಂಡ­­ವರು ಎನ್ನುವ ಮೂಲಕ ವಿಶ್ವ ಹಿಂದೂ ಪರಿಷತ್‌ ಮತಾಂತರ­ವನ್ನು ಸಮರ್ಥಿಸಿಕೊಂಡಿದೆ.

ಕಳೆದ 50 ವರ್ಷಗಳಿಂದಲೂ ದೇಶದಲ್ಲಿ ಮತಾಂತರ ನಡೆಯುತ್ತಿದೆ. 1966ರಲ್ಲಿ ಅಲಹಾ­ಬಾದ್‌ನಲ್ಲಿ ನಡೆದ ಕುಂಭಮೇಳದಲ್ಲಿ ‘ಘರ್ ವಾಪಸಿ’ ನಿರ್ಣಯವನ್ನು ತೆಗೆದು­ಕೊಳ್ಳಲಾಗಿತ್ತು ಎನ್ನುತ್ತಾರೆ ವಿಎಚ್‌ಪಿ ಮುಖಂಡರು.

‘ಇಲ್ಲಿಯ ಮುಸ್ಲಿಮರು ಮೂಲತಃ ಹಿಂದೂ­ಗಳು. ಅವರ ಪೂರ್ವಿ­ಕರು ಕಾರಣಾಂತರಗಳಿಂದ ಮುಸ್ಲಿಮ್  ಧರ್ಮಕ್ಕೆ ಮತಾಂತರ­ಗೊಂಡಿ­ದ್ದಾರೆ. ಹೀಗಾಗಿ ಮರಳಿ ಹಿಂದೂ ಧರ್ಮಕ್ಕೆ ಬನ್ನಿ ಎಂದು ಅವರನ್ನು ಆಹ್ವಾನಿಸು­ತ್ತೇವೆ’ ಎನ್ನುತ್ತಾರೆ ಸಂಘ ಪರಿವಾರದ ಮುಖಂಡರು.

ಸಂಸದ ಮಹಾಂತ ಆದಿತ್ಯನಾಥ್ ಅವರ ಹಿಂದೂ ಯುವ ವಾಹಿನಿ ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿ ಸಕ್ರಿಯ­ವಾಗಿದ್ದು ಸಾಮೂ­ಹಿಕ ಮತಾಂತರ ಕಾರ್ಯಕ್ರಮಗಳನ್ನು ಹಮ್ಮಿ­ಕೊಳ್ಳು­ತ್ತಿದೆ. ಮುಂದಿನ ದಿನಗಳಲ್ಲಿ ಗೋರಖ್‌­ಪುರ ಹಾಗೂ ಗಾಜಿಪುರದಲ್ಲಿ ಸಾಮೂಹಿಕ ಮತಾಂತರ ಕಾರ್ಯಕ್ರಮ ಹಮ್ಮಿಕೊಳ್ಳುವು­ದಾಗಿ ಪ್ರಕಟಿಸಿದೆ.

ಮತದಾರರ ಧ್ರುವೀಕರಣ:  2017ರಲ್ಲಿ ನಡೆಯುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ­ಯಲ್ಲಿ ಮತಾಂತರ  ವಿವಾದವೇ ಬಿಜೆ­ಪಿಯ ಪ್ರಮುಖ ವಿಷಯ­ವಾಗಲಿದೆ.  ಧರ್ಮದ ಆಧಾರದಲ್ಲಿ ಜನರನ್ನು ಒಡೆದು ಮತದಾರರನ್ನು ಧ್ರವೀಕರಣ ಮಾಡುವ ತಂತ್ರಗಾರಿಕೆ ಇದರ ಹಿಂದಿದೆ ಎನ್ನುತ್ತಾರೆ ಲಖನೌ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ದಿನೇಶ್‌ ಕುಮಾರ್‌ .

ಈಗಾಗಲೇ ಈ ವಾಸನೆ ಹಿಡಿದಿರುವ ಮುಸ್ಲಿ­ಮರ ಧಾರ್ಮಿಕ ಸಂಘಟನೆಗಳು, ಸಂಘ ಪರಿ­ವಾರದ ಯತ್ನಗಳನ್ನು ಹತ್ತಿ­ಕ್ಕುವಂತೆ ಒತ್ತಾಯಿ­ಸಿವೆ. ಸಮಾ­ಜದ ಸ್ವಾಸ್ಥ್ಯ ಹಾಗೂ ಕೋಮು ಸಾಮ­ರಸ್ಯ ಕದಡುವ  ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿವೆ.

‘ಬಿಜೆಪಿ ತನ್ನ ರಾಜಕೀಯ ಲಾಭಕ್ಕಾಗಿ ರಾಜ್ಯದ ಕೋಮು ಸೌಹಾರ್ದವನ್ನು ಕದಡಲು ಹೊರಟಿದೆ. ಧರ್ಮದ ಆಧಾ­ರದ ಮೇಲೆ  ಸಮಾಜವನ್ನು ಒಡೆ­ಯು­ಲು ಮುಂದಾಗಿದೆ’ ಎಂದು ಸಮಾಜ­ವಾದಿ ಪಕ್ಷದ ಮುಖಂಡರು ಆಪಾದಿಸಿ­ದ್ದಾರೆ.

ಬಿಜೆಪಿ ಕೈಗೆ ಮತಾಂತರ ಅಸ್ತ್ರ: ಮತಾಂತರ ಎಂಬ ವಿವಾದಿತ ಅಸ್ತ್ರ ಬಿಜೆಪಿ ಕೈಗೆ ದೊರೆತಿದೆ. ಹೀಗಾಗಿ ಈ ವಿವಾದ ಇಲ್ಲಿಗೆ ನಿಲ್ಲುವಂತೆ ಕಾಣು­ತ್ತಿಲ್ಲ. ಬಿಜೆಪಿ  ಸಾಧ್ಯ­ವಾದಷ್ಟು ವಿವಾದ­ವನ್ನು  ಜೀವಂತವಾಗಿಡಲು ಬಯ­ಸು­ತ್ತದೆ. ಅದು ಜೀವಂತವಾಗಿದ್ದಷ್ಟು ಬಿಜೆ­ಪಿಗೆ ಲಾಭ. ಇದರಿಂದಾಗಿಯೇ ಬಿಜೆಪಿ ತನ್ನ ಶಾಸಕರು ಮತ್ತು ಸಂಸದರಿಗೆ ಮತಾಂತರ ಕಾರ್ಯಕ್ರಮ­ಗಳಲ್ಲಿ ಭಾಗ­ವಹಿಸದಂತೆ ತಡೆಯುತ್ತಿಲ್ಲ.

‘ಈ ಕಾರ್ಯಕ್ರಮಗಳಿಂದ ನಮಗೆ ಆಗು­ವಂತದು ಏನೂ ಇಲ್ಲ. ಸಂಸದರು ಅಥವಾ ಇತರ ನಾಯಕರು ತಮ್ಮ ಸ್ವಂತ ಬಲದ ಮೇಲೆ ಈ ಕಾರ್ಯಕ್ರಮಗಳನ್ನು  ಆಯೋಜಿಸುತ್ತಿದ್ದಾರೆ’ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಲಕ್ಷ್ಮೀಕಾಂತ ವಾಜಪೇಯಿ ಹೇಳಿದ್ದಾರೆ.

ಮುಂಬರುವ ಚುನಾವಣೆಯಲ್ಲಿ ಮತಾಂ­ತರ ವಿವಾದವನ್ನೇ   ಚುನಾ­ವಣೆಯ ಪ್ರಮುಖ ವಿಷಯವನ್ನಾಗಿ ಮಾಡುವ ತಂತ್ರವನ್ನು ಬಿಜೆಪಿ ರೂಪಿಸಿದ್ದು, ಇದುವೇ ರಾಜ್ಯ ರಾಜಕೀಯ ಭವಿಷ್ಯ­ವನ್ನು ನಿರ್ಧರಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.