ADVERTISEMENT

ಬಿಹಾರ ಫಲಿತಾಂಶ: ಜೆಡಿಯು ಮೈತ್ರಿಕೂಟ178, ಎನ್‌ಡಿಎ58, ಇತರರು07

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2015, 16:15 IST
Last Updated 8 ನವೆಂಬರ್ 2015, 16:15 IST

ಪಟ್ನಾ (ಪಿಟಿಐ/ಐಎಎನ್‌ಎಸ್‌): ತೀವ್ರ ಕುತೂಹಲ ಕೆರಳಿಸಿ, ದೇಶದ ಗಮನ ಸೆಳೆದಿದ್ದ ಬಿಹಾರ ವಿಧಾನಸಭೆ ಫಲಿತಾಂಶ ಭಾನುವಾರ ಪ್ರಕಟಗೊಂಡಿದೆ. ತುರುಸಿನ ಸ್ಪರ್ಧೆ ಕಂಡಿದ್ದ ಚುನಾವಣೆಯಲ್ಲಿ ಜೆಡಿಯು ನೇತೃತ್ವದ ಮಹಾಮೈತ್ರಿಕೂಟ ಅಭೂತಪೂರ್ವ ಗೆಲುವು ಕಂಡಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಕೂಟ ಸೋತಿದೆ.

ಜ್ಯಾತ್ಯತೀತ ಜನತಾ ದಳ(ಜೆಡಿಯು), ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಹಾಗೂ ಕಾಂಗ್ರೆಸ್‌ ಪಕ್ಷಗಳನ್ನೊಳಗೊಂಡ ಮಹಾಮೈತ್ರಿಕೂಟ ಒಟ್ಟು 178 ಸ್ಥಾನಗಳನ್ನು ಪಡೆದಿದೆ. 243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಸರ್ಕಾರ ರಚನೆಗೆ 122 ಸ್ಥಾನಗಳ ಅಗತ್ಯವಿದೆ.

ಇನ್ನು, ಬಿಜೆಪಿ, ಎಲ್‌ಜೆಪಿ, ಎಚ್‌ಎಎಂ ಹಾಗೂ ಆರ್‌ಎಲ್‌ಎಸ್‌ಪಿ ಪಕ್ಷಗಳನ್ನು ಒಳಗೊಂಡ ಎನ್‌ಡಿಎ ಕೂಟದ ಅಭ್ಯರ್ಥಿಗಳು 58 ಕ್ಷೇತ್ರಗಳಲ್ಲಿ ಜಯಿಸಿದ್ದಾರೆ.

ADVERTISEMENT

ಸಿಪಿಐಎಂ ಸೇರಿದಂತೆ ಇತರರ ಪಕ್ಷಗಳು ಹಾಗೂ ಪಕ್ಷೇತರರ ಅಭ್ಯರ್ಥಿಗಳು ಒಟ್ಟು ಏಳು ಸ್ಥಾನಗಳಲ್ಲಿ ಗೆಲುವು ಕಂಡಿದ್ದಾರೆ.

ಇನ್ನು, ಜೆಡಿಯು ಕೂಟದ ಪೈಕಿ ಆರ್‌ಜೆಡಿ 80 ಸ್ಥಾನಗಳನ್ನು ಗೆದ್ದಿದೆ. ನಿತೀಶ್ ಕುಮಾರ್ ಅವರ ಜೆಡಿಯು ಅಭ್ಯರ್ಥಿಗಳು 71 ಕ್ಷೇತ್ರಗಳಲ್ಲಿ ಜಯಿಸಿದ್ದಾರೆ. ಕಾಂಗ್ರೆಸ್‌ 27 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ.

ಅದೇ ರೀತಿ ಎನ್‌ಡಿಎ ಕೂಟದ ಪೈಕಿ ಬಿಜೆಪಿ 53 ಸ್ಥಾನಗಳಲ್ಲಿ ಜಯಿಸಿದೆ. ಎಲ್‌ಜೆಪಿ ಹಾಗೂ ಆರ್‌ಎಲ್‌ಎಸ್‌ಪಿ ಪಕ್ಷಗಳು ತಲಾ ಎರಡು ಕ್ಷೇತ್ರಗಳಲ್ಲಿ ಗೆಲುವು ಕಂಡಿವೆ. ನಿರೀಕ್ಷೆ ಮೂಡಿಸಿದ್ದ ಹಿಂದೂಸ್ತಾನ ಅವಾಮಿ ಮೋರ್ಚಾ ಪಕ್ಷವು ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾಗಿದೆ.

ಇತರರು ಏಳು ಮಂದಿ ಗೆಲುವು ಕಂಡಿದ್ದಾರೆ. ಈ ಪೈಕಿ ಸಿಪಿಐ (ಎಂಎಲ್) (ಎಲ್) ಪಕ್ಷ ಮೂರು ಕ್ಷೇತ್ರಗಳಲ್ಲಿ ಜಯಿಸಿದೆ. ನಾಲ್ವರು ಪಕ್ಷೇತರರು ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.