ADVERTISEMENT

‘ಶಿವಸೇನಾದೊಂದಿಗೆ ‘ಬಾಂಧವ್ಯ’ದ ಭರವಸೆ’

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2014, 11:12 IST
Last Updated 22 ನವೆಂಬರ್ 2014, 11:12 IST

ನವದೆಹಲಿ (ಪಿಟಿಐ): ಶಿವಸೇನಾ ಪಕ್ಷದ ಜೊತೆಗೆ ಶೀಘ್ರವೇ ಹೊಂದಾಣಿಕೆ ಏರ್ಪಡಲಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ಶನಿವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಲ್ಲದೇ, ಎನ್‌ಸಿಪಿ ನೀಡಿರುವ ಷರತ್ತು ರಹಿತ ಬಾಹ್ಯ ಬೆಂಬಲವನ್ನು ತಮ್ಮ ಪಕ್ಷವು ಸ್ವೀಕರಿಸಿಯೂ ಇಲ್ಲ, ನಿರಾಕರಿಸಿಯೂ ಇಲ್ಲ ಎಂದಿದ್ದಾರೆ.

ವಿಶ್ವಾಸಮತ ಯಾಚನೆಯ ವೇಳೆ ಎನ್‌ಸಿಪಿ ಬೆಂಬಲ ಪಡೆದುದ್ದಕ್ಕಾಗಿ ತೀವ್ರ ಟೀಕೆ ಎದುರಿಸುತ್ತಿರುವ ಫಡಣವೀಸ್‌ ಅವರು, ವಿಶ್ವಾಸಮತ ಯಾಚನೆಯ ಬಳಿಕದ ಮೂರು ದಿನಗಳಲ್ಲಿ ಎದುರಿಸಿದಷ್ಟು ಟೀಕೆಯನ್ನು ತಮ್ಮ  22 ವರ್ಷಗಳ ರಾಜಕೀಯ ಜೀವನದಲ್ಲಿಯೇ ಎದುರಿಸಿರಲಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ADVERTISEMENT

ಇಲ್ಲಿ ನಡೆದ ಹಿಂದೂಸ್ತಾನ್ ಟೈಮ್ಸ್‌ ನಾಯಕತ್ವ ಸಮಾವೇಶದಲ್ಲಿ ಮಾತನಾಡಿದ ಅವರು, ‘ಶಿವಸೇನಾ ಯಾವಾಗಲೂ ಮಿತ್ರಪಕ್ಷ ಎನಿಸಿದೆ. ಭವಿಷ್ಯದಲ್ಲೂ ನಾವು ಸ್ನೇಹಿತರಾಗಿರುತ್ತೇವೆ ಎಂಬುದು ನನ್ನ ನಂಬಿಕೆ ಮತ್ತು ಭರವಸೆ’ ಎಂದು ನುಡಿದರು.

ಇದೇ ವೇಳೆ, ಎರಡೂ ಪಕ್ಷಗಳ ನಡುವೆ  ಆರ್‌ಎಸ್‌ಎಸ್‌ ಮಧ್ಯಸ್ಥಿಕೆ ವಹಿಸುತ್ತಿದೆ ಎಂಬುದನ್ನು ಫಡಣವೀಸ್ ಅವರು ಅಲ್ಲಗಳೆದರು.

‘ಆರ್‌ಎಸ್‌ಎಸ್‌ ಎಂದಿಗೂ ಮಧ್ಯಸ್ಥಿಕೆ ವಹಿಸಲ್ಲ. ಅದು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಅದೊಂದು ಶಕ್ತಿಕೇಂದ್ರ. ಉಭಯ ಪಕ್ಷಗಳು ಕಳೆದ 25 ವರ್ಷಗಳಿಂದ ಪರಸ್ಪರ ಬಲ್ಲವು. ನಾವು ಪರಸ್ಪರ ಮಾತುಕತೆ ನಡೆಸುತ್ತೇವೆ’ ಎಂದೂ ಅವರು ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.