ADVERTISEMENT

‘ಶಿವಸೇನಾ ಜತೆ ಸೀಟು ಹಂಚಿಕೆ ಬೇಡ’

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2014, 19:30 IST
Last Updated 14 ಸೆಪ್ಟೆಂಬರ್ 2014, 19:30 IST

ಮುಂಬೈ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಗೌರವ ಉಂಟಾಗುವಂತೆ ಮಾತನಾಡಿರುವ ಮಿತ್ರ ಪಕ್ಷ ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರ ವಿರುದ್ಧ ಮಹಾರಾಷ್ಟ್ರ ಬಿಜೆಪಿ ಕಾರ್ಯಕರ್ತರು ಸಿಟ್ಟಾಗಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ  ವಿಧಾನಸಭಾ ಚುನಾವಣೆಯ ಸೀಟು ಹಂಚಿಕೆ ಬಗ್ಗೆ ಶಿವಸೇನಾ ಜೊತೆಗೆ ಚರ್ಚೆಯೇ ನಡೆಸಬಾರದು ಎಂದು ಕಾರ್ಯಕರ್ತರು ಆಗ್ರಹಿಸಿದ್ದಾರೆ.

‘ಉದ್ಧವ್‌ ಹೇಳಿಕೆ ಮೋದಿ ಅವರಿಗೆ ಅಗೌರವ ತೋರು­ವಂತಿದೆ. ಮಹಾರಾಷ್ಟ್ರ ಬಿಜೆಪಿ ಘಟಕವು ಈ ಹೇಳಿಕೆಯನ್ನು ಬಲವಾಗಿ ಖಂಡಿಸುತ್ತದೆ. ಸೀಟು ಹಂಚಿಕೆ ಮಾತುಕತೆಯನ್ನು ಮುಂದುವರಿ­ಸ­ಬಾರದು. ನಮ್ಮ ದಾರಿಯನ್ನು ನಾವೇ ನೋಡಿಕೊ­ಳ್ಳೋಣ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ’ ಎಂದು ಮಹಾರಾಷ್ಟ್ರ ಬಿಜೆಪಿ ವಕ್ತಾರ ಮಾಧವ ಭಂಡಾರಿ ಹೇಳಿದ್ದಾರೆ.

ಚುನಾವಣೆ ನಂತರ ನಿರ್ಧಾರ

ಪುಣೆ (ಪಿಟಿಐ): ಸೀಟು ಹಂಚಿಕೆಗೆ ಸಂಬಂಧ­ಪಟ್ಟಂತೆ ಶಿವಸೇನಾ ಮತ್ತು ಬಿಜೆಪಿ ನಡುವೆ ಬಿರುಕು ಮೂಡುತ್ತಿದೆ.

ಈ ನಡುವೆಯೇ ಚುನಾವಣೆ ನಂತರ ಬಿಜೆಪಿ ಮೈತ್ರಿಕೂಟ  ಹೆಚ್ಚು ಸ್ಥಾನ ಪಡೆದರೆ ಮುಖ್ಯ­ಮಂತ್ರಿ ಹುದ್ದೆಯನ್ನು ಶಿವ­ಸೇನಾ ಪಡೆಯ­ಲಿದೆ ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಹೇಳಿಕೆಗೆ ಅಸಮ್ಮತಿ ವ್ಯಕ್ತಪಡಿಸಿರುವ ಬಿಜೆಪಿ, ಚುನಾವಣೆ ನಂತರವೇ ಮುಖ್ಯ­ಮಂತ್ರಿ ಯಾವ ಪಕ್ಷದವರು ಎಂಬುದನ್ನು ತೀರ್ಮಾನಿಸ­ಲಾ­ಗು­ತ್ತದೆ. ಬಿಜೆಪಿ ನಾಯಕತ್ವದಲ್ಲಿಯೇ ಸರ್ಕಾರ ರಚನೆಯಾಗಲಿದೆ ಎಂದು ಬಿಜೆಪಿ ಹೇಳಿದೆ.

ADVERTISEMENT

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಮೋದಿ ಅವರೊಬ್ಬರೇ ಕಾರಣರಲ್ಲ, ಮಿತ್ರ ಪಕ್ಷಗಳ ಕೊಡುಗೆಯೂ ಇದೆ ಎಂದು ಶನಿವಾರ ಟಿ.ವಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಉದ್ಧವ್‌ ಹೇಳಿದ್ದರು.

‘ತಮಿಳುನಾಡು, ಒಡಿಶಾ, ಪಂಜಾಬ್‌ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಮೋದಿ ಅಲೆ ಕಾಣಿಸಿಕೊಂಡಿದೆಯೇ? ಗೆಲುವಿನಲ್ಲಿ ಮಿತ್ರ ಪಕ್ಷಗಳ ಪಾತ್ರವೂ ದೊಡ್ಡದಾಗಿಯೇ ಇದೆ. ಮೋದಿ ಅವರು ಮಿತ್ರಕೂಟದ ಪ್ರಧಾನಿ’ ಎಂದೂ ಉದ್ಧವ್‌ ಅಭಿಪ್ರಾಯಪಟ್ಟಿದ್ದರು.

ಉದ್ಧವ್‌ ಅವರು ಮೋದಿ ಅವರ ವಿರುದ್ಧ ಅವ­ಹೇಳನ­­­ಕಾರಿಯಾಗಿ ಮಾತನಾಡಿರುವುದು ಇದೇ ಮೊದ­ಲೇ­ನಲ್ಲ. ಹಾಗಾಗಿ ಎಲ್ಲವೂ ಕೊನೆಯಾಗಲಿ ಎಂದು ಕಾರ್ಯ­ಕರ್ತರು ಬಯಸುತ್ತಿದ್ದಾರೆ. ಕಾರ್ಯಕರ್ತರ ಇಚ್ಛೆಗೆ ಅನುಸಾರವಾಗಿ ಮುಖಂಡರು ನಿರ್ಧಾರ ಕೈಗೊಳ್ಳುತ್ತಾರೆ ಎಂದು ಭಂಡಾರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.