ADVERTISEMENT

‘ಸೇನಾ ಸಿಬ್ಬಂದಿ ಕ್ಷೇಮಾಭಿವೃದ್ಧಿಗೆ ಆದ್ಯತೆ’

ಪ್ರಜಾವಾಣಿ ವಿಶೇಷ
Published 17 ಮೇ 2014, 19:30 IST
Last Updated 17 ಮೇ 2014, 19:30 IST

ನಿವೃತ್ತ ಸೇನಾ ಮುಖ್ಯಸ್ಥ ವಿ.ಕೆ.ಸಿಂಗ್‌, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಗಾಜಿಯಾಬಾದ್‌ ಕ್ಷೇತ್ರದಿಂದ 5.67 ಲಕ್ಷ ಮತಗಳಿಂದ ಅಭೂತಪೂರ್ವ ಜಯ ಸಾಧಿಸಿದ್ದಾರೆ. ಸೇನಾ ಸಿಬ್ಬಂದಿ ಕ್ಷೇಮಾಭಿವೃದ್ಧಿ ಅವರ ಪ್ರಮುಖ ಕಾರ್ಯಸೂಚಿ. ‘ಪ್ರಜಾವಾಣಿ’ಗೆ ಸಿಂಗ್‌ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

*ನೀವು ಸೇನಾಪಡೆಯಲ್ಲಿದ್ದವರು. ರಾಜಕೀಯಕ್ಕೆ ಧುಮುಕಿದ ಅನುಭವದ ಬಗ್ಗೆ ಏನು ಹೇಳುತ್ತೀರಿ?
ಸೇನೆಯಿಂದ ನಿವೃತ್ತಿಯಾದಾಗ ನನ್ನ ಮುಂದೆ ಎರಡು ಆಯ್ಕೆಗಳು ಇದ್ದವು. ಒಂದು, ಗಾಲ್ಫ್‌ ಆಡುವುದು ಮತ್ತು ವ್ಯವಸ್ಥೆಯನ್ನು ಟೀಕಿಸುವುದು. ಇನ್ನೊಂದು, 42 ವರ್ಷಗಳ ನನ್ನ ವೃತ್ತಿಯ ಅನುಭವವನ್ನು ಬಳಸಿಕೊಂಡು  ಬದಲಾವಣೆ ತರುವುದು. ನಾನು ಎರಡನೆಯದನ್ನೇ ಆಯ್ದುಕೊಂಡೆ.

*ನೀವು ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಚಳವಳಿ ಜತೆ ಗುರುತಿಸಿಕೊಂಡಿದ್ದವರಲ್ಲವೇ?
ಹೌದು, ನಾನು ಜನತಾಂತ್ರಿಕ ಮೋರ್ಚಾ ಕಟ್ಟಿ, ಯುವಕರು, ರೈತರು ಹಾಗೂ ಸಮಾಜದ ಎಲ್ಲ ವರ್ಗದ ಜನರನ್ನು ಸಂಪರ್ಕಿಸಲು ಯತ್ನಿಸಿದ್ದೆ. ಅಣ್ಣಾ ಹಜಾರೆ ಚಳವಳಿ ಸೇರಿದ್ದೆ. ಲೋಕಪಾಲ್‌ಗೆ ಆಗ್ರಹಿಸಿ ನಡೆದ ಪ್ರತಿಭಟನೆಯನ್ನು ಬೆಂಬಲಿಸಿದ್ದೆ. ಲೋಕಪಾಲ್‌್ ಮಸೂದೆ ಸಂಸತ್‌ನಲ್ಲಿ ಅನುಮೋದನೆಯಾದ ಬಳಿಕ ಜನರು ನಾನು ಚುನಾವಣೆಗೆ ನಿಲ್ಲುವಂತೆ ಕೋರಿಕೊಂಡರು. ಚುನಾವಣೆಗೆ ಸ್ಪರ್ಧಿಸುವುದಕ್ಕಾಗಿ ರಾಷ್ಟ್ರೀಯ ಪಕ್ಷವೊಂದರ ಹುಡುಕಾಟದಲ್ಲಿದ್ದೆ. ಕೊನೆಗೆ ಬಿಜೆಪಿಯೇ ಸೂಕ್ತ ಎನ್ನುವುದು ಮನವರಿಕೆಯಾಯಿತು.

ADVERTISEMENT

*ಸೇನಾ ಮುಖ್ಯಸ್ಥರಾಗಿದ್ದ ಸಂದರ್ಭದಲ್ಲಿ ನೀವು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಹಲವಾರು ವಿಷಯಗಳ ಬಗ್ಗೆ ದನಿ ಎತ್ತಿದವರು. ಈಗ ಒಬ್ಬ ಸಂಸದನಾಗಿ ಅದೇ ಬೇಡಿಕೆಗಳ ಈಡೇರಿಕೆಗೆ ಪಟ್ಟು ಹಿಡಿಯುವಿರಾ?
ಅಭಿವೃದ್ಧಿ ಹಾಗೂ ವ್ಯವಸ್ಥಿತ ಬದಲಾವಣೆ ತರುವುದೇ ನಮ್ಮ ಕಾರ್ಯಸೂಚಿಯಾಗಿದೆ. ಈ ದೇಶದ ಜನ ನಮ್ಮಲ್ಲಿ ಅಪಾರ ನಂಬಿಕೆ ಇಟ್ಟಿದ್ದಾರೆ. ಅವರ ನಿರೀಕ್ಷೆಯ ಪ್ರಕಾರ ನಾವು ಕೆಲಸ ಮಾಡಬೇಕಾಗುತ್ತದೆ.

*ನೀವು ಅಧಿಕಾರದಲ್ಲಿದ್ದಾಗ, ಸೇನಾಪಡೆಯಲ್ಲಿ ರಕ್ಷಣಾ ಸನ್ನದ್ಧತೆ ಹಾಗೂ ಮದ್ದುಗುಂಡಗಳ ಕೊರತೆಗೆ ಸಂಬಂಧಿಸಿದ ವಿಷಯಗಳನ್ನು ಪ್ರಸ್ತಾಪಿಸಿದ್ದಿರಿ. ಈಗ ಈ ಬಗ್ಗೆ ಏನು ಮಾಡುವಿರಿ?
ಈ ದಿಸೆಯಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾದದ್ದು ಸೇನಾಪಡೆಯ ನೈತಿಕ ಸ್ಥೈರ್ಯ ಹೆಚ್ಚಿಸುವ ಕೆಲಸ. ಸೇನಾಪಡೆಯಲ್ಲಿರುವವರಿಗೆ ಸೂಕ್ತ ಗೌರವ ಸಿಗುತ್ತಿಲ್ಲ. ನಿವೃತ್ತ ಸೇನಾಧಿಕಾರಿಗಳದ್ದೂ ಇದೇ ಕಥೆ. ಅವರ ಕ್ಷೇಮಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.

*ನೀವು ಭಾರಿ ಅಂತರದಿಂದ ಗೆಲುವು ಸಾಧಿಸಿದ್ದೀರಿ? ಇದರ ಶ್ರೇಯ ಯಾರಿಗೆ ಸಲ್ಲಬೇಕು?
ಗಾಜಿಯಾಬಾದ್‌ ಜನತೆಗೆ. ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿರುವ ಈ ಕ್ಷೇತ್ರದ ಜನರಿಗಾಗಿ ನಾನು ಸಣ್ಣ ಪ್ರಣಾಳಿಕೆ ಬಿಡುಗಡೆ ಮಾಡಿದ್ದೆ. ಇಲ್ಲಿ ಅಭಿವೃದ್ಧಿ ಕೆಲಸ ಮಾಡುವುದು ನನ್ನ ಆದ್ಯತೆ.

*ಈ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷದ ಸಾಧನೆಯನ್ನು ಹೇಗೆ ವಿಶ್ಲೇಷಿಸುವಿರಿ?
ನಾವು ಈವರೆಗೆ ಆ ಪಕ್ಷದ ಬೆಳವಣಿಗೆಯನ್ನು ಕಂಡಂತೆ ಹೇಳುವುದಾದರೆ, ಆ ಪಕ್ಷವು ಎಲ್ಲರೂ ತನ್ನ ಹಿಂದೆ ಬರುವರೆಂಬ ಭ್ರಮೆ ಇಟ್ಟುಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.