ADVERTISEMENT

‘ಸ್ಫೋಟದ ಸದ್ದಿನಲ್ಲಿ ಹೂತುಹೋಗುವ ಶಾಂತಿ ಧ್ವನಿ’

​ಪ್ರಜಾವಾಣಿ ವಾರ್ತೆ
Published 28 ಮೇ 2014, 19:30 IST
Last Updated 28 ಮೇ 2014, 19:30 IST

ನವದೆಹಲಿ(ಪಿಟಿಐ): ‘ಬಾಂಬ್‌ ಸ್ಫೋಟಗಳು ಮುಂದು­­ವರಿದಿದ್ದೇ ಆದರೆ, ಶಾಂತಿಸಂಧಾನ ಪ್ರಯತ್ನಗಳು ಆ ಸದ್ದಿನಲ್ಲಿ ಹುದುಗಿಹೋಗುತ್ತವೆ ಎಂಬು­ದನ್ನು ಪಾಕಿಸ್ತಾನಕ್ಕೆ ಭಾರತ ಸ್ಪಷ್ಟ­ಪಡಿಸಿದೆ’ ಎಂದು ಹೊಸ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಹೇಳಿದರು.

ಸುಷ್ಮಾ ಸಚಿವೆಯಾಗಿ ಬುಧವಾರ ಅಧಿ­ಕಾರ ಸ್ವೀಕರಿಸಿದ ನಂತರ ಸುದ್ದಿ­ಗಾರರ ಬಳಿ ಮಾತನಾಡಿ, ಪ್ರಧಾನಿ ಮೋದಿ ಅವರು ಪಾಕ್‌ ಪ್ರಧಾನಿ ನವಾಜ್‌ ಷರೀಫ್‌ ಅವರೊಂದಿಗೆ ಮಂಗಳವಾರದ ಚರ್ಚೆ ವೇಳೆ ಇದನ್ನು ಒತ್ತಿ ಹೇಳಿದ್ದಾರೆ ಎಂದು ತಿಳಿಸಿದರು.

‘ನೆರೆಯ ಪಾಕಿಸ್ತಾನದ ಜತೆ ಭಾರತ ಉತ್ತಮ ಬಾಂಧವ್ಯ ಬಯಸುತ್ತದೆ. ಆದರೆ, ಭಾರತದ ವಿರುದ್ಧ ತನ್ನ ನೆಲ­ದಲ್ಲಿ ನಡೆಯುತ್ತಿರುವ ಉಗ್ರ ಚಟು­ವಟಿಕೆ­ಗಳನ್ನು ನಿಲ್ಲಿಸಲು ಪಾಕಿಸ್ತಾನ ಕ್ರಮ ಕೈಗೊಳ್ಳಬೇಕು.  ಬಾಂಬ್‌ ದಾಳಿ­ಗಳಿಂದಾಗಿ ಉಭಯ ದೇಶಗಳ ಮಾತು­ಕತೆಗೆ ಅಡ್ಡಿಯಾಗಿದೆ’ ಎಂಬು­ದನ್ನು ಮೋದಿ ಸ್ಪಷ್ಟಪಡಿಸಿ­ದ್ದಾರೆ ಎಂದರು.

26/11ರ ದಾಳಿ ಪ್ರಕರಣಕ್ಕೆ ಸಂಬಂ­ಧಿಸಿದಂತೆ ಪಾಕ್‌­ನಲ್ಲಿ ಬಂಧಿಸ­ಲಾಗಿ­ರುವ ಆರೋಪಿಗಳ ವಿಚಾ­ರಣೆ­­ಯನ್ನು ತ್ವರಿತವಾಗಿ ನಡೆಸಬೇಕೆಂಬ ಭಾರತದ ಕೋರಿಕೆಗೆ ಪಾಕಿಸ್ತಾನ ಸಕಾರಾತ್ಮಕ­ವಾಗಿ ಸ್ಪಂದಿಸಿದೆ ಎಂದರು.

ಬಲಿಷ್ಠ ‘ಸಾರ್ಕ್‌’: ‘ಪ್ರಮಾಣವಚನಕ್ಕೆ ಬಂದಿದ್ದ ‘ಸಾರ್ಕ್’ ರಾಷ್ಟ್ರಗಳ ನಾಯಕ­ರೊಂದಿಗೆ ಮಾತುಕತೆ ನಡೆಸಿ­ರುವ ಮೋದಿ, ದ್ವಿಪಕ್ಷೀಯ ಸಮಸ್ಯೆ­ಗಳಿಂದಾಗಿ ಜಾಗತಿಕ ಮಟ್ಟದಲ್ಲಿ ಈವರೆಗೂ ಛಾಪು ಮೂಡಿಸಲು ‘ಸಾರ್ಕ್‌’ಗೆ ಸಾಧ್ಯ­ವಾ­ಗಿಲ್ಲ. ಈ ಸಮಸ್ಯೆಗಳು ಇತ್ಯರ್ಥ­ಗೊಂ­ಡಲ್ಲಿ ‘ಸಾರ್ಕ್‌’ ಕೂಡ ವಿಶ್ವದ ಒಂದು ಶಕ್ತಿ­ಯಾಗಿ ಹೊರಹೊಮ್ಮಲಿದೆ ಎಂದು ಪ್ರತಿ­ಪಾದಿಸಿ­ದ್ದಾರೆ’ ಎಂದು ತಿಳಿಸಿದರು.

‘ನೆರೆಯ ಹಾಗೂ ಕಾರ್ಯತಂತ್ರ ಪಾಲುದಾರಿಕೆ ರಾಷ್ಟ್ರಗಳಾದ ಆಫ್ರಿಕಾ, ಆಸಿಯಾನ್‌ ಸದಸ್ಯ ರಾಷ್ಟ್ರ­ಗಳು, ಯುರೋಪ್‌ ಹಾಗೂ ಇತರೆ ರಾಷ್ಟ್ರ­ಗಳ ನಡು­ವಿನ ಸಂಬಂಧ ಸುಧಾರಣೆ ಜತೆಗೆ, ಜಗತ್ತಿಗೆ ಭಾರತದ ಶಕ್ತಿ ಏನು ಎಂದು ತೋರಿಸುವುದು ನನ್ನ ಆದ್ಯತೆ­ಯಾಗಿದೆ’ ಎಂದು ಸುಷ್ಮಾ ಇದೇ  ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.