ADVERTISEMENT

‘ಹೇಗಿದ್ದರೂ ನಡೆಯುತ್ತೆ’ ಧೋರಣೆ ಬಿಡಿ

ಡಿಆರ್‌ಡಿಒಗೆ ಪ್ರಧಾನಿ ನರೇಂದ್ರ ಮೋದಿ ತಾಕೀತು

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2014, 19:30 IST
Last Updated 20 ಆಗಸ್ಟ್ 2014, 19:30 IST

ನವದೆಹಲಿ (ಪಿಟಿಐ): ‘ಚಲ್ತಾ ಹೈ’ (ಉದಾಸೀನ ಮನೋಭಾವ) ಧೋರಣೆ ಬಿಟ್ಟು ಯೋಜನೆ ಗಳನ್ನು ನಿಗದಿತ ಸಮಯದೊಳಗೆ ಪೂರ್ಣ­ಗೊಳಿಸು­ವಂತೆ ದೇಶದ ಪ್ರತಿಷ್ಠಿತ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗೆ (ಡಿಆರ್‌­ಡಿಒ) ಪ್ರಧಾನಿ ನರೇಂದ್ರ ಮೋದಿ ಅವರು ತಾಕೀತು ಮಾಡಿದ್ದಾರೆ.

ಡಿಆರ್‌ಡಿಒ ಅನೇಕ ಯೋಜನೆಗಳು ವಿಳಂಬವಾಗಿರುವುದಕ್ಕೆ ‘ಗರಂ’ ಆದ ಮೋದಿ, ‘ರಕ್ಷಣಾ ವಲಯದ ತಂತ್ರ­ಜ್ಞಾನ­ಗಳು ಕ್ಷಿಪ್ರಗತಿಯಲ್ಲಿ ಬದಲಾ­ಗುತ್ತಿವೆ. ನಮ್ಮಲ್ಲಿ ನವೀನ ಪರಿಕಲ್ಪನೆ­-ಗಳು ಇನ್ನೂ ಮೂಡುತ್ತಿರುವಾಗಲೇ ಜಾಗತಿಕ ರಕ್ಷಣಾ ವಲಯ ಎರಡು ಹೆಜ್ಜೆ ಮುಂದಿರುತ್ತಿದೆ. ದಿನನಿತ್ಯ ಹೊಸ ಹೊಸ ಉತ್ಪನ್ನಗಳು ಹೊರಬರುತ್ತಿವೆ’ ಎಂದರು.

ಡಿಆರ್‌ಡಿಒ ಪ್ರಶಸ್ತಿಗಳನ್ನು ವಿತರಿಸಿ ಮಾತನಾಡಿದ ಅವರು, ‘ಈ ಹಿನ್ನಡೆಗೆ ಪ್ರತಿಭೆ ಕೊರತೆ ಕಾರಣವಲ್ಲ. ನಮ್ಮಲ್ಲಿ ಪ್ರತಿಭಾವಂತರು ದಂಡಿಯಾಗಿದ್ದಾರೆ. ಆದರೆ, ಇದೇ ವೇಳೆ ಉದಾಸೀನ ಮನೋಭಾ­ವವೂ ಹೇರಳವಾಗಿದೆ’ ಎಂದು ಡಿಆರ್‌ಡಿಒ ಸಂಶೋಧಕರಿಗೆ ಬಿಸಿ ಮುಟ್ಟಿಸಿದರು.

‘ಈಗಿನ ವೇಗಕ್ಕೆ ತಕ್ಕಂತೆ ಡಿಆರ್‌ಡಿಒ ಸ್ಪಂದಿ­ಸುವುದನ್ನು ಕಲಿಯಬೇಕು ಮತ್ತು ಜಾಗತಿಕ ಮಟ್ಟದಲ್ಲಿ ಪೈಪೋಟಿ ನೀಡುವಂತಹ ಕಾರ್ಯ­ಸೂಚಿಗಳನ್ನು ಹಾಕಿಕೊಳ್ಳಬೇಕು’ ಎಂದರು. ‘ನಾವು ಇನ್ನೊಬ್ಬರನ್ನು ಅನುಕರಿಸಿ ನಾಯಕರಾ­ಗಲು ಸಾಧ್ಯವಿಲ್ಲ. ಆದರೆ ಪಥ ಪ್ರವರ್ತಕರಾಗುವ ಮೂಲಕ ಜಾಗತಿಕ ನಾಯಕರಾಗಬಹುದು’ ಎಂದು ಮೋದಿ ಹೇಳಿದರು.

‘ಜಗತ್ತು ನಮಗಾಗಿ ಕಾಯುವುದಿಲ್ಲ. ಕಾಲದ ಅಪೇಕ್ಷೆಗಳು ಬಹಳಷ್ಟಿವೆ. ಸಮಯದ ವೇಗಕ್ಕೆ ತಕ್ಕಂತೆ ನಾವೂ ಸಾಗಬೇಕು. ನಿಗದಿತ ಅವಧಿಯಲ್ಲಿ ಯೋಜನೆಗಳನ್ನು ಪೂರ್ಣಗೊಳಿಸಲು ಪರಿಶ್ರಮ ವಹಿಸಬೇಕು’ ಎಂದು ಹೇಳಿದರು.

‘1992ರಲ್ಲಿ ಆರಂಭವಾದ ಯೋಜನೆ ಪೂರ್ಣಗೊಳ್ಳಲು ಇನ್ನೂ ಕೆಲವು ಕಾಲ ಬೇಕು ಎಂದು 2014ರಲ್ಲಿ ಹೇಳಿದರೆ ಅದಕ್ಕೆ ಅರ್ಥ­ವಿ­ದೆಯೇ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ ಅವರು, ಯಾವುದೇ ನಿರ್ದಿಷ್ಟ ಯೋಜನೆಗಳನ್ನು ಮೋದಿ ಹೆಸರಿಸಲಿಲ್ಲ. ‘ಜಾಗತಿಕ ಮಟ್ಟದಲ್ಲಿ 2020ಕ್ಕೆ ಹೊರಬರುವ ಉತ್ಪನ್ನಗಳನ್ನು ನಾವು 2018ರ ವೇಳೆಗೇ ಸಿದ್ಧಪಡಿಸುವಂತಾಗ­ಬೇಕು’ ಎಂದು ಮೋದಿ ಆಶಿಸಿದರು.

ಲಘು ಯುದ್ಧ ವಿಮಾನ ‘ತೇಜಸ್‌’, ನಾಗ್‌ ಕ್ಷಿಪಣಿ, ಭೂಮಿಯಿಂದ ಆಕಾಶಕ್ಕ ಚಿಮ್ಮುವ ದೂರಗಾಮಿ ಕ್ಷಿಪಣಿ ಮತ್ತು ವಾಯುಗಾಮಿ ಆತಂಕ­ಗಳ ಮುನ್ನೆಚ್ಚರಿಕೆ ಹಾಗೂ ನಿಯಂತ್ರಣ ವ್ಯವಸ್ಥೆಯ ಯೋಜನೆಗಳು ಹಲವು ವರ್ಷಗಳಿಂದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ನನೆ­ಗುದಿಗೆ ಬಿದ್ದಿವೆ. ಈ ಯೋಜನೆಗಳ ಖರ್ಚು–ವೆಚ್ಚಗಳು ಮಿತಿಮೀರಿ ಹೆಚ್ಚಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.