ADVERTISEMENT

₨166 ಕೋಟಿಗಳಷ್ಟು ಅಕ್ರಮ ಹಣ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2015, 19:34 IST
Last Updated 7 ಜುಲೈ 2015, 19:34 IST

ಮುಂಬೈ (ಪಿಟಿಐ): ಮಹತ್ವದ ಬೆಳವಣಿಗೆಯಲ್ಲಿ  ಕಪ್ಪುಹಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು (ಇ.ಡಿ) ಹೂಡಿಕೆದಾರರಿಗೆ ಅಧಿಕ ಲಾಭದ ಆಮಿಷವೊಡ್ಡಿ ವಂಚಿಸಿದ (ಪಾಂಝಿ ಹಗರಣ) ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಂಗಪುರದ ಬ್ಯಾಂಕ್‌ನಲ್ಲಿ ಇರಿಸಲಾಗಿದ್ದ ₨166 ಕೋಟಿ ಮೊತ್ತವನ್ನು ಜಪ್ತಿ ಮಾಡಿಕೊಂಡಿದೆ.

ಅಕ್ರಮ ಹಣ ವರ್ಗಾವಣೆ ಕಾಯ್ದೆಯ (ಪಿಎಂಎಲ್‌ಎ) ಅಡಿಯಲ್ಲಿ ಈ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಸಿಟಿ ಲಿಮೌಸಿನ್‌ ಚಿಟ್‌ ಫಂಡ್‌ನಲ್ಲಿ ಹಣ ಹೂಡಿದರೆ ಅಧಿಕ ಲಾಭ ದೊರಕುತ್ತದೆ ಎಂಬ  ಆಮಿಷವೊಡ್ಡಿ ಅದರ ಅಧ್ಯಕ್ಷ ಸೈಯದ್‌ ಎಂ. ಮಸೂದ್‌ ಅಕ್ರಮ ಹಣದ ವಹಿವಾಟು ನಡೆಸಿದ ಪ್ರಕರಣದಲ್ಲಿ ಇ.ಡಿ ತನಿಖೆ ನಡೆಸುತ್ತಿತ್ತು.

ಈ ವಂಚನೆಯ ಯೋಜನೆಯಿಂದ ಅಕ್ರಮವಾಗಿ ಪಡೆದ ₨166 ಕೋಟಿ (26.3 ಅಮೆರಿಕನ್ ಡಾಲರ್‌) ಹಣವನ್ನು ಸಿಂಗಪುರದ ಬ್ಯಾಂಕ್‌ನಲ್ಲಿ ಆಪ್ಟಿಮಮ್‌ ಫೈನಾನ್ಸ್‌ ಲಿಮಿಟೆಡ್‌ನ ಹೆಸರಿನಲ್ಲಿ ಇರಿಸಲಾಗಿತ್ತು. ವಿದೇಶದಲ್ಲಿ ಇರಿಸಿರುವ ಕಪ್ಪುಹಣವನ್ನು ಹಿಂದಕ್ಕೆ ತರುವ ಮತ್ತು ಹಣಕಾಸು ಅಪರಾಧ ತನಿಖೆಗಳಲ್ಲಿ ಇದು ಮಹತ್ವದ ಸಾಧನೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಸಿಂಗಪುರದ ಅಧಿಕಾರಿಗಳ ಸಹಕಾರದೊಂದಿಗೆ ಈ ಅಕ್ರಮ ಹಣವನ್ನು ವಶಕ್ಕೆ ಪಡೆದುಕೊಳ್ಳಲು ಇ.ಡಿ ಕಳೆದ ವಾರವಷ್ಟೇ ಸಿಂಗಪುರಕ್ಕೆ ತೆರಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.