ADVERTISEMENT

123 ಕಠಿಣ ಕ್ಷೇತ್ರಗಳಿಗೆ ರಣತಂತ್ರ

2019ರ ಚುನಾವಣೆ: 350 ಸ್ಥಾನ ಗೆಲ್ಲಲು ಷಾ ಕಾರ್ಯಸೂಚಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2017, 19:30 IST
Last Updated 24 ಸೆಪ್ಟೆಂಬರ್ 2017, 19:30 IST
ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಅಮಿತ್‌ ಷಾ –ಪಿಟಿಐ ಚಿತ್ರ
ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಅಮಿತ್‌ ಷಾ –ಪಿಟಿಐ ಚಿತ್ರ   

ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ 350 ಸ್ಥಾನಗಳನ್ನು ಗೆಲ್ಲುವ ಲೆಕ್ಕಚಾರ ಹಾಕಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ, ಗೆಲ್ಲಲು ಕಷ್ಟಕರವಾಗಿರುವ 125 ಕ್ಷೇತ್ರಗಳಿಗಾಗಿ ಎರಡು ತಿಂಗಳ ಒಳಗಾಗಿ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸುವಂತೆ ಪಕ್ಷದ ಮುಖಂಡರಿಗೆ ಸೂಚಿಸಿದ್ದಾರೆ.

ಇದರಿಂದಾಗಿ ಮುಂಬರುವ ಚುನಾವಣೆಯಲ್ಲಿ ಈ ಕ್ಷೇತ್ರಗಳಲ್ಲಿ ಸ್ಪರ್ಧಿಸಲು, ಅದಕ್ಕಾಗಿ ಸಿದ್ಧತೆ ನಡೆಸಲು ಅಭ್ಯರ್ಥಿಗಳಿಗೆ ಸಾಕಷ್ಟು ಸಮಯ ಸಿಗಲಿದೆ ಎಂಬುದು ಷಾ ಲೆಕ್ಕಚಾರ.

2019ರ ಚುನಾವಣೆಗಾಗಿ ‘ಮಿಷನ್‌ 350’ ಎಂಬ ಕಾರ್ಯತಂತ್ರವನ್ನು ಅಮಿತ್‌ ಷಾ ಹೆಣೆದಿದ್ದಾರೆ. ಇದುವರೆಗೆ ಒಮ್ಮೆಯೂ ಗೆಲ್ಲಲು ಸಾಧ್ಯವಾಗದ 123 ಕ್ಷೇತ್ರಗಳಲ್ಲಿ ಮತಗಟ್ಟೆ ಮಟ್ಟದಿಂದ ಪಕ್ಷವನ್ನು ಬಲಪಡಿಸುವ ಹೊಣೆಯನ್ನು 16 ಕೇಂದ್ರ ಮತ್ತು ರಾಜ್ಯ ಸಚಿವರು ಸೇರಿದಂತೆ 25 ಮುಖಂಡರಿಗೆ ಅವರು ವಹಿಸಿದ್ದಾರೆ.

ADVERTISEMENT

ಕೇಂದ್ರ ಸಚಿವರಾದ ರವಿ ಶಂಕರ್‌ ಪ್ರಸಾದ್‌, ಅನಂತ್‌ ಕುಮಾರ್‌, ಪೀಯೂಷ್‌ ಗೋಯಲ್‌, ಧರ್ಮೇಂದ್ರ ಪ್ರಧಾನ್‌, ಪ್ರಕಾಶ್‌ ಜಾವಡೇಕರ್‌, ಜೆ.ಪಿ. ನಡ್ಡಾ, ನಿರ್ಮಲಾ ಸೀತಾರಾಮನ್‌, ನರೇಂದ್ರ ಸಿಂಗ್‌ ತೋಮರ್‌, ಮನೋಜ್‌ ಸಿನ್ಹಾ, ಅರ್ಜುನ್‌ ಮೇಘವಾಲ್‌ ಮತ್ತು ಆರ್‌.ಕೆ. ಸಿಂಗ್‌ ಈ ತಂಡದಲ್ಲಿದ್ದಾರೆ.

ರಾಜ್ಯಗಳ ಸಚಿವರಾದ ಮಹಾರಾಷ್ಟ್ರದದ ವಿನೋದ್‌ ತಾವಡೆ, ಉತ್ತರ ಪ್ರದೇಶದ ಸ್ವತಂತ್ರದೇವ್‌ ಸಿಂಗ್‌, ಬಿಹಾರದ ಮಂಗಳ ಪಾಂಡೆ, ಮಧ್ಯಪ್ರದೇಶದ ನರೋತ್ತಮ್‌ ಮಿಶ್ರಾ ಮತ್ತು ಅಸ್ಸಾಂನ ಹೇಮಂತ್‌ ಬಿಸ್ವಾ ಅವರಿಗೂ ರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯ ಜವಾಬ್ದಾರಿಗಳನ್ನು ಹೊರಿಸಲಾಗಿದೆ.

ಪಶ್ಚಿಮ ಬಂಗಾಳ (20 ಕ್ಷೇತ್ರ), ಒಡಿಶಾ (13), ಕರ್ನಾಟಕ (8), ತಮಿಳುನಾಡು (9), ಆಂಧ್ರ ಪ್ರದೇಶ (15), ತೆಲಂಗಾಣ (13), ಪಂಜಾಬ್‌ (5), ಕೇರಳ (12) ಸೇರಿದಂತೆ ಬಿಜೆಪಿ ಆಡಳಿತದಲ್ಲಿಲ್ಲದ ರಾಜ್ಯಗಳಲ್ಲಿನ ಲೋಕಸಭಾ ಕ್ಷೇತ್ರಗಳ ಗೆಲುವಿನ ಹೊಣೆಯನ್ನು ಇವರಿಗೆ ವಹಿಸಲಾಗಿದೆ.

ಕಾಂಗ್ರೆಸ್‌ನ ಪ್ರಮುಖ ಮುಖಂಡರನ್ನು ಎದುರಿಸುವುದಕ್ಕಾಗಿ ಆಡಳಿತಲ್ಲಿರುವ ರಾಜ್ಯಗಳಾದ ಮಧ್ಯ ಪ್ರದೇಶ, ಮಹಾರಾಷ್ಟ್ರ, ಛತ್ತೀಸಗಡ ಮತ್ತು ಅಸ್ಸಾಂಗಳಲ್ಲೂ ಕೆಲವು ಕ್ಷೇತ್ರಗಳನ್ನು ಅದು ಗುರುತಿಸಿದೆ.

ಆದರೆ, ಅಚ್ಚರಿಯ ಸಂಗತಿ ಎಂದರೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಪ್ರತಿನಿಧಿಸುವ ರಾಯ್‌ ಬರೇಲಿ ಮತ್ತು ಅಮೇಠಿ ಕ್ಷೇತ್ರಗಳು ಈ ಪಟ್ಟಿಯಲ್ಲಿಲ್ಲ.

ಪಕ್ಷದ ಸಾಧನೆ ಪರಾಮರ್ಶೆ
ನವದೆಹಲಿ (ಪಿಟಿಐ): ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರು ಭಾನುವಾರ ದೆಹಲಿಯಲ್ಲಿ ಆರಂಭಗೊಂಡ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಒಂದು ವರ್ಷದ ಪಕ್ಷದ ಸಾಧನೆಯನ್ನು ಪರಾಮರ್ಶೆ ನಡೆಸಿದರು.

ಪ್ರಧಾನಿ ಮೋದಿ ಸೋಮವಾರ ಕಾರ್ಯಕಾರಿಣಿ ಉದ್ದೇಶಿಸಿ ಮಾತನಾಡುವ ಸಾಧ್ಯತೆ ಇದ್ದು, ದೇಶದ ಅರ್ಥವ್ಯವಸ್ಥೆ ಬಗ್ಗೆ ವಿರೋಧ ಪಕ್ಷಗಳು ಮಾಡುತ್ತಿರುವ ಟೀಕೆಗೆ ಪ್ರತಿಕ್ರಿಯಿಸುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.