ADVERTISEMENT

14 ಸಾವು, 45 ಪ್ರಯಾಣಿಕರಿಗೆ ಗಾಯ

ಉತ್ತರ ಪ್ರದೇಶದಲ್ಲಿ ರೈಲು ದುರಂತ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2014, 19:30 IST
Last Updated 1 ಅಕ್ಟೋಬರ್ 2014, 19:30 IST

ಗೋರಖ್‌ಪುರ/ಉತ್ತರ ಪ್ರದೇಶ: ವೇಗವಾಗಿ ಚಲಿಸುತ್ತಿದ್ದ ಪ್ಯಾಸೆಂಜರ್ ರೈಲು ಇನ್ನೊಂದು ರೈಲಿಗೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಕನಿಷ್ಠ 14 ಪ್ರಯಾಣಿಕರು ಮೃತಪಟ್ಟು, 47 ಮಂದಿ ಗಾಯಗೊಂಡಿದ್ದಾರೆ.

ಲಖನೌದಿಂದ ಬರುತ್ತಿದ್ದ ಬರೌನಿ ಎಕ್ಸ್‌ಪ್ರೆಸ್‌ ಮಂಗಳವಾರ ರಾತ್ರಿ 11 ಗಂಟೆ ವೇಳೆ ನಂದನಗರ್‌ ರೈಲ್ವೆ ಕ್ರಾಸಿಂಗ್‌ ಬಳಿ ತಿರುವು ಪಡೆದು-ಕೊಳ್ಳುವಾಗ ಮಡೌಡೀಹ್– ಲಖನೌ ನಡುವೆ ಸಂಚರಿಸುತ್ತಿದ್ದ ಕೃಷಕ್ ಎಕ್ಸ್‌ಪ್ರೆಸ್‌ ವೇಗವಾಗಿ ಬಂದು ಸಿಗ್ನಲ್‌ ಜಂಪ್‌ ಮಾಡಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಈಶಾನ್ಯ ರೈಲ್ವೆಯ ಮುಖ್ಯ  ಸಂಪರ್ಕಾಧಿಕಾರಿ ಅಲೋಕ್ ಕುಮಾರ್ ಸಿಂಗ್‌ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಘಟನೆಯಲ್ಲಿ 14 ಪ್ರಯಾಣಿಕರು ಮೃತಪಟ್ಟಿದ್ದಾರೆ. 47 ಮಂದಿ ಗಾಯಗೊಂಡಿದ್ದು ಅವರಲ್ಲಿ 12 ಮಂದಿ ಸ್ಥಿತಿ ಗಂಭೀರವಾಗಿದೆ. ಬರೌನಿ ಎಕ್ಸ್‌ಪ್ರೆಸ್‌ನ ಮೂರು ಬೋಗಿಗಳು ತೀವ್ರವಾಗಿ ಜಖಂ ಆಗಿದೆ. ಗಾಯಾಳುಗಳನ್ನು ಗೋರಖ್‌ಪುರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ರೈಲ್ವೆ ಸುರಕ್ಷತಾ ಆಯುಕ್ತ ಪಿ.ಕೆ.ಬಜ್ಪಲ್‌ ಅವರಿಗೆ  ಸೂಚಿಸ-ಲಾಗಿದೆ.ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿದ ತುರ್ತು ಕಾರ್ಯಾಚರಣೆ ದಳ, ಗೂರ್ಖಾ ರೆಜಿಮೆಂಟ್‌ ಮತ್ತು ರೈಲ್ವೆ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿದರು.
ನಿಲುಗಡೆ ಸಿಗ್ನಲ್‌ ಹಾಕಿದ್ದರೂ ಅದನ್ನು ದಾಟಿಸಿದ ಆರೋಪದಲ್ಲಿ ಕೃಷಕ್‌ ಎಕ್ಸ್‌ಪ್ರೆಸ್‌ನ ಲೋಕೊ ಪೈಲಟ್‌ ರಾಮ್‌ ಬಹದ್ದೂರ್‌ ಮತ್ತು ಸಹಾಯಕ ಲೋಕೊ ಪೈಲಟ್‌ ಸತ್ಯಜಿತ್‌ರನ್ನು ಅಮಾನತು ಮಾಡಲಾಗಿದೆ ಎಂದು ಸಿಂಗ್‌ ತಿಳಿಸಿದ್ದಾರೆ. ನುಜ್ಜುಗುಜ್ಜಾದ ಬೋಗಿಗಳ ಕೆಳಗೆ ಹಲವರು ಸಿಲುಕಿಕೊಂಡಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. 

ಸಂತಾಪ: ದುರ್ಘಟನೆ 14 ಮಂದಿಯನ್ನು ಬಲಿತೆಗೆದುಕೊಂಡ ಬಗ್ಗೆ ದುಃಖ ವ್ಯಕ್ತ-ಪಡಿಸಿರುವ ರೈಲ್ವೆ ಸಚಿವ ಡಿ.ವಿ.-ಸದಾನಂದಗೌಡ ಅವರು, ಮೃತರ ಕುಟುಂಬದವರಿಗೆ ತಲಾ ರೂ2ಲಕ್ಷ ಪರಿ-ಹಾರ ಘೋಷಿಸಿದ್ದಾರೆ. ತೀವ್ರವಾಗಿ ಗಾಯ-ಗೊಂಡವರಿಗೆ ರೂ1ಲಕ್ಷ ಹಾಗೂ ಸಣ್ಣಪುಟ್ಟ ಗಾಯ-ಗಳಾದವರಿಗೆ ರೂ20 ಸಾವಿರ ಪರಿಹಾರ ಘೋಷಣೆ ಮಾಡಿ-ದ್ದಾರೆ.ಉತ್ತರ ಪ್ರದೇಶ ಸರ್ಕಾರ ಕೂಡ ಮೃತರ ಕುಟುಂಬಗಳಿಗೆ ತಲಾ ರೂ2 ಲಕ್ಷ ಹಾಗೂ ಗಾಯಾಳುಗಳಿಗೆ ರೂ50 ಸಾವಿರ ಪರಿಹಾರ ಘೋಷಣೆ ಮಾಡಿದೆ.

ಪರಿಹಾರ ಘೋಷಣೆ
ರೈಲು ಅಪಘಾತದ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮೃತರ ಕುಟುಂಬದವರಿಗೆ ತಲಾ ರೂ2 ಲಕ್ಷ ಪರಿಹಾರ ಪ್ರಕಟಿಸಿದ್ದಾರೆ. ‘ಪ್ರಧಾನಿ ಮೋದಿ ಅವರು ಅಪಘಾತದಲ್ಲಿ 14 ಮಂದಿ ಜೀವಕಳೆದುಕೊಂಡದ್ದಕ್ಕೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ’ ಎಂದು ಪ್ರಧಾನಿ ಕಚೇರಿ ಹೇಳಿಕೆ ತಿಳಿಸಿದೆ. ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಗಾಯಾಳುಗಳಿಗೂ ತಲಾ ರೂ50,000 ಪರಿಹಾರ ಪ್ರಕಟಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT