ADVERTISEMENT

31ಕ್ಕೆ ಮಹಾರಾಷ್ಟ್ರ ಸರ್ಕಾರ ಅಸ್ತಿತ್ವಕ್ಕೆ

ವಿಶ್ವಾಸಮತದಿಂದ ದೂರ ಉಳಿಯಲು ಎನ್‌ಸಿಪಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2014, 19:30 IST
Last Updated 27 ಅಕ್ಟೋಬರ್ 2014, 19:30 IST

ಮುಂಬೈ (ಪಿಟಿಐ): ಮಹಾರಾಷ್ಟ್ರದಲ್ಲಿ ಬಿಜೆಪಿಯ ನೂತನ ಸರ್ಕಾರ ಇದೇ 31ರಂದು ಅಸ್ತಿತ್ವಕ್ಕೆ ಬರಲಿದೆ. ವೀಕ್ಷಕರಾಗಿರುವ ಕೇಂದ್ರ ಸಚಿವ ರಾಜ­ನಾಥ್ ಸಿಂಗ್‌ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಜೆ.ಪಿ.ನಡ್ಡಾ ಅವರ ನೇತೃತ್ವದಲ್ಲಿ  ಬಿಜೆಪಿಯ 121 ಶಾಸಕರು ಮಂಗಳವಾರ  (ಅ.28) ಸಂಜೆ 4 ಗಂಟೆಗೆ ಸಭೆ ಸೇರಲಿದ್ದಾರೆ.

‘ಶಾಸಕಾಂಗ ಪಕ್ಷದ ನಾಯಕರ ಆಯ್ಕೆ ನಂತರ ರಾಜ್ಯಪಾಲ ಸಿ.ವಿದ್ಯಾ­ಸಾಗರ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆ ಹಕ್ಕು ಮಂಡಿಸಲಾ­ಗುವುದು’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಜೀವ್ ಪ್ರತಾಪ್‌ ರೂಡಿ ತಿಳಿಸಿದ್ದಾರೆ. ದಕ್ಷಿಣ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಪ್ರಮಾಣವಚನ ಸಮಾರಂಭ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಕೇಂದ್ರ ಸಂಪುಟದ ಹಲವರು ಮತ್ತು ಬಿಜೆಪಿ ಮುಖ್ಯಮಂತ್ರಿ­ಗಳು ಭಾಗವಹಿ­ಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ನೂತನ ಶಾಸಕ ಸಾವು
ಮಹಾ­ರಾಷ್ಟ್ರ ವಿಧಾನಸಭೆಗೆ ಈಚೆಗಷ್ಟೇ ಆಯ್ಕೆ­ಯಾ­­ಗಿದ್ದ ಬಿಜೆಪಿಯ ಗೋವಿಂದ್‌ ಎಂ. ರಾಥೋಡ್‌ ಹೃದ­ಯಾಘಾತದಿಂದ ಸೋಮ­­­ವಾರ ಮೃತಪಟ್ಟಿ­ದ್ದಾರೆ. ರಾಥೋಡ್‌ ಮುದಖೇಡ್‌ ಕ್ಷೇತ್ರ­ದಿಂದ ಆಯ್ಕೆಯಾಗಿದ್ದರು.
‘ರೈಲಿ­ನಲ್ಲಿ ಪ್ರವಾಸ ಮಾಡುತ್ತಿರುವಾಗಲೇ ಶಾಸ­ಕರು ತೀವ್ರ ಹೃದಯಾಘಾತಕ್ಕೆ ಈಡಾಗಿ ಮೃತಪಟ್ಟಿ­ದ್ದಾರೆ’ ಎಂದು ಬಿಜೆಪಿ ವಕ್ತಾರ ಮಾಧವ ಭಂಡಾರಿ ತಿಳಿಸಿದ್ದಾರೆ.
ಮಹಾರಾ­ಷ್ಟ್ರದ ಮುಂದಿನ ಮುಖ್ಯಮಂತ್ರಿ ಆಯ್ಕೆ ಸಂಬಂಧ ಮುಂಬೈನಲ್ಲಿ ಮಂಗಳವಾರ ನಡೆ­ಯ­ಲಿರುವ ಶಾಸ­ಕಾಂಗ ಸಭೆಯಲ್ಲಿ ಭಾಗವ­ಹಿಸಲು ಭಾನು­ವಾರ ರಾತ್ರಿ ದೇವಗಿರಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಹೊರಟಿದ್ದರು.

ಮೈತ್ರಿ ಇನ್ನೂ ಅಸ್ಪಷ್ಟ: ಶಿವಸೇನಾ ಜತೆಗಿನ ಹೊಂದಾ­ಣಿಕೆ ಮಾತುಕತೆ ಫಲಶ್ರುತಿ ಏನೇ ಆಗಿದ್ದರೂ ಸರ್ಕಾರ ರಚನೆ ಪ್ರಕ್ರಿಯೆ ಕಡೆಗೆ ಬಿಜೆಪಿ ಗಮನ ಹರಿಸಿದೆ. ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಸರ್ಕಾರ ರಚನೆಗೆ ಮೊದಲ ಹೆಜ್ಜೆಯಾಗಿದೆ.

ಶಿವಸೇನಾ ಜತೆ ಸೇರಿ ಸರ್ಕಾರ ರಚಿಸುವ ಬಗ್ಗೆ ಬಿಜೆಪಿ ಮುಖಂಡರು ಸ್ಪಷ್ಟ ಮಾಹಿತಿ ನೀಡುತ್ತಿಲ್ಲ. ಮೈತ್ರಿ ಸಂಬಂಧ ಯಾವುದೇ ಸಕಾರಾತ್ಮಕ ನಿರ್ಧಾರ ಕೈಗೊಂಡಿಲ್ಲ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ. ಕೇಂದ್ರ ವೀಕ್ಷಕರು ಸೇನಾ ಮುಖಂಡ­ರನ್ನು ಭೇಟಿ ಮಾಡುವರೇ ಎಂಬ ಪ್ರಶ್ನೆಗೆ, ಈವರೆಗೆ ಅಂತಹ ಯಾವುದೇ ಬೆಳವಣಿಗೆ ನಡೆದಿಲ್ಲ ಎಂದು ಹೇಳಿದ್ದಾರೆ.

ಬಿಜೆಪಿಯ ಬಗ್ಗೆ ಶಿವಸೇನಾ ತನ್ನ ನಿಲುವನ್ನು ಇನ್ನಷ್ಟು ಮೃದುಗೊಳಿಸಿದೆ. ಜನರ ಆಶೀರ್ವಾದ ಹೊಂದಿರುವ ಯಾವುದೇ ವ್ಯಕ್ತಿ ಮುಖ್ಯಮಂತ್ರಿ­ಯಾದರೂ ಬೆಂಬಲ ನೀಡುವುದಾಗಿ  ಶಿವಸೇನಾ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಹೇಳಲಾಗಿದೆ.

ಮುಖ್ಯಾಂಶಗಳು
*ಮುಖ್ಯಮಂತ್ರಿ ಆಯ್ಕೆಗಾಗಿ ಮಂಗಳವಾರ ಸಂಜೆ 4 ಗಂಟೆಗೆ ಬಿಜೆಪಿ ಶಾಸಕರ ಸಭೆ
*ಸಭೆಯ ನಂತರ ರಾಜ್ಯಪಾಲರ ಭೇಟಿಯಾಗಿ ಸರ್ಕಾರ ರಚನೆ ಹಕ್ಕು ಮಂಡನೆ
*31ರಂದು ಸರ್ಕಾರ ಪ್ರಮಾಣವಚನ
*ಯಾರೇ ಮುಖ್ಯಮಂತ್ರಿಯಾದರೂ ಶಿವಸೇನಾ ಬೆಂಬಲ
*ಸೇನಾ ಸರ್ಕಾರ ಸೇರುವ ಬಗ್ಗೆ ಇನ್ನೂ ನಿರ್ಧಾರ ಇಲ್ಲ

‘ಶಿವಸೇನಾ ಮತ್ತು ಬಿಜೆಪಿ ಒಟ್ಟಾಗಿ ಸರ್ಕಾರ ರಚನೆ ಮಾಡಿದರೆ ಸ್ಥಿರ­ವಾಗಿರಲಿದೆ. ಬಿಜೆಪಿ ಜತೆಗಿನ ಮೈತ್ರಿ ಬಹಳ ಹಳೆಯದು. ಚುನಾವಣೆ ವೇಳೆ ಏನು ನಡೆದಿದೆಯೊ ಅದನ್ನೆಲ್ಲ ಮರೆತಿದ್ದೇವೆ. ನಮ್ಮದು ಭಾರತ– ಪಾಕಿಸ್ತಾನ ಯುದ್ಧದ ರೀತಿಯಲ್ಲ’ ಎಂದು ಶಿವಸೇನಾ ವಕ್ತಾರ ಸಂಜಯ್‌ ರಾವುತ್‌ ಹೇಳಿದ್ದಾರೆ.
‘ಮಹಾರಾಷ್ಟ್ರದ ಜನರ ಹಿತಾಸಕ್ತಿಗೆ  ಪೂರಕ­ವಾಗಿ ಸ್ಪಂದಿಸುವ ಮುಖ್ಯಮಂತ್ರಿಗೆ ಶಿವಸೇನಾ ಬೆಂಬಲ ನೀಡಲಿದೆ’ ಎಂದು ಅವರು ವಿವರಿಸಿದ್ದಾರೆ.
ಆದರೆ ಶಿವಸೇನಾ ಮಹಾರಾಷ್ಟ್ರ ಸಂಪುಟ ಸೇರುವ ಬಗ್ಗೆ ಇನ್ನೂ ಯಾವುದೇ ಸ್ಪಷ್ಟತೆ ಇಲ್ಲ. 

ಎನ್‌ಸಿಪಿಯೂ ಬಿಜೆಪಿ ಪರ: ಮತ್ತೊಂದೆಡೆ, ಎನ್‌ಸಿಪಿ ಕೂಡ ಬಿಜೆಪಿಯನ್ನು ಓಲೈಸಲು ಮುಂದಾ­ಗಿದೆ. ಬಿಜೆಪಿ ನೇತೃತ್ವದ ಅಲ್ಪಮತದ ಸರ್ಕಾರ ರಚನೆಯಾಗಿ ವಿಶ್ವಾಸ ಮತ ಕೇಳಿದರೆ ಆಗ ಮತದಾನದಿಂದ ದೂರ ಇರುವುದಾಗಿ ಹೇಳಿದೆ.  ‘ಸರ್ಕಾರದಲ್ಲಿ ಶಿವಸೇನಾ ಸೇರಿ­ಕೊಂಡರೆ ಅದರಿಂದ ತೊಂದರೆ ಏನಿಲ್ಲ. ನಾವು ಸರ್ಕಾರದಲ್ಲಿ ಭಾಗಿಯಾಗು­ವುದಿಲ್ಲ. ಆದರೆ ಅಲ್ಪಮತದ ಸರ್ಕಾರದ ವಿರುದ್ಧ ಮತ ಚಲಾಯಿಸಿ ರಾಜ್ಯದಲ್ಲಿ ಅಸ್ಥಿರತೆ ಉಂಟು ಮಾಡುವುದಿಲ್ಲ.  ಈ ನಿಟ್ಟಿನಲ್ಲಿ ವಿಶ್ವಾಸಮತದಿಂದ ದೂರ ಉಳಿಯಲಿದೆ’ ಎಂದು  ಎನ್‌ಸಿಪಿ ವಕ್ತಾರ ನವಾಬ್‌ ಮಲಿಕ್‌ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.