ADVERTISEMENT

ಕೇಸರಿ ಬಣ್ಣಕ್ಕೆ ತಿರುಗಿದ ಹಜ್‌ ಭವನ

​ಪ್ರಜಾವಾಣಿ ವಾರ್ತೆ
Published 5 ಜನವರಿ 2018, 19:30 IST
Last Updated 5 ಜನವರಿ 2018, 19:30 IST
ಉತ್ತರ ಪ್ರದೇಶ ಹಜ್‌ ಭವನಕ್ಕೆ ಕೇಸರಿ ಬಣ್ಣ ಬಳಿಯಲಾಗಿದೆ ಪಿಟಿಐ ಚಿತ್ರ
ಉತ್ತರ ಪ್ರದೇಶ ಹಜ್‌ ಭವನಕ್ಕೆ ಕೇಸರಿ ಬಣ್ಣ ಬಳಿಯಲಾಗಿದೆ ಪಿಟಿಐ ಚಿತ್ರ   

ಲಖನೌ: ಸರ್ಕಾರದ ಆಡಳಿತ ಕಚೇರಿಗಳು, ರಾಜ್ಯ ಸಾರಿಗೆ ನಿಗಮದ ಬಸ್‌ಗಳು, ಪಠ್ಯ ಪುಸ್ತಕಗಳು ಮತ್ತು ಶಾಲಾ ಕಟ್ಟಡಗಳ ಬಳಿಕ ಈಗ ಹಜ್‌ ಭವನಕ್ಕೂ ಉತ್ತರ ಪ್ರದೇಶ ಸರ್ಕಾರ ಕೇಸರಿ ಬಣ್ಣ ಬಳಿದಿದೆ. ಇದು ಕೆಲವು ಮುಸ್ಲಿಂ ಮೌಲ್ವಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಗುರುವಾರದವರೆಗೆ ಹಜ್‌ ಭವನದ ಗೋಡೆಗಳು ಬಿಳಿ ಮತ್ತು ಹಸಿರು ಬಣ್ಣ ಹೊಂದಿತ್ತು. ಆದರೆ ಶುಕ್ರವಾರ ಬೆಳಗ್ಗಿನ ಹೊತ್ತಿಗೆ ಅದು ಕೇಸರಿ ಬಣ್ಣಕ್ಕೆ ತಿರುಗಿದೆ.

ಹಜ್‌ ಭವನಕ್ಕೆ ಕೇಸರಿ ಬಣ್ಣ ಬಳಿಯುವ ಕೆಲಸ ಕೆಲವು ದಿನಗಳಿಂದ ನಡೆಯುತ್ತಿದೆ. ಆದರೆ ಹೊರಗಿನ ಗೋಡೆಯ ಬಣ್ಣ ಬದಲಾದ ಬಳಿಕವಷ್ಟೇ ಅದು ಜನರ ಗಮನಕ್ಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ. ವಿಧಾನಸಭಾ ಕಾರ್ಯಾಲಯ, ಆಡಳಿತ ಕಚೇರಿ ಕಟ್ಟಡದ ಸಮೀಪವೇ ಹಜ್‌ ಭವನವೂ ಇದೆ.

ADVERTISEMENT

ಬಣ್ಣ ಬದಲಾವಣೆ ದೊಡ್ಡ ವಿಚಾರವೇ ಅಲ್ಲ ಎಂದು ಬಿಜೆಪಿ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಇದು ತಮ್ಮ ಸಮುದಾಯದ ಧಾರ್ಮಿಕ ವಿಚಾರಗಳಲ್ಲಿ ನಡೆಸಿದ ‘ಹಸ್ತಕ್ಷೇಪ’ ಎಂದು ಮುಸ್ಲಿಂ ಮೌಲ್ವಿಗಳು ಹೇಳಿದ್ದಾರೆ. ಹಜ್‌ ಭವನಕ್ಕೆ ಕೇಸರಿ ಬಣ್ಣ ಬಳಿದ ಕ್ರಮವನ್ನು ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್‌ ಖಂಡಿಸಿವೆ.

‘ಕೇಸರಿ ಚೈತನ್ಯದ ಬಣ್ಣ... ಬಣ್ಣದ ಮೂಲಕ ಧರ್ಮವನ್ನು ಗುರುತಿಸಲಾಗದು’ ಎಂದಿದ್ದಾರೆ ಉತ್ತರ ಪ್ರದೇಶದ ವಕ್ಫ್‌ ಸಚಿವ ಮೊಹ್ಸಿನ್‌ ರಜಾ.

‘ಹಜ್‌ ಭವನಕ್ಕೆ ಕೇಸರಿ ಬಣ್ಣ ಕೊಡುವ ಅಗತ್ಯವೇ ಇರಲಿಲ್ಲ. ಬೇರೊಂದು ಧರ್ಮದ ಜತೆಗೆ ಕೇಸರಿ ಬಣ್ಣವನ್ನು ಗುರುತಿಸಲಾಗುತ್ತದೆ’ ಎಂದು ಮೌಲ್ವಿಯೊಬ್ಬರು ಹೇಳಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸದಾ ಕೇಸರಿ ದಿರಿಸಿನಲ್ಲಿರುತ್ತಾರೆ. ಅವರು ಅಧಿಕಾರಕ್ಕೆ ಬಂದ ಬಳಿಕ ಸರ್ಕಾರದ ಎಲ್ಲ ಯೋಜನೆಗಳಿಗೆ ಕೇಸರಿ ಬಣ್ಣ ಕೊಡಲು ಯತ್ನಿಸುತ್ತಿದ್ದಾರೆ.

ಹಿಂದೆ, ಮಾಯಾವತಿ ನೇತೃತ್ವದ ಬಿಎಸ್‌ಪಿ ಸರ್ಕಾರ ಇದ್ದಾಗ ಎಲ್ಲ ಸರ್ಕಾರಿ ಕಟ್ಟಡಗಳಿಗೆ ನೀಲಿ ಬಣ್ಣ ಕೊಡಲಾಗಿತ್ತು. ಸಾರಿಗೆ ನಿಗಮದ ಬಸ್‌ಗಳಿಗೂ ನೀಲಿ ಬಣ್ಣ ಕೊಡಲಾಗಿತ್ತು. ರಾಜ್ಯದ ವಾರ್ತಾ ಸಚಿವಾಲಯ ಹೊರತರುವ ಡೈರಿಯ ಮುಖಪುಟವನ್ನೂ ನೀಲಿ ಬಣ್ಣದಲ್ಲಿ ಮುದ್ರಿಸಲಾಗಿತ್ತು. ನೀಲಿ ಬಿಎಸ್‌ಪಿಯ ಧ್ವಜದ ಬಣ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.